ಆನ್‌ಲೈನ್ ಶಾಪಿಂಗ್‌ನಲ್ಲಿ ಜನಪ್ರಿಯ 'ನೋ ಕಾಸ್ಟ್ ಇಎಂಐ' ಕೇವಲ ಮಾರಾಟ ತಂತ್ರ. ಆರ್‌ಬಿಐ ಪ್ರಕಾರ ಇದು ಅಸ್ತಿತ್ವದಲ್ಲೇ ಇಲ್ಲ. ಕಂಪನಿಗಳು ಬಡ್ಡಿಯನ್ನು ಉತ್ಪನ್ನದ ಬೆಲೆಯಲ್ಲಿ ಸೇರಿಸಿ, ರಿಯಾಯಿತಿ ನೀಡುವಂತೆ ಭಾಸವಾಗುವಂತೆ ಮಾಡುತ್ತವೆ ಅಥವಾ ಗುಪ್ತ ಶುಲ್ಕ ವಿಧಿಸುತ್ತವೆ. ಗ್ರಾಹಕರು ಜಿಎಸ್‌ಟಿ ಸೇರಿ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಖರೀದಿಗೆ ಮುನ್ನ ಬೆಲೆಗಳನ್ನು ಹೋಲಿಸುವುದು ಉತ್ತಮ.

ಡಿಜಿಟಲ್ (Digital) ಯುಗದಲ್ಲಿ ಆನ್ಲೈನ್ (Online) ನಲ್ಲಿ ಏನು ಸಿಗೋದಿಲ್ಲ ಹೇಳಿ? ಮನೆ ಸಾಮಗ್ರಿಯಿಂದ ಹಿಡಿದು ಬಟ್ಟೆ, ಆಹಾರ ಪದಾರ್ಥದವರೆಗೆ ಎಲ್ಲವೂ ಲಭ್ಯ. ಅಮೇಜಾನ್, ಪ್ಲಿಪ್ ಕಾರ್ಟ್, ಮಿಂತ್ರಾ, ಮಿಶೋ ಸೇರಿದಂತೆ ಅನೇಕ ಇ ಕಾಮರ್ಸ್ ವೆಬ್ಸೈಟ್ ತಲೆ ಎತ್ತಿದ್ದು, ಎಲ್ಲದ್ರಲ್ಲೂ ಆಫರ್ (offer) ಅಬ್ಬರ ಹೆಚ್ಚು. ಹಬ್ಬ ಬಂತೆಂದ್ರೆ ಈ ಆಫರ್ ಜೋರಾಗುತ್ತೆ. ಫ್ರಿಜ್, ಮೊಬೈಲ್, ಟಿವಿ ಸೇರಿದಂತೆ ದುಬಾರಿ ವಸ್ತುಗಳಿಗೆ ನೋ ಕಾಸ್ಟ್ ಇಎಂಐ ಜಾಹೀರಾತನ್ನು ಕಂಪನಿಗಳು ನೀಡುತ್ವೆ. ಆನ್ಲೈನ್ ನಲ್ಲಿ ವಸ್ತು ಖರೀದಿ ಮಾಡಿದ್ರೆ ನೋ ಕಾಸ್ಟ್ ಇಎಂಐ ಲಭ್ಯವಿದೆ ಅಂತಾ ನಾವೆಲ್ಲ ಆನ್ಲೈನ್ ಶಾಪಿಂಗ್ ಮೊರೆ ಹೋಗ್ತೇವೆ. ನಿಜವಾಗ್ಲೂ ನಮಗೆ ಇದ್ರಿಂದ ಲಾಭ ಇದ್ಯಾ? ಕಂಪನಿ ನಮಗೆ ನೋ ಕಾಸ್ಟ್ ಇಎಂಐನಲ್ಲಿ ವಸ್ತುಗಳನ್ನ ನೀಡುತ್ತಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. 

ನೋ ಕಾಸ್ಟ್ ಇಎಂಐ (No Cost EMI) ಎಂದರೇನು? : ನಾವು ಖರೀದಿಸಿ ವಸ್ತುವಿನ ಹಣವನ್ನು ಹಂತ ಹಂತವಾಗಿ ಹಿಂತಿರುಗಿಸೋದನ್ನು ಇಎಂಐ ಅಂತ ಕರೆಯಲಾಗುತ್ತದೆ. ನಿಗದಿತ ಅವಧಿಯಲ್ಲಿ ಸರಕುಗಳ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದಕ್ಕೆ ಬಡ್ಡಿ ಸೇರಿಸಲಾಗುತ್ತದೆ. ಆದ್ರೆ ಗ್ರಾಹಕರಿಗೆ ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆ ನೀಡಿದಾಗ, ಖರೀದಿಸಿದ ಸರಕುಗಳಿಗೆ ಮಾತ್ರ ಇಎಂಐ ರೂಪದಲ್ಲಿ ಹಣವನ್ನು ಪಾವತಿಸಬೇಕಾಗುತ್ತದೆ. ಕಂಪನಿಯ ಪ್ರಕಾರ, ನೋ ಕಾಸ್ಟ್ ಇಎಂಐನಲ್ಲಿ ಖರೀದಿಸಿದ ವಸ್ತುಗಳಿಗೆ ಯಾವುದೇ ಬಡ್ಡಿ ಪಾವತಿಸಬೇಕಾಗಿಲ್ಲ. ಆದ್ರೆ ಇಎಂಐ ಜೊತೆ ನೀವು ಬಡ್ಡಿ ಪಾವತಿಸಿಲ್ಲ ಎಂದ್ರೂ ಕಂಪನಿ ಗ್ರಾಹಕರಿಗೆ ಗುಪ್ತ ಬಡ್ಡಿ ವಿಧಿಸುತ್ತದೆ. 

ನೋ ಕಾಸ್ಟ್ ಇಎಂಐ ಇಲ್ವೇ ಇಲ್ಲ : ನಿಜ ಹೇಳ್ಬೇಕೆಂದ್ರೆ ನೋ ಕಾಸ್ಟ್ ಇಎಂಐ ಎಂಬ ಪರಿಕಲ್ಪನೆಯೇ ಇಲ್ಲ. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸ್ವತಃ ಹೇಳಿದೆ. ಆರ್ಬಿಐ 2013 ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ, ನೋ ಕಾಸ್ಟ್ ಇಎಂಐ ಇಲ್ಲ ಎಂದಿದೆ. ನೋ ಕಾಸ್ಟ್ ಇಎಂಐ ಇ-ಕಾಮರ್ಸ್ ಕಂಪನಿಗಳ ಒಂದು ತಂತ್ರ. ಇದರಿಂದ ಹೆಚ್ಚು ಹೆಚ್ಚು ಸರಕುಗಳನ್ನು ಮಾರಾಟ ಮಾಡಬಹುದು. ಈ ಯೋಜನೆ ಸಾಮಾನ್ಯವಾಗಿ 3 ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಮೊದಲ ವಿಧಾನ : ಯಾವುದೇ ವೆಚ್ಚವಿಲ್ಲದ ಇಎಂಐಯ ಉತ್ಪನ್ನವನ್ನು ಪೂರ್ಣ ಬೆಲೆಗೆ ಖರೀದಿಸಬೇಕು. ಇದರಲ್ಲಿ ಕಂಪನಿಗಳು ಗ್ರಾಹಕರಿಗೆ ನೀಡುವ ರಿಯಾಯಿತಿಯನ್ನು ಬಡ್ಡಿಯ ರೂಪದಲ್ಲಿ ಬ್ಯಾಂಕಿಗೆ ನೀಡುತ್ತವೆ. 

ಎರಡನೇ ವಿಧಾನ : ನೋ ಕಾಸ್ಟ್ ಇಎಂಐ ಹೆಸರಿನಲ್ಲಿ ಕಂಪನಿ ವಸ್ತುಗಳನ್ನು ನೀಡುವ ಮೊದಲೇ ಉತ್ಪನ್ನದ ಬೆಲೆಯಲ್ಲಿ ಬಡ್ಡಿ ಮೊತ್ತವನ್ನು ಸೇರಿಸಿರುತ್ತದೆ.

ಮೂರನೇ ವಿಧಾನ : ಕಂಪನಿ ಮಾರಾಟವಾಗದ ಉತ್ಪನ್ನವನ್ನು ಮಾರಾಟ ಮಾಡಲು ನೋ ಕಾಸ್ಟ್ ಇಎಂಐ ಸಹಾಯ ಪಡೆಯುತ್ತದೆ. ಇದಕ್ಕೆ ಸೇವಾ ಶುಲ್ಕ ಅಥವಾ ನಿರ್ವಹಣಾ ಶುಲ್ಕ ಸೇರಿಸುತ್ತದೆ. ವಾಸ್ತವದಲ್ಲಿ ಅದು ಬಡ್ಡಿಯೇ. 

ಗ್ರಾಹಕರಿಗೆ ಏನು ನಷ್ಟ? : ನೋ ಕಾಸ್ಟ್ ಇಎಂಐ ಎಂದು ಜನರು ವಸ್ತುಗಳನ್ನು ಖರೀದಿ ಮಾಡ್ತಾರೆ. ಆದ್ರೆ ಬಿಲ್ ನಲ್ಲಿ ಕಂಪನಿ ಸೇರಿಸುವ ಸಂಸ್ಕರಣಾ ಶುಲ್ಕವನ್ನು ನಿರ್ಲಕ್ಷ್ಯ ಮಾಡ್ತಾರೆ. ಕಂಪನಿ ಬಡ್ಡಿ ಮೊತ್ತದ ಮೇಲೆ ರಿಯಾಯಿತಿ ನೀಡಿದ್ದರೂ, ಇಎಂಐ ಸೌಲಭ್ಯ ಪಡೆದಾಗ ಪ್ರತಿ ತಿಂಗಳು ಬಡ್ಡಿಯ ಮೇಲೆ ಶೇಕಡಾ 18ರಷ್ಟು ಜಿಎಸ್ ಡಿಯನ್ನು ಪಾವತಿಸುತ್ತದೆ. ಇದು ನಿಮಗೆ ನಷ್ಟ. ಯಾವುದೇ ವಸ್ತುವನ್ನು ನೋ ಕಾಸ್ಟ್ ಇಎಂಐನಲ್ಲಿ ಖರೀದಿಸುವ ಮೊದಲು, ಇತರ ಇ-ಕಾಮರ್ಸ್ ಸೈಟ್ಗಳಲ್ಲಿ ಅಥವಾ ಆಫ್ಲೈನ್ನಲ್ಲಿ ಆ ವಸ್ತುವಿನ ಬೆಲೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.