Asianet Suvarna News Asianet Suvarna News

ಭಾರತದ ಸಾಧನೆ ಬಗ್ಗೆ ಹೆಚ್ಚು ಸಕಾರಾತ್ಮಕವಾಗಿರಿ: ನಿರ್ಮಲಾ ಸೀತಾರಾಮನ್

*ಇತ್ತೀಚಿನ ದಿನಗಳಲ್ಲಿ ಪರಿಸರ ಹಾಗೂ ಕೃಷಿ ಕ್ಷೇತ್ರದ ಬಗ್ಗೆ ಗಮನ ಹರಿಸೋದು ಶ್ಲಾಘನೀಯ ಎಂದ ವಿತ್ತ ಸಚಿವೆ
*ಪ್ರಶಸ್ತಿ ವಿವಿಧ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ತೆರೆದಿಡುತ್ತವೆ
*ಕೃಷಿ ಉತ್ಪನ್ನಗಳ ಬಳಕೆ ಕುರಿತ ನಿಲುವು ಬದಲಾಗಬೇಕಿದೆ

Nirmala Sitharaman urges people to be more positive about Indias achievements
Author
First Published Sep 10, 2022, 9:26 PM IST

ನವದೆಹಲಿ (ಸೆ.10): ಭಾರತದ ಸಾಧನೆಯ ಬಗ್ಗೆ ಹೆಚ್ಚು ಸಕಾರಾತ್ಮಕವಾಗಿರುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜನರಲ್ಲಿ ಮನವಿ ಮಾಡಿದ್ದಾರೆ. ಬ್ಯುಸಿನೆಸ್ ಲೈನ್ ಚೇಂಜ್ ಮೇಕರ್ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ವಿಜೇತರನ್ನು ತುರ್ತು ಗಮನದ ಅಗತ್ಯವಿರುವ ವಲಯಗಳಲ್ಲಿನ ಸ್ಫೂರ್ತಿದಾಯಕ ಕೆಲಸಗಳಿಗೆ ನಿದರ್ಶನವಾಗಿ ಪರಿಗಣಿಸಬೇಕು ಎಂದರು. 'ನಾವೆಲ್ಲರೂ ದೇಶಕ್ಕಾಗಿ ನಾವೇನು ಮಾಡಿದ್ದೇವೆ ಎಂಬುದನ್ನು ಯೋಚಿಸಲು ನಮ್ಮೊಳಗೆ ಒಂದಿಷ್ಟು ಸಮಯ ನೀಡಬೇಕು. ಒಂದು ವೇಳೆ ನಿಮಗೆ ದೇಶಕ್ಕಾಗಿ ಸೇವೆ ಮಾಡಲು ಅವಕಾಶ ಸಿಗದಿದ್ದರೂ ಚಿಂತೆಯಿಲ್ಲ, ಆದರೆ, ಎಂದೂ ದೇಶಕ್ಕೆ ಅವಮಾನ ಮಾಡಬೇಡಿ. ಹಾಗೆಯೇ ನಿಮ್ಮಲ್ಲಿರುವ ವಿಷಯುಕ್ತ ವಿಚಾರಗಳನ್ನು ಹರಡಬೇಡಿ  ಎಂದು ಸಚಿವೆ ಮನವಿ ಮಾಡಿದರು. 'ನಾವೆಲ್ಲರೂ ಸಕಾರಾತ್ಮಕವಾಗಿರಬೇಕಾದ ಸಮಯ ಇದು. ನಾವು ಯಾವುದಾದರೊಂದು ಕೆಲಸದಲ್ಲಿ ತೊಡಗಬೇಕು. ಈ ಪ್ರಶಸ್ತಿ ವಿಜೇತರು ಮಾಡಿದ ಅದ್ಭುತ ಕೆಲಸಗಳನ್ನು ನೋಡಿ. ನಾವು ನಾಳೆ ಇವರನ್ನು ಮರೆಯುತ್ತೀವಾ? ಈ ದೇಶದಲ್ಲಿ ಏನೂ ಆಗಿಲ್ಲವೆಂದು ಹೇಳುತ್ತೇವೆಯಾ? ದೇಶದಲ್ಲಿ ಎಲ್ಲ ಬೆಳವಣಿಗೆಗಳು ಆಗುತ್ತಿರುತ್ತವೆ ಎಂದು ನಿರ್ಮಲಾ ಸೀತಾರಮನ್ ಹೇಳಿದರು. 
'ನಿಮ್ಮ ಕಥೆಗಳು ಗಮನಾರ್ಹ ಹಾಗೂ ಅತ್ಯಂತ ಸ್ಫೂರ್ತಿದಾಯಕ. ಇತ್ತೀಚಿನ ದಿನಗಳಲ್ಲಿ ಒಂದಷ್ಟು ಬದಲಾವಣೆಯ ಹರಿಕಾರರು ಕೃಷಿ ಹಾಗೂ ಪರಿಸರದ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸೋದನ್ನು ನೋಡಬಹುದು. ಈ ವಲಯಗಳಲ್ಲಿ ನಾವು ಸಾಕಷ್ಟು ಬದಲಾವಣೆ ಮಾಡಬೇಕಿದೆ' ಎಂದು ವಿತ್ತ ಸಚಿವೆ ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಅವರು ಆರು ವಿವಿಧ ವರ್ಗಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಗಳನ್ನು ನೀಡಿದರು. 

ಪ್ರಶಸ್ತಿ ನೀಡಿ ಗೌರವಿಸೋದು ಮೊದಲ ಹೆಜ್ಜೆಯಾಗಿದ್ದು, ಇವು ಈ ವಲಯಗಳಲ್ಲಿನ ಸಮಸ್ಯೆಗಳಿಗೆ ಕೂಡ ಪರಿಹಾರಗಳಿದ್ದು, ಅದನ್ನು ಪ್ರೋತ್ಸಾಹಿಸಬೇಕು ಎಂಬುದನ್ನು ತೋರಿಸುತ್ತದೆ. ಇದ್ರಿಂದ ಆ ಕ್ಷೇತ್ರ ಎಲ್ಲರಿಗೂ ಸಾಮಾನ್ಯ ಆಯ್ಕೆಯಾಗುತ್ತದೆ. ನಾವು ಹೇಗೆ ಜೀವಿಸಬೇಕು, ಕೃಷಿ ಉತ್ಪನ್ನಗಳನ್ನು ಹೇಗೆ ಬಳಸಬೇಕು ಎಂಬ ಕುರಿತಾದ ನಮ್ಮ ನಿಲುವುಗಳನ್ನು ಬದಲಿಸಿಕೊಳ್ಳಬೇಕಿದೆ. ದಶಕಗಳಿಂದ ಕೃಷಿ ಕ್ಷೇತ್ರದಲ್ಲಿನ ಕೀಟನಾಶಕಗಳ ಬಳಕೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ' ಎಂದು ಸಚಿವೆ ಈ ಸಂದರ್ಭದಲ್ಲಿ ತಿಳಿಸಿದರು.

ಏರ್ ಇಂಡಿಯಾದ ಎಲ್ಲ ಏರ್ ಲೈನ್ಸ್ ಗಳಿಗೂ ಇನ್ಮುಂದೆ ಗುರುಗ್ರಾಮ ಕೇಂದ್ರ ಕಚೇರಿ!

ಹಿಂದೂ ಗ್ರೂಪ್ ಆಫ್ ಪಬ್ಲಿಕೇಷನ್ಸ್ ಮುಖ್ಯಸ್ಥೆ ಮಾಲಿನಿ ಪಾರ್ಥಸಾರಥಿ 'ಬ್ಯುಸಿನೆಸ್ ಲೈನ್ ಬದಲಾವಣೆ ಹರಿಕಾರ ಪ್ರಶಸ್ತಿಯ ನಾಲ್ಕನೇ ಆವೃತ್ತಿ ನಮ್ಮ ಸಮಾಜ ಹಾಗೂ ಆರ್ಥಿಕತೆಯಲ್ಲಿ ಪರಿಣಾಮಕಾರಿ ಬದಲಾವಣೆ ತರಲು ನೆರವು ನೀಡುವವರನ್ನು ಗುರುತಿಸುವ ಉದ್ದೇಶ ಹೊಂದಿತ್ತು' ಎಂದರು. 'ಇತರ ಕಾರ್ಪೋರೇಟ್ ಪ್ರಶಸ್ತಿಗಳಿಗಿಂತ ಈ ಪ್ರಶಸ್ತಿಗಳು ಭಿನ್ನವಾಗಿವೆ. ಇತರ ಕಾರ್ಪೋರೇಟ್ ಪ್ರಶಸ್ತಿಗಳು ಕಾರ್ಪೋರೇಟ್ ಅಥವಾ ಹಣಕಾಸಿನಲ್ಲಿ ಯಶಸ್ವಿಯಾದವರನ್ನು ಗೌರವಿಸುತ್ತವೆ. ಆದರೆ, ಈ ಪ್ರಶಸ್ತಿಗಳು ಸಾಮಾಜಿಕ ಆರ್ಥಿಕ ಬದಲಾವಣೆಗೆ ಕಾರಣರಾದ ನಿಜವಾದ ಸುಧಾರಕರನ್ನು ಗೌರವಿಸುತ್ತವೆ. ಇವರು ಅವರ ಕಾರ್ಯಗಳು ನಮ್ಮ ಬದುಕಿನ ಗುಣಮಟ್ಟದ ಮೇಲೆ ಪರಿಣಾಮಕಾರಿ ಪ್ರಭಾವ ಬೀರಬಲ್ಲವು' ಎಂದು ಅವರು ಹೇಳಿದರು. 
'ಇದು ಮಾಧ್ಯಮವಾಗಿ ನಮ್ಮ ಪ್ರಧಾನ ಮೌಲ್ಯಗಳಲ್ಲಿ ಒಂದಾಗಿದೆ. ನಾವು ಯಾವುದೇ ಉದ್ಯಮ ಅಥವಾ ಕಾರ್ಪೋರೇಟ್ ಹಿತಾಸಕ್ತಿಗಳೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಹೆಮ್ಮೆಯಿಂದ ಹೇಳಬಲ್ಲೆವು ಎಂದು ಮಾಲಿನಿ ಪಾರ್ಥಸಾರಥಿ ತಿಳಿಸಿದರು. 

ಐಟಿ ಸರ್ವೇ ಸಂದರ್ಭದಲ್ಲಿ ಸರ್ವರ್, ಹಿರಿಯ ಅಧಿಕಾರಿಗಳ ಮೊಬೈಲ್ ಕ್ಲೋನಿಂಗ್ : ಆಕ್ಸ್‌ಫಾಮ್‌ ಇಂಡಿಯಾ ಆರೋಪ

ಭಾರತದ ಆರ್ಥಿಕತೆಗೆ ಹೊಸರೂಪ ನೀಡುವಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬದ್ಧತೆ ಹಾಗೂ ಕಾರ್ಯನಿರ್ವಹಣೆಯನ್ನು ಈ ಸಂದರ್ಭದಲ್ಲಿ ಮಾಲಿನಿ ಪಾರ್ಥಸಾರಥಿ ಶ್ಲಾಘಿಸಿದರು. 'ಭಾರತ ಜಗತ್ತಿನ ಐದನೇ ದೊಡ್ಡ ಆರ್ಥಿಕತೆಯಾಗಿ ಬೆಳೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ನಿರ್ಮಲಾ ಸೀತಾರಾಮನ್ ಅವರಿಗೂ ಗೌರವ ಸಿಗಬೇಕು' ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. 

Follow Us:
Download App:
  • android
  • ios