ದುಬೈ[ಜು.05]: ವಿದೇಶಗಳಿಗೆ ತೆರಳಿದಾಗ ಅಲ್ಲಿ, ಆ ದೇಶದ ಕರೆನ್ಸಿಗಳನ್ನೇ ಬಳಸಿ ವ್ಯವಹಾರ ನಡೆಸಬೇಕಾಗುವುದು ಅನಿವಾರ್ಯ. ಆದರೆ ಇದೇ ಮೊದಲ ಬಾರಿಗೆ ದುಬೈನ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಕರೆನ್ಸಿಯಾದ ರುಪಾಯಿ ಬಳಸಿ ವ್ಯಾಪಾರ ಮಾಡಲೂ ದುಬೈ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಹೀಗಾಗಿ ಇನ್ನು ಮುಂದೆ ಭಾರತೀಯರು ದುಬೈ ವಿಮಾನ ನಿಲ್ದಾಣಕ್ಕೆ ತೆರಳಿದಾಗ, ಅಲ್ಲಿ, ಡ್ಯೂಟಿ ಫ್ರೀ ಶಾಪ್ (ಸುಂಕ ರಹಿತ ಮಳಿಗೆ) ರುಪಾಯಿ ನೀಡಿ ವ್ಯಾಪಾರ ಮಾಡಬಹುದಾಗಿದೆ. ಇಂಥ ಸೌಲಭ್ಯ ಪಡೆದುಕೊಂಡ ವಿಶ್ವದ 16ನೇ ಕರೆನ್ಸಿ ರುಪಾಯಿ. ದುಬೈ ದೇಶಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ತೆರಳುವ ಪ್ರವಾಸಿಗರ ಪೈಕಿ ಮೊದಲ ಸ್ಥಾನದಲ್ಲಿರುವ ಭಾರತೀಯರಿಗೆ ಈ ಹೊಸ ಸವಲತ್ತು ಸಹಜವಾಗಿಯೇ ಸಾಕಷ್ಟು ಅನುಕೂಲ ಮಾಡಿಕೊಡಲಿದೆ.

ಈ ಸೌಲಭ್ಯ ಇಲ್ಲದೆ ಹೋದಲ್ಲಿ ಕರೆನ್ಸಿ ಎಕ್ಸ್‌ಚೇಂಜ್ ವೇಳೆ ಭಾರತೀಯರು ಕಮೀಷನ್ ಹಣ ಕಳೆದುಕೊಳ್ಳಬೇಕಿತ್ತು. ಆ ಪ್ರಮೇಯ ಇನ್ನು ತಪ್ಪಲಿದೆ. ಕಳೆದ ವರ್ಷ ದುಬೈಗೆ ಭೇಟಿ ನೀಡಿದ 9 ಕೋಟಿ ಪ್ರವಾಸಿಗರ ಪೈಕಿ 1.22 ಕೋಟಿ ಜನ ಭಾರತೀಯರು.