ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ಹಾಗೂ ಉದ್ಯಮಿ ನೀತಾ ಅಂಬಾನಿ ಏನೇ ಮಾಡಿದ್ರೂ ಸುದ್ದಿಯಾಗ್ತಾರೆ. ಈಗವರು ಬೌನ್ಸರ್ಸ್ ವಿಷ್ಯಕ್ಕೆ ಸುದ್ದಿಗೆ ಬಂದಿದ್ದಾರೆ. ನೀತಾ ಅಂಬಾನಿ ಹಿಂದೆ ಮಹಿಳಾ ಬಾಡಿಗಾರ್ಡ್ಸ್ ಕಾಣಿಸಿಕೊಂಡಿದ್ದು, ಅವರ ಸಂಬಳದ ಬಗ್ಗೆ ಮಾಹಿತಿ ಇಲ್ಲಿದೆ.
ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಶಿಕ್ಷಣ, ಉದ್ಯಮ, ಕ್ರೀಡೆ, ವಿಜ್ಞಾನ ಮಾತ್ರವಲ್ಲದೆ, ಈ ಹಿಂದೆ ಪುರುಷರ ಪ್ರಾಬಲ್ಯ ಹೆಚ್ಚಾಗಿದ್ದ ಭದ್ರತಾ ಕ್ಷೇತ್ರದಲ್ಲೂ ಮಹಿಳೆಯರು ಮುಂಚೂಣಿಗೆ ಬರುತ್ತಿದ್ದಾರೆ. ಇದಕ್ಕೆ ಉದ್ಯಮಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರ ಭದ್ರತಾ ತಂಡಕ್ಕೆ ಮಹಿಳಾ ಬೌನ್ಸರ್ಗಳನ್ನು ನೇಮಕ ಮಾಡಿರುವ ಸುದ್ದಿ ಮತ್ತೊಂದು ಉದಾಹರಣೆಯಾಗಿದೆ.
ಮಹಿಳಾ ಬೌನ್ಸರ್ಗಳಿಗೆ ಎಷ್ಟು ಸಂಬಳ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ನೀತಾ ಅಂಬಾನಿ ಅವರ ವೈಯಕ್ತಿಕ ಭದ್ರತೆಗಾಗಿ ಇಬ್ಬರು ಮಹಿಳಾ ಬೌನ್ಸರ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅನೇಕ ಫೋಟೋಗಳಲ್ಲಿ ನೀತಾ ಹಿಂಭಾಗದಲ್ಲಿ ಈ ಮಹಿಳಾ ಬೌನ್ಸರ್ ಗಳನ್ನು ನೀವು ಕಾಣ್ಬಹುದು. ಇವರಿಗೆ ತಿಂಗಳಿಗೆ 80 ಸಾವಿರ ರೂಪಾಯಿಯಿಂದ 1.25 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತಿದೆ. ಆದರೆ ಈ ನೇಮಕಾತಿ ಮತ್ತು ಸಂಬಳದ ಅಂಕಿಅಂಶಗಳನ್ನು ರಿಲಯನ್ಸ್ ಸಂಸ್ಥೆಯಾಗಲಿ, ನೀತಾ ಅಂಬಾನಿ ಅವರ ಅಧಿಕೃತ ಮೂಲಗಳಾಗಲಿ ದೃಢಪಡಿಸಿಲ್ಲ.
ಮಹಿಳೆಯರಿಗೆ ಹೆಚ್ಚುತ್ತಿದೆ ಅವಕಾಶ
ಮಹಿಳೆಯರು ಬೌನ್ಸರ್ಗಳಾಗಿ ಕೆಲಸ ಮಾಡುವುದು ಹೊಸತೇನಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. ಪುರುಷರಂತೆ ಮಹಿಳೆಯರೂ ದೈಹಿಕ ಸಾಮರ್ಥ್ಯ, ಸಮಯಪ್ರಜ್ಞೆ, ಶಿಸ್ತು ಮತ್ತು ತರಬೇತಿಯ ಮೂಲಕ ಭದ್ರತಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೆ ಕೇರಳದ ಮಹಿಳಾ ಬೌನ್ಸರ್ ಅನು ಕುಂಜುಮೋನ್ ಅವರೇ ಒಂದು ಉದಾಹರಣೆ. 2025ರ ಮಾರ್ಚ್ನಲ್ಲಿ ನಟ ಮೋಹನ್ಲಾಲ್ ಅವರ ಭದ್ರತಾ ತಂಡದಲ್ಲಿ ಕಾಣಿಸಿಕೊಂಡ ಬಳಿಕ ಅವರು ಸುದ್ದಿಯಾಗಿದ್ದರು. ಛಾಯಾಗ್ರಹಣ ಕ್ಷೇತ್ರದಿಂದ ಭದ್ರತಾ ವೃತ್ತಿಗೆ ಬಂದ ಅವರು, ಸೆಲೆಬ್ರಿಟಿಗಳ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿಯಂತ್ರಣ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.
ಮಹಿಳಾ ಸಬಲೀಕರಣಕ್ಕೆ ಮತ್ತೊಂದು ವೇದಿಕೆ
ಭದ್ರತಾ ಸಿಬ್ಬಂದಿ ಎಂದರೆ ಎತ್ತರದ ಮೈಕಟ್ಟು, ಗಂಭೀರ ಮುಖಭಾವ ಹೊಂದಿರುವ ಪುರುಷರು ಎಂಬ ಕಲ್ಪನೆ ಈಗ ಬದಲಾಗುತ್ತಿದೆ. ಮಹಿಳೆಯರೂ ಈ ವೃತ್ತಿಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲರು ಎಂಬುದನ್ನು ಇಂತಹ ಬೆಳವಣಿಗೆಗಳು ತೋರಿಸುತ್ತವೆ. ವಿಶೇಷವಾಗಿ ಮಹಿಳಾ ಸೆಲೆಬ್ರಿಟಿಗಳು, ಗಣ್ಯ ಮಹಿಳೆಯರು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯ ಅಗತ್ಯವೂ ಹೆಚ್ಚುತ್ತಿದೆ. ಮಹಿಳೆಯರ ಸುರಕ್ಷತೆ, ತಪಾಸಣೆ ಮತ್ತು ವೈಯಕ್ತಿಕ ಭದ್ರತೆಯ ದೃಷ್ಟಿಯಿಂದಲೂ ಮಹಿಳಾ ಬೌನ್ಸರ್ಗಳ ಪಾತ್ರ ಮಹತ್ವದ್ದಾಗಿದೆ.














