ಭಾರತದ ಮತ್ತೊಂದು ಸಾಧನೆ, ಇದೇ ಮೊದಲ ಬಾರಿಗೆ 20 ಸಾವಿರ ಗಡಿ ಮುಟ್ಟಿದ ನಿಫ್ಟಿ!
ಸೋಮವಾರ ಮಧ್ಯಾಹ್ನ 3 ಗಂಟೆ 9 ನಿಮಿಷ 21 ಸೆಕೆಂಡ್‌ಗೆ ಸರಿಯಾಗಿ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಪ್ರಧಾನ ಸೂಚ್ಯಂಕವಾದ ನಿಫ್ಟಿ ಫಿಫ್ಟಿ ಹೊಸ ಇತಿಹಾಸ ರಚನೆ ಮಾಡಿತು. ಇದೇ ಮೊದಲ ಬಾರಿಗೆ ನಿಫ್ಟಿಫಿಫ್ಟಿ 20 ಸಾವಿರ ಅಂಕಗಳ ಗಡಿ ಮುಟ್ಟಿದೆ.

ಮುಂಬೈ (ಸೆ.11): ವಾರದ ಮೊದಲ ವಹಿವಾಟಿನ ದಿನವು ಭಾರತೀಯ ಷೇರು ಮಾರುಕಟ್ಟೆ ಭರ್ಜರಿಯಾಗಿ ಆರಂಭಿಸಿದೆ. ಷೇರುಪೇಟೆಯ ಎರಡೂ ಸೂಚ್ಯಂಕಗಳು ಆರಂಭಿಕ ವಹಿವಾಟಿನಿಂದ ಲಾಭದೊಂದಿಗೆ ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ ಮತ್ತು ದಿನದ ವಹಿವಾಟು ಮುಗಿಯುವ ಮೊದಲೇ ಪ್ರಮುಖ ಸೂಚ್ಯಂಕ ನಿಫ್ಟಿ-50 ಇತಿಹಾಸವನ್ನು ಸೃಷ್ಟಿ ಮಾಡಿದೆ. ಇದೇ ಮೊದಲ ಬಾರಿಗೆ ನಿಫ್ಟಿ-50 ಸೂಚ್ಯಂಕ 20 ಸಾವಿರದ ಗಡಿ ಮುಟ್ಟಿದೆ. ಸೋಮವಾರ ಮಧ್ಯಾಹ್ನ ಇನ್ನೇನು ದಿನದ ವಹಿವಾಟು ಮುಕ್ತಾಯವಾಗುವ ಹಂತದಲ್ಲಿದ್ದ ವೇಳೆ ಸರಿಯಾಗಿ 3 ಗಂಟೆ 9 ನಿಮಿಷ 21 ಸೆಕೆಂಡ್‌ಗೆ ನಿಫ್ಟಿ ಫಿಫ್ಟಿ 20 ಸಾವಿರದ ಗಡಿ ಮುಟ್ಟಿತು. ಕಳೆದ ವರ್ಷ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಪ್ರಧಾನ ಸೂಚ್ಯಂಕ ಸೆನ್ಸೆಕ್ಸ್ 50 ಸಾವಿರ ಗಡಿ ಮುಟ್ಟುವ ಮೂಲಕ ಇತಿಹಾಸ ನಿರ್ಮಿಸಿತ್ತು. ನಿಫ್ಟಿ50 ಇದೇ ವರ್ಷದ ಜುಲೈ 2023ರಲ್ಲಿ 19995 ಅಂಕಗಳನ್ನು ಮುಟ್ಟಿದ್ದೇ ದಾಖಲೆಯಾಗಿತ್ತು. ಆದರೆ, ದಿನದ ವಹಿವಾಟು ಮುಕ್ತಾಯವಾಗುವ ವೇಳೆ 4 ಅಂಕ ಕುಸಿತ ಕಂಡ ನಿಫ್ಟಿಫಿಫ್ಟಿ, 19996 ಅಂಕಗಳಲ್ಲಿ ವಹಿವಾಟು ಮುಗಿಸಿತು. ಸೋಮವಾರದ ಒಂದೇ ದಿನ 176 ಅಂಕಗಳ ಏರಿಕೆ ಕಂಡಿದೆ.
ದೇಶದ ಅಗ್ರ 50 ಕಂಪನಿಗಳನ್ನು ಹೊಂದಿರುವ ನಿಫ್ಟಿಫಿಫ್ಟಿ ಆಲ್ ಟೈಮ್ ಹೈ ಗಡಿ ಮುಟ್ಟಿದ್ದು, 2023ರ ಮಾರ್ಚ್‌ನಿಂದ ಈವರೆಗೂ ಶೇ. 15ರಷ್ಟು ಪ್ರಗತಿ ಸಾಧಿಸಿದೆ. ಇಡೀ ನಿಫ್ಟಿ-50 ಏರಿಕೆಗೆ ರಿಲಯನ್ಸ್ ಇಂಡಸ್ಟ್ರೀಸ್ ಅತೀದೊಡ್ಡ ಕಾಣಿಕೆ ನೀಡಿದೆ. ತನ್ನ ದಾಖಲೆಯ ಮಟ್ಟವನ್ನು ತಲುಪಿದ ನಂತರ, ಕೊನೆಯ ನಿಮಿಷಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ವಹಿವಾಟು ಮತ್ತು ನಿಫ್ಟಿ 20,000 ಮಟ್ಟಕ್ಕಿಂತ ಕೆಳಗೆ ದಿನದ ವಹಿವಾಟು ಮುಗಿಸಿತು. ಮಾರುಕಟ್ಟೆಯ ಅಂತ್ಯಕ್ಕೆ 176.40 ಅಂಕಗಳ ಏರಿಕೆಯೊಂದಿಗೆ 19,996.35 ಮಟ್ಟದಲ್ಲಿ ಮುಕ್ತಾಯವಾಯಿತು. ನಿಫ್ಟಿ ಬ್ಯಾಂಕ್ ಕೂಡ 414.30 ಅಂಕಗಳ ಏರಿಕೆಯೊಂದಿಗೆ 45570.70 ಮಟ್ಟದಲ್ಲಿ ಮುಕ್ತಾಯವಾಯಿತು.
ನಿಫ್ಟಿ ಜೊತೆಗೆ, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ 30-ಷೇರುಗಳ ಸೆನ್ಸೆಕ್ಸ್ ಕೂಡ ದಿನವಿಡೀ ವೇಗವಾಗಿ ವಹಿವಾಟು ನಡೆಸಿತು. ಕಳೆದ ಶುಕ್ರವಾರದ 66,598.91 ರ ಮುಕ್ತಾಯಕ್ಕೆ ಹೋಲಿಸಿದರೆ, ಸೋಮವಾರ ಬೆಳಿಗ್ಗೆ 9.15 ಕ್ಕೆ ಸೆನ್ಸೆಕ್ಸ್ 66,807.73 ಅಂಕದೊಂದಿಗೆ ಪ್ರಾರಂಭವಾಯಿತು. ವಹಿವಾಟಿನ ವೇಳೆ 67,172.13ರ ಉನ್ನತ ಮಟ್ಟ ತಲುಪಿ ಅಂತಿಮವಾಗಿ 528.17 ಅಂಕಗಳ ಗಳಿಕೆಯೊಂದಿಗೆ 67,127.08 ಮಟ್ಟದಲ್ಲಿ ಮುಕ್ತಾಯವಾಯಿತು.
ಇಂದು ಬಿಎಸ್‌ಇಯಿಂದ ಎಲ್ಲಾ ವಲಯದ ಸೂಚ್ಯಂಕಗಳಲ್ಲಿ ಏರಿಕೆಯ ಪ್ರವೃತ್ತಿ ಮುಂದುವರೆದಿದೆ. ಮೆಟಲ್, ಆಟೋ. ಇಂಧನ ಷೇರುಗಳು ಏರಿಕೆ ಕಂಡರೆ, ಬ್ಯಾಂಕಿಂಗ್, ಎಫ್‌ಎಂಸಿಜಿ ಮತ್ತು ಐಟಿ ಷೇರುಗಳು ಕೂಡ ದೊಡ್ಡ ಜಿಗಿತವನ್ನು ಮಾಡಿವೆ.
Union Budget 2022 ಆರ್ಥಿಕ ಸಮೀಕ್ಷೆಯಲ್ಲಿ ಶೇ.8.5 ಜಿಡಿಪಿ ಪ್ರಗತಿ ಸೂಚಿಸಿದ ಬೆನ್ನಲ್ಲೇ ಷೇರು ಸೂಚ್ಯಂಕ 1,000 ಅಂಕ ಏರಿಕೆ!
2020ರ ಮಾರ್ಚ್‌ನಲ್ಲಿ ನಿಫ್ಟಿ 50 ಇಂಡೆಕ್ಸ್ 7511 ಅಂಕ ಹೊಂದಿತ್ತು. ಬರೀ ಮೂರೇ ವರ್ಷಗಳಲ್ಲಿ ಅತ್ಯಂತ ವೇಗವಾಗಿ 12 ಸಾವಿರ ಅಂಕಗಳನ್ನು ಏರಿಸಿಕೊಂಡ ನಿಫ್ಟಿ 20 ಸಾವಿರ ಅಂಕಗಳ ಗಡಿ ಮುಟ್ಟಿದೆ. 1996ರಲ್ಲಿ ನಿಫ್ಟಿ ಸೂಚ್ಯಂಕವನ್ನು ಎನ್‌ಎಸ್‌ಇ ಆರಂಭ ಮಾಡಿತ್ತು. 2007ರಲ್ಲಿ ಮೊಟ್ಟ ಮೊದಲ ಬಾರಿಗೆ ನಿಫ್ಟಿ ಫಿಫ್ಟಿ 6 ಸಾವಿರ ಅಂಕಗಳ ಗಡಿ ಮುಟ್ಟಿತ್ತು. ಇದಕ್ಕೆ 1 ಸಾವಿರ ಅಂಕಗಳನ್ನು ಸೇರಿಸಿಕೊಳ್ಳಲು ನಿಫ್ಟಿ ಬರೋಬ್ಬರಿ 7 ವರ್ಷಗಳ ಕಾಲ ಕಾದಿತ್ತು. 2014ರಲ್ಲಿ ನಿಫ್ಟಿ 7 ಸಾವಿರದ ಗಡಿ ಮುಟ್ಟಿತ್ತು. 2017ರಲ್ಲಿ ನಿಫ್ಟಿ ಮೊದಲ ಬಾರಿಗೆ 10 ಸಾವಿರದ ಗಡಿಯನ್ನು ಕ್ರಮಿಸಿತ್ತು. 2020ರಲ್ಲಿ ಕೊರೋನಾ ಸಾಂಕ್ರಾಮಿಕದ ಕಾರಣದಿಂದಾಗಿ ನಿಫ್ಟಿ 8 ಸಾವಿರ ಅಂಕಕ್ಕಿಂತಲೂ ಕಡಿಮೆಗೆ ಕುಸಿದಿತ್ತು.
ಸತತ ಐದು ದಿನಗಳ ಕಾಲ ಏರಿಕೆ ಕಂಡ ಮುಂಬೈ ಷೇರುಪೇಟೆ: 16,600 ಅಂಶಗಳಿಗೆ ಜಿಗಿದ ನಿಫ್ಟಿ