ನವದೆಹಲಿ[ಮಾ.12]: ಸಾರ್ವಜನಿಕ ವಲಯದಲ್ಲಿ ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌, ತನ್ನ ಗ್ರಾಹಕರ ಉಳಿತಾಯ ಖಾತೆಗಳಿಗೆ ನೀಡುತ್ತಿದ್ದ ಬಡ್ಡಿ ದರವನ್ನು ಪರಿಷ್ಕರಿಸಿದ್ದು ಶೇ.3ಕ್ಕೆ ಇಳಿಸಿದೆ.

ಈ ಹಿಂದೆ 1 ಲಕ್ಷ ರು.ವರೆಗಿನ ಉಳಿತಾಯ ಖಾತೆ ಠೇವಣಿಗೆ ಶೇ.3.25 ಮತ್ತು 1 ಲಕ್ಷ ರು.ಗೆ ಮೇಲ್ಪಟ್ಟಠೇವಣಿಗೆ ಶೇ.3ರಷ್ಟುಬಡ್ಡಿ ನೀಡುತ್ತಿತ್ತು. ಇನ್ನು ಮುಂದೆ ಎಲ್ಲಾ ರೀತಿಯ ಠೇವಣಿಗಳಿಗೂ ಒಂದೇ ಬಡ್ಡಿದರ ನೀಡಲು ಇದು ನಿರ್ಧರಿಸಿದೆ. ಬ್ಯಾಂಕ್‌ನ ಈ ನಿರ್ಧಾರ 44.51 ಕೋಟಿ ಉಳಿತಾಯ ಖಾತೆದಾರರ ಮೇಲೆ ಪರಿಣಾಮ ಬೀರಿದೆ.

ಎಸ್‌ಬಿಐ ಠೇವಣಿ, ಸಾಲದ ಬಡ್ಡಿದರ ಇಳಿಕೆ!

ಇದೇ ವೇಳೆ ಬ್ಯಾಂಕ್‌ ಖಾತೆಗಳಲ್ಲಿ ಮಾಸಿಕ ಸರಾಸರಿ ಕನಿಷ್ಠ ಮೊತ್ತ ಹೊಂದಿರಬೇಕು ಎಂಬ ನಿಯಮವನ್ನೂ ಕೈಬಿಡಲು ಬ್ಯಾಂಕ್‌ ನಿರ್ಧರಿಸಿದೆ. ಈವರೆಗೆ ಮೆಟ್ರೋ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಗ್ರಾಹಕರು ತಮ್ಮ ಖಾತೆಗಳಲ್ಲಿ ಮಾಸಿಕ ಸರಾಸರಿ 3000 ರು., 2000 ರು., 1000 ರು. ಹಣ ಇರಿಸಿಬೇಕಿತ್ತು. ಇಲ್ಲದೇ ಹೋದಲ್ಲಿ ಅದಕ್ಕೆ ದಂಡ ವಿಧಿಸಲಾಗುತ್ತಿತ್ತು. ಇದೀಗ ಆ ನಿಯಮ ಕೈಬಿಡಲು ನಿರ್ಧರಿಸಿದೆ.

ಜೊತೆಗೆ ಎಸ್‌ಎಂಎಸ್‌ ಶುಲ್ಕವನ್ನೂ ಕೈಬಿಡಲು ಎಸ್‌ಬಿಐ ನಿರ್ಧರಿಸಿದೆ.