ಮುಂಬೈ(ಜ.26): 100 ರುಪಾಯಿ, 10 ರುಪಾಯಿ ಹಾಗೂ 5 ರುಪಾಯಿ ಹಳೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಯಾವುದೇ ಪ್ರಸ್ತಾಪ ಇಲ್ಲ. ಹಿಂಪಡೆಯಲಾಗುತ್ತದೆ ಎಂಬ ವರದಿಗಳು ಸುಳ್ಳು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸೋಮವಾರ ಸ್ಪಷ್ಟಪಡಿಸಿದೆ.

‘100 ಮುಖಬೆಲೆಯ ಸ್ವಚ್ಛವಾದ ಹೊಸ ಸೀರಿಸ್‌ನ ನೋಟುಗಳು ಜನತೆಯಲ್ಲಿ ಚಲಾವಣೆಯಲ್ಲಿ ಇರುವಂತೆ ಮಾಡುವ ಉದ್ದೇಶ ಹೊಂದಿರುವ ರಿಸವ್‌ರ್‍ ಬ್ಯಾಂಕ್‌ ಹಳೆಯ ಸೀರಿಸ್‌ನ ಎಲ್ಲ ನೋಟುಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿದೆ’ ಎಂದು ಇತ್ತೀಚೆಗೆ ಮಂಗಳೂರಿನಲ್ಲಿ ಆರ್‌ಬಿಐ ಅಧಿಕಾರಿಯೊಬ್ಬರು ತಿಳಿಸಿದ್ದರು. ‘ಆದರೆ ಇದು ಈ ಹಿಂದೆ 500 ರು. ಹಾಗೂ 1000 ರು. ನೋಟುಗಳನ್ನು ರದ್ದು ಮಾಡಿದಂತೆ ಅಲ್ಲ. ಹಳೆಯ ನೋಟನ್ನು ಹಿಂಪಡೆದು ಹೊಸ ಸ್ವಚ್ಛ ನೋಟುಗಳನ್ನು ಚಲಾವಣೆಗೆ ತರುವುದೇ ಇದರ ಉದ್ದೇಶ’ ಎಂದು ಸ್ಪಷ್ಟಪಡಿಸಿದ್ದರು.

ಅವರ ಈ ಹೇಳಿಕೆಯ ಬಳಿಕ 5, 10 ಹಾಗೂ 100 ರು. ನೋಟುಗಳನ್ನು ರದ್ದುಪಡಿಸಲಾಗುತ್ತದೆ ಎಂದು ಜನರು ಮಾತಾಡಿಕೊಳ್ಳತೊಡಗಿದ್ದರು. ಈ ಹಿನ್ನೆಲೆಯಲ್ಲಿ ಆರ್‌ಬಿಐ ಈ ಸ್ಪಷ್ಟನೆ ನೀಡಿದೆ.