ನವದೆಹಲಿ[ಮಾ.17]: ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ 500 ರು. ಮತ್ತು 1000 ರು. ನೋಟುಗಳ ಅಪನಗದೀಕರಣ ಬಳಿಕ, ಬಿಡುಗಡೆ ಮಾಡಲಾದ 2000 ರು. ಮುಖಬೆಲೆಯ ನೋಟುಗಳ ಪ್ರಿಂಟಿಂಗ್‌ ಸ್ಥಗಿತಗೊಳಿಸುವ ಕುರಿತು ಈ ವರೆಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಸರ್ಕಾರ 2000 ರು. ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತಗೊಳಿಸಿದೆಯೇ? ಹಾಗೂ ಎಟಿಎಂಗಳ ಮೂಲಕ 2000 ರು. ನೋಟುಗಳ ಚಲಾವಣೆಯನ್ನು ಬಂದ್‌ ಮಾಡುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆಯೇ ಎಂಬ ಪ್ರಶ್ನೆ ಸೋಮವಾರದ ಲೋಕಸಭಾ ಕಲಾಪದಲ್ಲಿ ವ್ಯಕ್ತವಾಯಿತು. ಇದಕ್ಕೆ ಉತ್ತರಿಸಿದ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌, ‘2019-20ನೇ ಸಾಲಿನಲ್ಲಿ 2000 ರು. ಮೌಲ್ಯದ ನೋಟುಗಳ ಮುದ್ರಣ ನಿಲ್ಲಿಸಲು ಸೂಚಿಸಲಾಗಿಲ್ಲ.

ಅನಾಮಧೇಯ ಮೂಲಗಳಿಂದಲೇ ಪಕ್ಷಗಳಿಗೆ 11 ಸಾವಿರ ಕೋಟಿ ದೇಣಿಗೆ!

ಅಲ್ಲದೆ, 2000 ನೋಟುಗಳ ಚಲಾವಣೆ ಸ್ಥಗಿತಗೊಳಿಸುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿಲ್ಲ’ ಎಂದು ಹೇಳಿದರು. ಆದರೆ, 2000 ರು. ನೋಟುಗಳಿಂದ ಗ್ರಾಹಕರಿಗೆ ಚಿಲ್ಲರೆ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ, 500 ರು. ಮತ್ತು 200 ರು. ಮುಖಬೆಲೆಯ ನೋಟುಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದೇ ಕಾರಣಕ್ಕೆ ಎಸ್‌ಬಿಐ ಮತ್ತು ಇಂಡಿಯನ್‌ ಬ್ಯಾಂಕ್‌ಗಳಿಗೆ ತಮ್ಮ ಎಟಿಎಂಗಳನ್ನು 500 ರು. ಮತ್ತು 200 ರು.ಗಳಿಗೆ ಸರಿಹೊಂದುವಂತೆ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.