3.60 ಲಕ್ಷ ಕೋಟಿ ಒಡೆಯನ ವಾರ್ಷಿಕ ವೇತನ ಇಷ್ಟೇನಾ? 11 ವರ್ಷದಿಂದ ಏರಿಕೆ ಆಗಿಲ್ಲ!
ಮುಕೇಶ್ ಅಂಬಾನಿಗೆ ವಾರ್ಷಿಕ ವೇತನವೆಷ್ಟು? ಸತತ 11 ವರ್ಷದಿಂದ ಏರಿಕೆ ಇಲ್ಲ
ನವದೆಹಲಿ[ಜು.21]: ಭಾರತದ ನಂ.1 ಮತ್ತು ವಿಶ್ವದ 13ನೇ ಶ್ರೀಮಂತ ಎಂಬ ಹಿರಿಮೆ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಸತತ 11ನೇ ವರ್ಷವೂ ತಮ್ಮ ವೇತನವನ್ನು ಏರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. 2008-09ರಿಂದ ತಾವು ಪಡೆದುಕೊಳ್ಳುತ್ತಿರುವ ವಾರ್ಷಿಕ 15 ಕೋಟಿ ರು. ವೇತನವನ್ನೇ ಅವರು ಕಳೆದ ವರ್ಷವೂ ಮುಂದುವರೆಸಿಕೊಂಡು ಹೋಗಿದ್ದಾರೆ.
2009ರಲ್ಲಿ ಭಾರತದಲ್ಲಿ ಖಾಸಗಿ ಕಂಪನಿಗಳ ಸಿಇಒಗಳ ವೇತನ ವರ್ಷ ವರ್ಷ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ವೇತನವನ್ನು 24 ಕೋಟಿ ರು. ನಿಂದ 15 ಕೋಟಿ ರು.ಗೆ ಮುಕೇಶ್ ಇಳಿಸಿಕೊಂಡಿದ್ದರು. ಬಳಿಕ ಸತತ 11ನೇ ವರ್ಷವು ಅವರು ಅದೇ ವೇತನವನ್ನು ಉಳಿಸಿಕೊಂಡು ಬಂದಿದ್ದಾರೆ.
ಕಳೆದ ವರ್ಷ ಅವರು ಪಡೆದ 15 ಕೋಟಿ ರು.ನಲ್ಲಿ, 4.5 ಕೋಟಿ ರು. ವೇತನ ಮತ್ತು ಭತ್ಯೆಯಾಗಿದೆ. 9.53 ಕೋಟಿ ರು. ಕಮೀಷನ್ ರೂಪದಲ್ಲಿ ನೀಡಲಾಗಿದೆ. ಇನ್ನು ವಿಶೇಷ ಸವಲತ್ತಿನ ರೂಪದಲ್ಲಿ 31 ಲಕ್ಷ ರು. ಹಾಗೂ ನಿವೃತ್ತಿ ಸವಲತ್ತಿನ ರೂಪದಲ್ಲಿನ 71 ಲಕ್ಷ ರು. ಸೇರಿದೆ. ಮುಕೇಶ್ ಅಂಬಾನಿ ಅವರ ಒಟ್ಟು ಆಸ್ತಿ ಮೌಲ್ಯ 3.50 ಲಕ್ಷ ಕೋಟಿ ರು.ಗಿಂತಲೂ ಹೆಚ್ಚಿದೆ.