ನವದೆಹಲಿ(ಅ.29): ಭಾರತದಲ್ಲಿ ಕೋಟಿ ರು. ನೀಡಿದರೂ ಕೆಲ ನಗರಗಳಲ್ಲಿ ಮನೆ ಖರೀದಿಸುವುದು ಅಸಾಧ್ಯ. ಆದರೆ, ಇಟಲಿಯಲ್ಲಿ ಒಂದು ಕಪ್‌ ಇಟಲಿಯಾನ್‌ ಕಾಫಿಯ ಬೆಲೆಗಿಂತ ಕಡಿಮೆ ದರಕ್ಕೆ ಸರ್ಕಾರವೇ ಮನೆಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಅದೂ ಐತಿಹಾಸಿಕ ಸುಂದರ ಪ್ರವಾಸಿ ತಾಣಗಳಲ್ಲಿ ಜನರಿಗೆ ಇಂತಹ ಮನೆಗಳು 1 ಡಾಲರ್‌ (ಸುಮಾರು 75 ರು.)ಗೆಲ್ಲ ಖರೀದಿಗೆ ಸಿಗುತ್ತವೆ!

ಇದಕ್ಕೆ ಕಾರಣ ಊರಿನಲ್ಲಿ ಜನಸಂಖ್ಯೆ ಕುಸಿದು ಮನೆಗಳು ಹಾಳು ಬೀಳುತ್ತಿರುವುದು. ಎಷ್ಟೋ ಊರುಗಳಲ್ಲೀಗ ಜನರೇ ಇಲ್ಲ. ಆದರೆ, ಅವರು ತೊರೆದುಹೋದ ಮನೆಗಳಿವೆ. ಇನ್ನು ಸರ್ಕಾರವೇ ಕಟ್ಟಿಸಿದ ಮನೆಗಳೂ ಸಾಕಷ್ಟಿವೆ. ಹೀಗಾಗಿ ಊರಿಗೆ ಮತ್ತೆ ಜನರನ್ನು ಆಕರ್ಷಿಸಲು ಸರ್ಕಾರ ಯಃಕಶ್ಚಿತ್‌ ಬೆಲೆಗೆ ಮನೆಗಳನ್ನು ಮಾರಾಟ ಮಾಡುತ್ತಿದೆ.

ಐತಿಹಾಸಿಕ ಸಿಸಿಲಿ ನಗರದ ಪಕ್ಕದಲ್ಲಿರುವ ಸುಂದರವಾದ ಸಲೇಮಿ ಎಂಬ ಪಟ್ಟಣದಲ್ಲಿ ಡಜನ್‌ಗಟ್ಟಲೆ ಮನೆಗಳನ್ನು ಸರ್ಕಾರ ಈ ಬೆಲೆಗೆ ಮಾರಾಟ ಮಾಡುತ್ತಿದೆ. 1960ರ ದಶಕದಲ್ಲಿ ಸಂಭವಿಸಿದ ಭಯಾನಕ ಭೂಕಂಪದಿಂದಾಗಿ ಈ ಊರಿನಿಂದ 4000ಕ್ಕೂ ಹೆಚ್ಚು ಜನರು ಬೇರೆಡೆಗೆ ವಲಸೆ ಹೋಗಿದ್ದಾರೆ. ನಂತರ ಈ ಊರಿನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಉಳಿದಿದ್ದಾರೆ.

ಕಳೆದ ವರ್ಷ ದಕ್ಷಿಣ ಇಟಲಿಯ ಸಂಬುಕಾ ಎಂಬ ಬೆಟ್ಟದ ತುದಿಯ ಊರಿನಲ್ಲೂ ಕೇವಲ 1 ಡಾಲರ್‌ಗೆ ಸರ್ಕಾರ ಸಾಕಷ್ಟುಮನೆಗಳನ್ನು ಹರಾಜು ಹಾಕಿತ್ತು. ಈ ವರ್ಷ ಇನ್ನಷ್ಟುಮುನ್ಸಿಪಾಲಿಟಿಗಳು ಮನೆಗಳನ್ನು ಹರಾಜು ಹಾಕಿ ಜನರನ್ನು ಆಕರ್ಷಿಸುತ್ತಿವೆ.