Asianet Suvarna News Asianet Suvarna News

ಎನ್ ಪಿಎಸ್ ನಿಯಮ ಬದಲಾವಣೆ; ವಿತ್ ಡ್ರಾ ಪ್ರಕ್ರಿಯೆಯಲ್ಲಿ ಬ್ಯಾಂಕ್ ಖಾತೆ ಮಾಹಿತಿ ಪರಿಶೀಲನೆಗೆ ಹೊಸ ವಿಧಾನ

ಎನ್ ಪಿಎಸ್ ನಿರ್ಗಮನ ಅಥವಾ ವಿತ್ ಡ್ರಾ ನಿಯಮದಲ್ಲಿ ಪಿಎಫ್ ಆರ್ ಡಿಎ ಬದಲಾವಣೆ ತಂದಿದೆ. ಎನ್ ಪಿಎಸ್ ಖಾತೆಯಿಂದ ವಿತ್ ಡ್ರಾ  ಅಥವಾ ನಿರ್ಗಮನವಾಗಲು ಬ್ಯಾಂಕ್ ಖಾತೆ  ಮಾಹಿತಿಗಳನ್ನು ಆ ಕ್ಷಣದಲ್ಲೇ ಪರಿಶೀಲಿಸೋದು ಕಡ್ಡಾಯ.

NPS exit rule change Rules for withdrawal request updating subscribers bank account details modified by PFRDA anu
Author
First Published Oct 28, 2023, 1:34 PM IST

ನವದೆಹಲಿ (ಅ.28):  ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್ ) ನಿರ್ಗಮನ ನಿಯಮದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ಬದಲಾವಣೆ ಮಾಡಿದೆ.  ಎನ್ ಪಿಎಸ್ ಖಾತೆಯಿಂದ ವಿತ್ ಡ್ರಾ  ಅಥವಾ ನಿರ್ಗಮನವಾಗಲು ಬ್ಯಾಂಕ್ ಖಾತೆ ಮಾಹಿತಿಗಳನ್ನು ಆ ಕ್ಷಣದಲ್ಲೇ ಪರಿಶೀಲಿಸೋದು ಕಡ್ಡಾಯ. ವಿತ್ ಡ್ರಾ ಅಥವಾ ಯೋಜನೆಯಿಂದ ನಿರ್ಗಮಿಸೋ ಸಮಯದಲ್ಲಿ ಎನ್ ಪಿಎಸ್ ಹಣ ಚಂದಾದಾರರ ಬ್ಯಾಂಕ್ ಖಾತೆಗಳಿಗೆ ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಆಗೋದನ್ನು ಖಚಿತಪಡಿಸಲು ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪೆನ್ನಿ ಡ್ರಾಪ್ ವಿಧಾನದ ಮೂಲಕ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಲಾಗುತ್ತದೆ. 2023ರ ಅಕ್ಟೋಬರ್ 25ರ ಪಿಎಫ್ ಆರ್ ಡಿಎ ಸುತ್ತೋಲೆ ಅನ್ವಯ ನಿರ್ಗಮನ ಅಥವಾ ವಿತ್ ಡ್ರಾ ಮನವಿಗಳಿಗೆ ಹಾಗೂ ಚಂದಾದಾರರ ಬ್ಯಾಂಕ್ ಖಾತೆ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಹೆಸರು ಹೊಂದಾಣಿಕೆ ಜೊತೆಗೆ ಯಶಸ್ವಿ ಪೆನ್ನಿ ಡ್ರಾಪ್ ಪರಿಶೀಲನೆ ಅಗತ್ಯ. ಒಂದು ವೇಳೆ ಸಿಆರ್ ಎ ಪೆನ್ನಿ ಡ್ರಾಫ್ ದೃಢೀಕರಿಸಲು ವಿಫಲವಾದರೆ ಆಗ ನಿರ್ಗಮನ ಅಥವಾ ವಿತ್ ಡ್ರಾ ಅಥವಾ ಚಂದಾದಾರರ ಬ್ಯಾಂಕ್ ಖಾತೆ ಮಾಹಿತಿಗಳ ಮನವಿ ಬದಲಾವಣೆಗೆ ಯಾವುದೇ ಮನವಿಗಳನ್ನು ಸಲ್ಲಿಸಲು ಅವಕಾಶ ನೀಡುವುದಿಲ್ಲ. 
ಒಂದು ವೇಳೆ ಪೆನ್ನಿ ಡ್ರಾಪ್ ಪರಿಶೀಲನೆ ವಿಫಲವಾದ್ರೆ ಯಾವುದೇ ಕಾರಣಗಳನ್ನು ಕೂಡ ಲೆಕ್ಕಿಸದೆ  ಸಿಆರ್ ಎ ಈ ವಿಚಾರವನ್ನು ಸಂಬಂಧಪಟ್ಟ ಕಚೇರಿ/ ಮಧ್ಯಸ್ಥಿಕೆ ಕೇಂದ್ರಕ್ಕೆ ತಲುಪಿಸುತ್ತದೆ. ಹಾಗೆಯೇ ಪೆನ್ನಿ ಡ್ರಾಪ್ ವಿಫಲವಾಗಿರುವ ಬಗ್ಗೆ ಚಂದಾದಾರರಿಗೆ ಮೊಬೈಲ್ ಹಾಗೂ ಇ-ಮೇಲ್ ಮೂಲಕ ಸಿಆರ್ ಎ ಮಾಹಿತಿ ನೀಡುತ್ತದೆ. ಹಾಗೆಯೇ ನೋಡಲ್ ಅಧಿಕಾರಿ ಅಥವಾ ಪಿಒಪಿ ಅವರನ್ನು ಸಂಪರ್ಕಿಸುವಂತೆ ಸಲಹೆ ನೀಡುತ್ತದೆ. ಅದೇ ಸಮಯದಲ್ಲಿ ನೋಡಲ್  ಕಚೇರಿ ಅಥವಾ ಪಿಒಪಿಗೆ ಸಿಆರ್ ಎ ಪೆನ್ನಿ ಡ್ರಾಪ್ ಪರಿಶೀಲನೆ ವೈಫಲ್ಯದ ಬಗ್ಗೆ ಮಾಹಿತಿ ನೀಡುತ್ತದೆ.

'ಎಸ್ 2 ಅರ್ಜಿ ನಮೂನೆ ಮೂಲಕ ಅಥವಾ ನಿಗದಿತ ಪ್ರಕ್ರಿಯೆಗೆ ಅನುಗುಣವಾಗಿ ಸಿಆರ್ ಎ ವ್ಯವಸ್ಥೆಯಲ್ಲಿ ಮಾಹಿತಿಗಳನ್ನು ಅಪ್ಡೇಟ್ ಮಾಡುವಂತೆ  ನೋಡಲ್ ಕಚೇರಿ ಹಾಗೂ ಪಿಒಪಿಗಳಿಗೆ ಸಲಹೆ ನೀಡಲಾಗುತ್ತದೆ.  ಇದಾದ ಬಳಿಕ ಪೆನ್ನಿ ಡ್ರಾಪ್ ಪರಿಶೀಲನೆ ಮೂಲಕ ಬ್ಯಾಂಕ್ ಖಾತೆ ಮರುಪರಿಶೀಲನೆ ಸೇರಿದಂತೆ ನಿರ್ಗಮನ ಅಥವಾ ವಿತ್ ಡ್ರಾ ಪ್ರಕ್ರಿಯೆಗಳನ್ನು ಮುಂದುವರಿಸಲಾಗುತ್ತದೆ. ಸರ್ಕಾರಿ ವಲಯದಲ್ಲಿ ಚಂದಾದಾರರ ವೇತನ ಬ್ಯಾಂಕ್ ಖಾತೆಗೆ ಅವರ ವಿತ್ ಡ್ರಾ ಮನವಿ ಆಧಾರದಲ್ಲಿ ಹಣವನ್ನು ಕ್ರೆಡಿಟ್ ಮಾಡಲಾಗುತ್ತದೆ' ಎಂದು ಪಿಎಫ್ ಆರ್ ಡಿಎ (PFRDA) ತಿಳಿಸಿದೆ.

ಎನ್‌ಪಿಎಸ್‌, ಪಿಪಿಎಫ್‌ ಅಥವಾ ವಿಪಿಎಫ್‌? ನಿಮ್ಮ ಭವಿಷ್ಯಕ್ಕಾಗಿ ಹಣವನ್ನು ಎಲ್ಲಿ ಹೂಡಿಕೆ ಮಾಡ್ಬೇಕು ನೋಡಿ..

ಪೆನ್ನಿ ಡ್ರಾಪ್ ವೈಫಲ್ಯಕ್ಕೆ ಕಾರಣಗಳು
*ಹೆಸರು ಹೊಂದಾಣಿಕೆಯಾಗದಿರೋದು 
*ಖಾತೆ ನಿಷ್ಕ್ರಿಯವಾಗಿರೋದು
*ಖಾತೆ ಸಕ್ರಿಯವಾಗಿರದೆ ಇರೋದು
*ಖಾತೆ ಇಲ್ಲದಿರೋದು
*ಖಾತೆ ಕ್ಲೋಸ್ ಆಗಿರೋದು
*ಖಾತೆ ವರ್ಗಾವಣೆಯಾಗಿರೋದು
*ಕ್ರೆಡಿಟ್ ಫ್ರಿಜ್
*ಸಿಂಧುವಲ್ಲದ ಖಾತೆ ಸಂಖ್ಯೆ/ ಖಾತೆ ವಿಧ
*ಖಾತೆ ವಿಧಾನದಲ್ಲಿ ಮಿಸ್ ಮ್ಯಾಚ್ ಇತ್ಯಾದಿ

NPS vs Fixed Deposit: 30ರ ಹರೆಯದಲ್ಲಿ ಹೂಡಿಕೆಗೆ ಯಾವುದು ಬೆಸ್ಟ್? ಯಾವುದು ಉತ್ತಮ ರಿಟರ್ನ್ಸ್ ನೀಡುತ್ತೆ?

ವರ್ಷಾಶನ ಪಡೆಯಲು ಪ್ರತ್ಯೇಕ ಅರ್ಜಿ ಬೇಕಿಲ್ಲ
ಎನ್ ಪಿಎಸ್ ನಿರ್ಗಮಿಸಿದ ಬಳಿಕ ವರ್ಷಾಶನ ಪಾವತಿಗಳನ್ನು ತ್ವರಿತ ಹಾಗೂ ಸರಳಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ಎನ್ ಪಿಎಸ್ ನಿಯಮಗಳಲ್ಲಿ ಬದಲಾವಣೆ ತಂದಿದೆ. ಇದರ ಅನ್ವಯ ಎನ್ ಪಿಎಸ್ ಖಾತೆದಾರರು ವಿತ್ ಡ್ರಾ ಮಾಡಲು ನಿರ್ದಿಷ್ಟ ದಾಖಲೆಗಳನ್ನು 2023ರ ಏಪ್ರಿಲ್ 1ರಿಂದ ಅಪ್ ಲೋಡ್ ಮಾಡೋದು ಕಡ್ಡಾಯ. ಎನ್ ಪಿಎಸ್ ಖಾತೆದಾರರು ವರ್ಷಾಶನ ಖರೀದಿ ಮಾಡುವ ಪ್ರಕ್ರಿಯೆಯನ್ನು ಪಿಎಫ್ ಆರ್ ಡಿಎಯು ಐಆರ್ ಡಿಎಐ ಸಹಭಾಗಿತ್ವದಲ್ಲಿ ನಡೆಸುತ್ತದೆ. ಎನ್ ಪಿಎಸ್ ಯೋಜನೆಯಿಂದ ನಿರ್ಗಮಿಸುವ ಸಂದರ್ಭದಲ್ಲಿ ಗ್ರಾಹಕರು ನೋಡಲ್ ಅಧಿಕಾರಿಗಳಿಗೆ ಅಥವಾ ಪಿಒಪಿಎಸ್ ಗಳಿಗೆ ನೀಡುವ ಎನ್ ಪಿಎಸ್ ವಿತ್ ಡ್ರಾ ಅರ್ಜಿಯನ್ನು ಪರಿಗಣಿಸಿ ವರ್ಷಾಶನ ಸೇವಾ ಪೂರೈಕೆದಾರರು (ಎಎಸ್ ಪಿಎಸ್) ವರ್ಷಾಶನ ನೀಡುತ್ತಾರೆ.  ಈ ಹಿಂದಿನಂತೆ ಈಗ ವರ್ಷಾಶನ ಪಡೆಯಲು ಪ್ರತ್ಯೇಕ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕಾದ ಅಗತ್ಯವಿಲ್ಲ. ಕಳೆದ ವರ್ಷ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು, ಎನ್ ಪಿಎಸ್ ಗ್ರಾಹಕರು ಸಲ್ಲಿಸುವ ನಿರ್ಗಮನ ಅರ್ಜಿಯನ್ನೇ ವರ್ಷಾಶನ ಪ್ರಸ್ತಾವನೆ ನಮೂನೆ ಎಂದು ಪರಿಗಣಿಸಲಾಗುತ್ತದೆ. 
 

Follow Us:
Download App:
  • android
  • ios