ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳಬಹುದು? ಹೊಸ ತೆರಿಗೆ ನಿಯಮ ಏನ್ ಹೇಳುತ್ತೆ?
ಮನೆಯಲ್ಲಿ ಎಷ್ಟು ಬೇಕಾದ್ರೂ ನಗದು ಇಟ್ಟುಕೊಳ್ಳಬಹುದಾ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಹಾಗೆಯೇ ಒಂದು ದಿನದಲ್ಲಿ ಎಷ್ಟು ನಗದು ವಹಿವಾಟು ನಡೆಸಬಹುದು ಎಂಬ ಪ್ರಶ್ನೆಯೂ ಕಾಡುತ್ತದೆ. ಈ ಬಗ್ಗೆ ತೆರಿಗೆ ನಿಯಮಗಳು ಏನ್ ಹೇಳುತ್ತವೆ? ಇಲ್ಲಿದೆ ಮಾಹಿತಿ.
Business Desk: ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆ ತೆರಿಗೆ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದೆ. ತೆರಿಗೆ ವಂಚನೆ ಹಾಗೂ ಕಪ್ಪು ಹಣದ ಸಮಸ್ಯೆ ನಿವಾರಣೆಗೆ ಅನೇಕ ನಿಯಮಗಳನ್ನು ರೂಪಿಸಿದೆ. ಕಪ್ಪು ಹಣಕ್ಕೆ ಕಡಿವಾಣ ಹಾಕಲು 2016ರಲ್ಲಿ ನೋಟ್ ಬ್ಯಾನ್ ಸೇರಿದಂತೆ ಮಹತ್ವದ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ನಂತರದ ದಿನಗಳಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ವಹಿವಾಟಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಎಂಬ ನಿಯಮ ಕೂಡ ಇದೆ. ಹೀಗಾಗಿ ಇಂದು ಯಾವುದೇ ವಸ್ತು ಖರೀದಿಸಿದ್ರೂ ಇಲ್ಲವೆ ಬ್ಯಾಂಕ್ ಖಾತೆಗೆ ಹಣ ಜಮೆ ಆದ್ರೂ, ಬೇರೆ ಖಾತೆಗೆ ವರ್ಗಾವಣೆ ಮಾಡಿದ್ರೂ ಅದರ ಮೇಲೆ ಆದಾಯ ತೆರಿಗೆ ಇಲಾಖೆಯ ಹದ್ದಿನ ಕಣ್ಣು ಇರುತ್ತದೆ. ಹಾಗೆಯೇ ದಾಖಲೆಗಳಿಲ್ಲದೆ ಮನೆ ಅಥವಾ ಇತರ ಯಾವುದೇ ಸ್ಥಳಗಳಲ್ಲಿ ನಗದು ಕಂಡುಬಂದರೆ ಅದನ್ನು ವಶಪಡಿಸಿಕೊಂಡು ದೂರು ದಾಖಲಿಸಿಕೊಳ್ಳಲಾಗುತ್ತದೆ ಕೂಡ. ಹಾಗಾದ್ರೆ ಒಬ್ಬ ವ್ಯಕ್ತಿ ಮನೆಯಲ್ಲಿ ಎಷ್ಟು ನಗದು ಹಣ ಸಂಗ್ರಹಿಸಬಹುದು? ಎಷ್ಟು ನಗದು ವಹಿವಾಟು ನಡೆಸಬಹುದು? ಇಲ್ಲಿದೆ ಮಾಹಿತಿ.
ಮನೆಯಲ್ಲಿ ಎಷ್ಟು ಹಣ ಸಂಗ್ರಹಿಸಬಹುದು?
ಮನೆಯಲ್ಲಿ ಎಷ್ಟು ಹಣ ಸಂಗ್ರಹಿಸಬಹುದು ಎಂಬ ಪ್ರಶ್ನೆ ಅನೇಕರನ್ನು ಕಾಡಬಹುದು.ಈ ಪ್ರಶ್ನೆಗೆ ಉತ್ತರ ಎರಡು ವಿಚಾರಗಳನ್ನು ಆಧರಿಸಿದೆ. ಒಂದು ನಿಮ್ಮ ಆರ್ಥಿಕ ಸಾಮರ್ಥ್ಯ ಹಾಗೂ ಇನ್ನೊಂದು ನಿಮ್ಮ ಹಣದ ವಹಿವಾಟಿನ ಅಭ್ಯಾಸ. ಮನೆಯಲ್ಲಿಎಷ್ಟು ಮೊತ್ತದ ಹಣ ಸಂಗ್ರಹಿಸಿಡಬಹುದು ಎಂಬ ಬಗ್ಗೆ ಯಾವುದೇ ಮಿತಿಯಿಲ್ಲ. ನಿಮಗೆ ಎಷ್ಟು ಅಗತ್ಯವೋ ಅಷ್ಟು ಹಣವನ್ನು ನೀವು ಸಂಗ್ರಹಿಸಬಹುದು. ಆದರೆ, ನಿಮ್ಮ ಬಳಿ ಪ್ರತಿ ಪೈಸೆ ಎಲ್ಲಿಂದ ಬಂತು ಎಂಬ ದಾಖಲೆಯಿರಬೇಕು. ಹಾಗೆಯೇ ನಿಮ್ಮ ಆದಾಯದ ಮೂಲದ ದಾಖಲೆ ಇರಬೇಕು. ನೀವು ತೆರಿಗೆ ಕಟ್ಟಿದಿರೋ ಇಲ್ಲವೋ ಎಂಬ ದಾಖಲೆ ಹೊಂದಿರೋದು ಕೂಡ ಅಗತ್ಯ. ಆದಾಯ ತೆರಿಗೆ ನಿಯಮಗಳ ಪ್ರಕಾರ ನೀವು ಮನೆಯಲ್ಲಿ ಎಷ್ಟು ಮೊತ್ತದ ಹಣವನ್ನಾದ್ರೂ ಇಟ್ಟುಕೊಳ್ಳಬಹುದು. ಆದರೆ, ಇದರೊಂದಿಗೆ ಐಟಿಆರ್ ಘೋಷಣೆ ಹೊಂದಿರೋದು ಕೂಡ ಅಗತ್ಯ. ಒಂದು ವೇಳೆ ನೀವು ಇದನ್ನು ಹೊಂದಿರದಿದ್ರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ. ನೋಟು ಅಮಾನ್ಯೀಕರಣದ ಬಳಿಕ ನಿಮ್ಮ ಮನೆಯಲ್ಲಿ ದಾಖಲೆಗಳಿರದ ಅಥವಾ ಅಕ್ರಮ ನಗದು ಪತ್ತೆಯಾದ್ರೆ ಆ ಮೊತ್ತದ ಶೇ.137ರಷ್ಟನ್ನು ತೆರಿಗೆಯಾಗಿ ವಿಧಿಸಲು ಆದಾಯ ತೆರಿಗೆ ನಿಯಮಗಳಡಿಯಲ್ಲಿ ಅವಕಾಶವಿದೆ.
ಭಾರತದ ಜಿಡಿಪಿ ಪ್ರಗತಿ ಮುನ್ಸೂಚನೆ 'ಪಾಸಿಟಿವ್' ಆಗಿ ಪರಿಷ್ಕರಿಸಿದ ವಿಶ್ವಬ್ಯಾಂಕ್
ಪ್ಯಾನ್ ಕಡ್ಡಾಯ
ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ ನಿಯಮಗಳ ಅನ್ವಯ ಒಮ್ಮೆಗೆ 50,000ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ಠೇವಣಿಯಿಡಲು ಅಥವಾ ವಿತ್ ಡ್ರಾ ಮಾಡಲು ನೀವು ನಿಮ್ಮ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ತೋರಿಸೋದು ಕಡ್ಡಾಯ. ಒಂದು ವೇಳೆ ನೀವು ವಾರ್ಷಿಕ 20ಲಕ್ಷ ರೂ. ಗಿಂತ ಹೆಚ್ಚಿನ ಠೇವಣಿ ಇರಿಸಿದ್ರೆ ಪ್ಯಾನ್ ಹಾಗೂ ಆಧಾರ್ ಕಾರ್ಡ್ ತೋರಿಸೋದು ಕಡ್ಡಾಯ. ಒಂದು ವೇಳೆ ನೀವು ಇದನ್ನು ಮಾಡಲು ವಿಫಲರಾದ್ರೆ 20ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ.
ನಗದು ವಹಿವಾಟಿಗೆ ಮಿತಿ
ಒಂದು ವರ್ಷದಲ್ಲಿ ಬ್ಯಾಂಕ್ ನಿಂದ ಒಂದು ಕೋಟಿ ರೂ.ಗಿಂತ ಅಧಿಕ ಮೊತ್ತದ ನಗದು ವಿತ್ ಡ್ರಾ ಮಾಡಿದ್ರೆ ಆಗ ಶೇ.2ರಷ್ಟು ಟಿಡಿಎಸ್ ಪಾವತಿಸಬೇಕು. ಒಂದು ವರ್ಷದಲ್ಲಿ 20 ಲಕ್ಷ ರೂ.ಗಿಂತ ಅಧಿಕ ನಗದು ವಹಿವಾಟು ನಡೆಸಿದ್ರೆ ಅದಕ್ಕೆ ದಂಡ ವಿಧಿಸಲಾಗೋದು. 30ಲಕ್ಷ ರೂ.ಗಿಂತ ಅಧಿಕ ಮೊತ್ತದ ಆಸ್ತಿಯ ಖರೀದಿ ಹಾಗೂ ಮಾರಾಟ ನಡೆಸಿದ್ರೆ ತನಿಖೆ ನಡೆಸಲಾಗೋದು.
ಈ ನಾಣ್ಯ ನಿಮ್ಮ ಬಳಿಯಿದ್ರೆ ಕೋಟ್ಯಧೀಶರಾಗ್ಬಹುದು!
ಈ ಮಾಹಿತಿಗಳು ನೆನಪಿರಲಿ
*ಯಾವುದೇ ವಸ್ತುವನ್ನು ಖರೀದಿಸುವಾಗ 2ಲಕ್ಷ ರೂ.ಗಿಂತ ಅಧಿಕ ಮೊತ್ತವನ್ನು ನಗದು (Cash) ರೂಪದಲ್ಲಿ ಪಾವತಿಸಬೇಡಿ. ಒಂದು ವೇಳೆ ಹೀಗೆ ಮಾಡುವುದಾದ್ರೂ ನಿಮ್ಮ ಪ್ಯಾನ್ ಹಾಗೂ ಆಧಾರ್ ಕಾರ್ಡ್ ತೋರಿಸೋದು ಅಗತ್ಯ.
*ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಒಮ್ಮೆಗೆ 1ಲಕ್ಷ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟು ವಹಿವಾಟು ನಡೆಸಿದ್ರೆ ಅದನ್ನು ತನಿಖೆಗೊಳಪಡಿಸಲಾಗುತ್ತದೆ.
*ಒಂದು ದಿನದಲ್ಲಿ ಸಂಬಂಧಿಕರಿಂದ 2 ಲಕ್ಷ ರೂ.ಗಿಂತ ಅಧಿಕ ಮೊತ್ತದ ಹಣವನ್ನು ಪಡೆದುಕೊಳ್ಳಬೇಡಿ.
*20,000ರೂ. ಗಿಂತ ಅಧಿಕ ಮೊತ್ತದ ಹಣವನ್ನು ಯಾರಿಂದಲೂ ನಗದು (Cash) ರೂಪದಲ್ಲಿ ಸಾಲ (Loan) ಪಡೆಯಬೇಡಿ.
*2,000 ರೂ. ಗಿಂತ ಅಧಿಕ ಮೊತ್ತದ ಹಣವನ್ನು ನಗದು ರೂಪದಲ್ಲಿ ದಾನ (donate) ಮಾಡುವಂತಿಲ್ಲ.