* ಕಟ್ಟಡ ನಿರ್ಮಾಣ ಸಾಮಗ್ರಿ ಆಮದು ಸುಂಕ ಕಡಿತ* ಕಬ್ಬಿಣ, ಉಕ್ಕು, ಸಿಮೆಂಟ್‌ ಮತ್ತಷ್ಟುಅಗ್ಗ* ಪ್ಲಾಸ್ಟಿಕ್‌ ಆಮದು ಸುಂಕವೂ ಕಡಿತ: ಕೇಂದ್ರ ಘೋಷಣೆ

ನವದೆಹಲಿ(ಮೇ.22): ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಬ್ಬಿಣ, ಉಕ್ಕು ಮತ್ತು ಪ್ಲಾಸ್ಟಿಕ್‌ ಮೇಲಿನ ಆಮದು ಸುಂಕವನ್ನು ಕಡಿತ ಮಾಡಲು ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರೊಂದಿಗೆ ಸಿಮೆಂಟ್‌ ಬೆಲೆಯಲ್ಲೂ ಇಳಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಘೋಷಿಸಿದೆ.

ಇದರಿಂದಾಗಿ ಕಟ್ಟಡ ನಿರ್ಮಾಣ ಸಾಮಗ್ರಿ ಇನ್ನು ಅಗ್ಗವಾಗಲಿದ್ದು, ಮನೆ ಕಟ್ಟಿಸುವ ಜನರ ಹೊರೆ ತಗ್ಗಲಿದೆ.

‘ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಕಬ್ಬಿಣ ಮತ್ತು ಉಕ್ಕು ಮೇಲಿನ ಸೀಮಾ ಸುಂಕವನ್ನು ಕಡಿಮೆ ಮಾಡಲಾಗುತ್ತದೆ. ಇದರಿಂದಾಗಿ ಅವುಗಳ ಬೆಲೆ ಕಡಿಮೆಯಾಗಲಿದೆ. ಅಲ್ಲದೇ ಆಮದು ಮಾಡಿಕೊಳ್ಳಲಾಗುವ ಕೆಲವು ಉಕ್ಕಿನ ಕಚ್ಚಾ ವಸ್ತುಗಳ ಮೇಲಿನ ಸುಂಕವನ್ನು ಸಹ ಕಡಿಮೆ ಮಾಡಲಾಗುತ್ತದೆ. ರಫ್ತು ಮಾಡುವ ಕೆಲವು ಉಕ್ಕು ಉತ್ಪನ್ನಗಳ ಸುಂಕ ಹೆಚ್ಚಿಸಲಾಗಿದೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

‘ಭಾರತ ಹೆಚ್ಚಾಗಿ ಅವಲಂಬಿಸಿರುವ ಪ್ಲಾಸ್ಟಿಕ್‌ ಕಚ್ಚಾ ವಸ್ತುಗಳ ಮೇಲಿನ ಸುಂಕದಲ್ಲೂ ಇಳಿಕೆ ಮಾಡಲಾಗುತ್ತದೆ. ಇದರಿಂದಾಗಿ ಅವುಗಳ ಅಂತಿಮ ಪದಾರ್ಥಗಳ ಬೆಲೆ ಕಡಿಮೆಯಾಗಲಿದೆ’ ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಸಿಮೆಂಟ್‌ ಬೆಲೆ ಇಳಿಕೆ:

‘ಸಿಮೆಂಟ್‌ ಲಭ್ಯತೆ ಸುಧಾರಿಸಲು ಮತ್ತು ಸಿಮೆಂಟ್‌ ಬೆಲೆಯನ್ನು ಕಡಿಮೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ನಿರ್ಮಲಾ ಟ್ವೀಟ್‌ ಮಾಡಿದ್ದಾರೆ. ಸಿಮೆಂಟ್‌ ಬೆಲೆ ಇಳಿಕೆಯಿಂದಾಗಿ ಕಟ್ಟಡ ನಿರ್ಮಾಣ ವೆಚ್ಚ ಕಡಿಮೆಯಾಗಲಿದೆ. ಈ ಎಲ್ಲಾ ಅಂಶಗಳು ಮುಂದಿನ ಕ್ಷಣದಿಂದಲೇ ಜಾರಿಯಾಗುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಲ್‌ಪಿಜಿ ಸಬ್ಸಿಡಿ ಘೋಷಣೆ:

ಈ ನಡುವೆ, ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಪಡೆದವರಿಗೆ ವರ್ಷಕ್ಕೆ 12 ಸಿಲಿಂಡರ್‌ಗಳಿಗೆ ತಲಾ 200 ರು. ಸಬ್ಸಿಡಿ ಘೋಷಿಸಲಾಗಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ 1003 ರು. ಇರುವ ಎಲ್‌ಪಿಜಿ ಸಿಲಿಂಡರ್‌, ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ 803 ರು.ಗೆ ದೊರೆಯಲಿದೆ. ಈ ಸಬ್ಸಿಡಿ ಘೋಷಣೆಯಿಂದ ವಾರ್ಷಿಕ 6100 ಕೋಟಿ ರು. ಹೊರೆ ಸರ್ಕಾರದ ಮೇಲೆ ಬೀಳಲಿದೆ.

ಆದರೆ ಸಬ್ಸಿಡಿಯು ಉಜ್ವಲಾ ಯೋಜನೆ ಹೊರತುಪಡಿಸಿದರೆ ಉಳಿದ ಎಲ್‌ಪಿಜಿ ಗ್ರಾಹಕರಿಗೆ ಅನ್ವಯಿಸುವುದಿಲ್ಲ. 1003 ರು. ಪೂರ್ಣ ದರ ನೀಡಿಯೇ ಸಿಲಿಂಡರ್‌ ಖರೀದಿಸಬೇಕು.

ಕಳೆದ ವರ್ಷ ನವೆಂಬರ್‌ 4ರಂದು ಸಹ ಕೇಂದ್ರ ಸರ್ಕಾರ ಪೆಟ್ರೋಲ್‌ ಮೇಲೆ 5 ರು. ಮತ್ತು ಡೀಸೆಲ್‌ ಮೇಲೆ 10 ರು. ಅಬಕಾರಿ ಸುಂಕ ಕಡಿತ ಮಾಡಿತ್ತು. ಆ ಬಳಿಕ ಹಲವು ತಿಂಗಳು ದರ ಏರಿರಲಿಲ್ಲ. ಆದರೆ ಫೆಬ್ರವರಿ ಅಂತ್ಯದಲ್ಲಿ ಉಕ್ರೇನ್‌ ಯುದ್ಧ ಆರಂಭವಾದ ನಂತರ ದರವು ಸತತ ಏರಿಕೆಯಾಗಿತ್ತು.