2000 ರು. ನೋಟುಗಳ ಚಲಾವಣೆಯನ್ನು ವಿತ್‌ಡ್ರಾವಲ್ ಸಮಯದಲ್ಲಿ ನಿರ್ಬಂಧಿಸಬೇಕು. ಎಟಿಎಂಗಳಲ್ಲೂ ಈ ನೋಟು ಹಾಕ ಕೂಡದು ಎಂದು ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕೊಂದು ಸೂಚಿಸಿದೆ
ನವದೆಹಲಿ (ಫೆ.08): ಕಪ್ಪುಹಣ ಕ್ರೋಡೀಕರಣಕ್ಕೆ ಕಾರಣವಾಗುತ್ತಿವೆ ಎಂದು ಹೇಳಲಾಗಿರುವ 2000 ರು. ನೋಟುಗಳ ಚಲಾವಣೆಯನ್ನು ವಿತ್‌ಡ್ರಾವಲ್ ಸಮಯದಲ್ಲಿ ನಿರ್ಬಂಧಿಸಬೇಕು. ಎಟಿಎಂಗಳಲ್ಲೂ ಈ ನೋಟು ಹಾಕ ಕೂಡದು ಎಂದು ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕೊಂದು ತನ್ನ ಉದ್ಯೋಗಿಗಳಿಗೆ ಸೂಚಿಸಿದೆ.
ಈ ಸಂಬಂಧ ಬ್ಯಾಂಕ್ ಉದ್ಯೋಗಿಗಳಿಗೆ ಬ್ಯಾಂಕ್ ಮುಖ್ಯಸ್ಥರು ಕಳಿಸಿರುವ ಇ-ಮೇಲ್ ಅನ್ನು ತಾನು ನೋಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಆದರೆ ಹಾಗಂತ ಗ್ರಾಹಕರು ಗಾಬರಿಪಡಬೇಕಿಲ್ಲ. 2000 ರು. ನೋಟುಗಳನ್ನು ಗ್ರಾಹಕರು ಜಮಾ ಮಾಡಲು ಬಂದರೆ ಸ್ವೀಕರಿಸಬೇಕು. ವಿತ್ ಡ್ರಾವಲ್‌ಗೆ ಬರುವ ಗ್ರಾಹಕರಿಗೆ ಮಾತ್ರ ಈ ನೋಟುಗಳನ್ನು ನೀಡಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಎಟಿಎಂಗಳಲ್ಲಿ 500, 200 ಹಾಗೂ 100 ರು. ನೋಟುಗಳನ್ನು ಮಾತ್ರ ತುಂಬಬೇಕು. 100 ರು. ನೋಟುಗಳ ಪೂರೈಕೆಯನ್ನು ವಿಶೇಷ ಆಂದೋಲನ ಕೈಗೊಂಡು ಹೆಚ್ಚಿಸಲಾಗುವುದು ಎಂದು ಅದು ತಿಳಿಸಿದೆ.
