ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 8 ರು. ಹಾಗೂ ಡೀಸೆಲ್‌ ಮೇಲಿನ ಸುಂಕವನ್ನು 6 ರು. ಕಡಿತ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು, ‘ಇದು ಯಾತಕ್ಕೂ ಸಾಲದು’ ಎಂದು ಟೀಕಿಸುತ್ತಿರುವ ಕಾಂಗ್ರೆಸ್‌ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಭಾನುವಾರ ತಿರುಗೇಟು ನೀಡಿದ್ದಾರೆ.

ನವದೆಹಲಿ (ಮೇ.23): ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 8 ರು. ಹಾಗೂ ಡೀಸೆಲ್‌ ಮೇಲಿನ ಸುಂಕವನ್ನು 6 ರು. ಕಡಿತ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು, ‘ಇದು ಯಾತಕ್ಕೂ ಸಾಲದು’ ಎಂದು ಟೀಕಿಸುತ್ತಿರುವ ಕಾಂಗ್ರೆಸ್‌ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಭಾನುವಾರ ತಿರುಗೇಟು ನೀಡಿದ್ದಾರೆ. 2004ರಿಂದ 2014ರವರೆಗೆ ಅಭಿವೃದ್ಧಿ ಹಾಗೂ ಸಬ್ಸಿಡಿಗೆ ಯುಪಿಎ ಮಾಡಿದ ಖರ್ಚಿಗಿಂತ 2014ರಿಂದ 2022ರವರೆಗೆ ನರೇಂದ್ರ ಮೋದಿ ಸರ್ಕಾರ ಮಾಡಿದ ವೆಚ್ಚ ಹೆಚ್ಚೂ ಕಡಿಮೆ 2 ಪಟ್ಟು ಹೆಚ್ಚಿದೆ ಎಂದು ಅಂಕಿ-ಅಂಶ ಸಮೇತ ತಿರುಗೇಟು ನೀಡಿದ್ದಾರೆ.

2020ರ ಮೇ 1ರಿಂದ 2022ರವರೆಗಿನ ಪೆಟ್ರೋಲ್‌ ಬೆಲೆಯನ್ನು ಭಾನುವಾರ ಪ್ರಸ್ತಾಪಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಹೆಸರಿನಲ್ಲಿ ಬಿಜೆಪಿ ಜನರನ್ನು ವಂಚಿಸುತ್ತಿದೆ. ಇದೊಂದು ಜನರನ್ನು ಮರಳು ಮಾಡುವ ತಂತ್ರವಾಗಿದೆ. ಹಣದುಬ್ಬರ ದಾಖಲೆ ಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಜನರಿಗೆ ನೈಜ ಪರಿಹಾರ ದೊರೆಯಬೇಕಿದೆ. ಸರ್ಕಾರ ಜನರನ್ನು ಮೂರ್ಖರನ್ನಾಗಿಸುವುದನ್ನು ನಿಲ್ಲಿಸಬೇಕು’ ಎಂದಿದ್ದರು. ಅಲ್ಲದೆ, ‘ಇನ್ನು ಪೆಟ್ರೋಲ್‌ ಬೆಲೆ ನಿತ್ಯ 80 ಪೈಸೆ, 30 ಪೈಸೆಯಂತೆ ವಿಕಾಸವಾಗಲಿದೆ’ ಎಂದು ಲೇವಡಿ ಮಾಡಿದ್ದರು.

ಕಬ್ಬಿಣ, ಉಕ್ಕು, ಸಿಮೆಂಟ್‌ ಮತ್ತಷ್ಟುಅಗ್ಗ, ಪ್ಲಾಸ್ಟಿಕ್‌ ಆಮದು ಸುಂಕವೂ ಕಡಿತ!

ಈ ಬಗ್ಗೆ ನಿರ್ಮಲಾ ಅವರು ಸರಣಿ ಟ್ವೀಟ್‌ಗಳನ್ನು ಮಾಡಿ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ. ‘2014ರಿಂದ 2022ರವರೆಗೆ ಮೋದಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ 90.09 ಲಕ್ಷ ಕೋಟಿ ರು. ಖರ್ಚು ಮಾಡಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ 2004ರಿಂದ 2014ವರೆಗೆ ಅಧಿಕಾರದಲ್ಲಿದ್ದ ಮನಮೋಹನ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಕೇವಲ 49.2 ಲಕ್ಷ ಕೋಟಿ ರು. ವೆಚ್ಚ ಮಾಡಿತ್ತು ಎಂದು ನಿರ್ಮಲಾ ಟ್ವೀಟ್‌ ಮಾಡಿದ್ದಾರೆ. ಇದರಿಂದ 10 ವರ್ಷದಲ್ಲಿ ಯುಪಿಎ ಮಾಡಿದ ಅಭಿವೃದ್ಧಿ ವೆಚ್ಚಕ್ಕಿಂತ ಎನ್‌ಡಿಎ ಸರ್ಕಾರದ ವೆಚ್ಚ 8 ವರ್ಷದಲ್ಲಿ ಹೆಚ್ಚೂ ಕಮ್ಮಿ ದುಪ್ಪಟ್ಟಾಗಿದೆ’ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

‘ಇನ್ನು ಆಹಾರ, ಇಂಧನ ಹಾಗೂ ರಸಗೊಬ್ಬರಕ್ಕಾಗಿ 24.85 ಲಕ್ಷ ಕೋಟಿ ರು.ಗಳನ್ನು 8 ವರ್ಷದಲ್ಲಿ ಮೋದಿ ಸರ್ಕಾರ ಸಬ್ಸಿಡಿಗಾಗಿ ವೆಚ್ಚ ಮಾಡಿದೆ. ಬಂಡವಾಳ ಸೃಷ್ಟಿಗಾಗಿ 26.3 ಲಕ್ಷ ಕೋಟಿ ರು. ಖರ್ಚು ಮಾಡಿದೆ. ಆದರೆ 10 ವರ್ಷದಲ್ಲಿ ಯುಪಿಎ ಸರ್ಕಾರ ಕೇವಲ 13.9 ಲಕ್ಷ ಕೋಟಿ ರು.ಗಳನ್ನು ಸಬ್ಸಿಡಿಗೆ ವೆಚ್ಚ ಮಾಡಿತ್ತು’ ಎಂದು ತಿರುಗೇಟು ನೀಡಿದ್ದಾರೆ.

ಅಲ್ಲದೆ, ‘ಶನಿವಾರ ತೈಲ ಅಬಕಾರಿ ಸುಂಕ ಕಡಿತ ಮಾಡಿದ್ದರಿಂದ ಸರ್ಕಾರಕ್ಕೆ 1 ಲಕ್ಷ ಕೋಟಿ ರು. ಹೊರೆಯಾಗಿದೆ. ಕಳೆದ ನವೆಂಬರ್‌ನಲ್ಲಿ ಮಾಡಿದ ಸುಂಕ ಕಡಿತದಿಂದ 1.20 ಲಕ್ಷ ಕೋಟಿ ರು. ಹೊರೆ ಆಗಿತ್ತು. ಹೀಗಾಗಿ ಎರಡೂ ಸುಂಕ ಕಡಿತದಿಂದ ಸರ್ಕಾರಕ್ಕೆ 2.20 ಲಕ್ಷ ಕೋಟಿ ರು. ಹೊರೆಯಾಗಿದೆ’ ಎಂದು ಸಚಿವೆ ವಿವರಿಸಿದ್ದಾರೆ.

ರಸಗೊಬ್ಬರಕ್ಕೆ ಕೇಂದ್ರದ ಬಂಪರ್‌ ಸಬ್ಸಿಡಿ, ಬೆಲೆ ಏರಿಕೆ ಭೀತಿಯಿಂದ ರೈತರು ಪಾರು!

ರಾಜ್ಯಗಳ ತೆರಿಗೆ ಪಾಲಿಗೆ ಖೋತಾ ಇಲ್ಲ- ಸ್ಪಷ್ಟನೆ: ‘ಪೆಟ್ರೋಲ್‌, ಡೀಸೆಲ್‌ ಮೇಲಿನ ಕೇಂದ್ರೀಯ ಅಬಕಾರಿ ತೆರಿಗೆಯನ್ನಷ್ಟೇ ಕಡಿತ ಮಾಡಲಾಗಿದ್ದು, ಇದರಿಂದ ಆದ ನಷ್ಟವನ್ನು ಕೇಂದ್ರವೇ ಭರಿಸಲಿದೆ. ರಾಜ್ಯಗಳ ಅಬಕಾರಿ ಸುಂಕ ಬೇರೆಯೇ ಆಗಿದ್ದು, ಅದರಲ್ಲಿ ಯಾವುದೇ ಕಡಿತ ಆಗಿಲ್ಲ. ಮೂಲ ಅಬಕಾರಿ ದರದಲ್ಲಿನ ರಾಜ್ಯಗಳ ಪಾಲಿನ ಹಂಚಿಕೆಗೆ ಕೇಂದ್ರ ಕೈ ಹಾಕಿಲ್ಲ. ರಾಜ್ಯಗಳ ಪಾಲು ಇದರಿಂದ ಖೋತಾ ಆಗುವುದಿಲ್ಲ’ ಎಂದು ನಿರ್ಮಲಾ ಸ್ಪಷ್ಟಪಡಿಸಿದ್ದಾರೆ.