ಕೊರೋನಾಗೆ ನಲುಗಿದ ದೇಶಕ್ಕೆ ಆರ್ಥಿಕ ಮದ್ದು, ಪ್ಯಾಕೇಜ್ ಘೋಷಿಸಿದ ನಿರ್ಮಲಾ!
* ಕೊರೋನಾ ಹಾವಳಿಯಿಂದ ಸಂಕಷ್ಟದಲ್ಲಿ ಅನೇಕ ಕ್ಷೇತ್ರಗಳು
* ಕೊರೋನಾದಿಂದ ನಷ್ಟಕ್ಕೀಡಾಗಿರುವ ವಲಯಗಳಿಗೆ ನೆರವು ಘೋಷಿಸಿದೆ ಹಣಕಾಸು ಸಚಿವೆ
* ವ್ಯವಹಾರಗಳಿಗೆ ಮತ್ತು ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಎಂಟು ಆರ್ಥಿಕ ಪರಿಹಾರ ಕ್ರಮ
ನವದೆಹಲಿ(ಜೂ.,28):
ನವದೆಹಲಿ: ಕೋವಿಡ್‌ನಿಂದ ನಲುಗಿರುವ ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ 6.29 ಲಕ್ಷ ಕೋಟಿ ರು. ಮೊತ್ತದ ಹೊಸ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಕೊರೋನಾದ ಸಂಭಾವ್ಯ 3ನೇ ಅಲೆ ಕಾರಣ ಆರೋಗ್ಯ ಕ್ಷೇತ್ರಕ್ಕೆ ಹಾಗೂ ಕೋವಿಡ್ ನಿಯಂತ್ರಣಕ್ಕೆ ಹೇರಲಾದ ನಿರ್ಭಂಧಗಳಿಂದ ನಲುಗಿದ್ದ ಪ್ರವಾಸೋದ್ಯಮ, ಔದ್ಯಮಿಕ ವಲಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ.
ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದ ವಲಯಗಳಿಗೆ 1.1 ಲಕ್ಷ ಕೋಟಿ ರು. ಖಾತರಿರಹಿತ ಸಾಲ, ಸಣ್ಣ-ಮಧ್ಯಮ ಉದ್ಯಮಕ್ಕೆ 1.5 ಲಕ್ಷ ಕೋಟಿ ರು. ಸಾಲ, ಖಾಸಗಿ ವಲಯಗಳ ಆಸ್ಪತ್ರೆಗಳ ಮೂಲಸೌಕರ‍್ಯ ಅಭಿವೃದ್ಧಿಗೆ 50 ಸಾವಿರ ಕೋಟಿ ರು. ಸಾಲ, 3ನೇ ಅಲೆಯಲ್ಲಿ ಮಕ್ಕಳಿಗೆ ಭೀತಿ ಇರುವ ಕಾರಣ ಮಕ್ಕಳ ಚಿಕಿತ್ಸಾ ಮೂಲಸೌಕರ‍್ಯ ಅಭಿವೃದ್ಧಿಗೆ 23 ಸಾವಿರ ಕೋಟಿ ರು. ಪ್ರಕಟಿಸಲಾಗಿದೆ.
ಟ್ರಾವೆಲ್ ಮತ್ತು ಪ್ರವಾಸೋದ್ಯಮ ವಲಯದಲ್ಲಿ ತೊಡಗಿರುವವರಿಗೆ ಸರ್ಕಾರದ ಖಾತರಿಯಲ್ಲಿ 10 ಲಕ್ಷ ರು.ವರೆಗೆ ಹಾಗೂ ನೋಂದಾಯಿತ ಪ್ರವಾಸಿ ಗೈಡ್‌ಗಳಿಗೆ 1 ಲಕ್ಷ ರು.ವರೆಗೆ ಸಾಲ ನೀಡಲಾಗುತ್ತದೆ.
ಆರ್ಥಿಕ ಪ್ಯಾಕೇಜ್‌ನಲ್ಲಿ 8 ನೆರವಿನ ಯೋಜನೆಗಳು ಮತ್ತು ಆರ್ಥಿಕತೆಗೆ ಬೆಂಬಲ ನೀಡುವ 8 ಯೋಜನೆಗಳು ಸೇರಿವೆ ಎಂದು ಯೋಜನೆ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪ್ಯಾಕೇಜ್‌ನಲ್ಲಿ ಏನೇನಿದೆ?
1. ಕೋವಿಡ್‌ನಿಂದ ತತ್ತರಿಸಿದ ವಲಯಗಳಿಗೆ 1.1 ಲಕ್ಷ ಕೋಟಿ ರು. ಖಾತರಿಸಹಿತ ಸಾಲ
2. ಖಾಸಗಿ ಆರೋಗ್ಯ ವಲಯಕ್ಕೆ ಶೇ.7.85 ಬಡ್ಡಿ ದರದಲ್ಲಿ 50 ಸಾವಿರ ಕೋಟಿ ರು. ಸಾಲ
3. ಸಣ್ಣ-ಮಧ್ಯಮ ಉದ್ಯಮಕ್ಕೆ ಹೆಚ್ಚುವರಿ 1.5 ಲಕ್ಷ ಕೋಟಿ ರು. ಕಡಿಮೆ ಬಡ್ಡಿಯ ಸಾಲ
4. ಪ್ರವಾಸೋದ್ಯಮಿಗಳಿಗೆ 10 ಲಕ್ಷ ರು., ನೋಂದಾಯಿತ ಪ್ರವಾಸಿ ಗೈಡ್‌ಗಳಿಗೆ 1 ಲಕ್ಷ ರು. ಖಾತರಿರಹಿತ ಸಾಲ
5. ಮಕ್ಕಳ ಚಿಕಿತ್ಸೆ ಮೂಲಸೌಕರ‍್ಯ ಅಭಿವೃದ್ಧಿಗೆ 23 ಸಾವಿರ ಕೋಟಿ ರು.
6. ರಸಗೊಬ್ಬರಕ್ಕೆ ಹೆಚ್ಚುವರಿ 14775 ಕೋಟಿ ರು. ಸಬ್ಸಿಡಿ
7. ನವೆಂಬರ್‌ವರೆಗೆ ಉಚಿತ ಪಡಿತರಕ್ಕೆ 2.2 ಲಕ್ಷ ಕೋಟಿ ರು.
8. ಗ್ರಾಮಗಳ ಬ್ರಾಡ್‌ಬ್ಯಾಂಡ್‌ಗೆ 19 ಸಾವಿರ ಕೋಟಿ ರು.