ದೇಶದಲ್ಲಿ ಜಾರಿಗೆ ಬರಲಿರುವ ಹೊಸ ಕಾರ್ಮಿಕ ಸಂಹಿತೆಯು ನಿಮ್ಮ ಸಂಬಳದ ರಚನೆಯನ್ನು ಬದಲಿಸಲಿದೆ. ಈ ನಿಯಮದ ಪ್ರಕಾರ, ಸಿಟಿಸಿಯ ಕನಿಷ್ಠ 50% 'ಮೂಲ ವೇತನ' ಆಗಿರಬೇಕು, ಇದರಿಂದ ಪಿಎಫ್ ಮತ್ತು ಗ್ರಾಚ್ಯುಟಿ ಕೊಡುಗೆಗಳು ಹೆಚ್ಚಾಗಿ, ನಿಮ್ಮ ಮಾಸಿಕ ಕೈಗೆ ಬರುವ ಸಂಬಳ ಕಡಿಮೆಯಾಗಲಿದೆ.
ನವದೆಹಲಿ (ಏ.22): ದೇಶದಲ್ಲಿ ಹೊಸ ಕಾರ್ಮಿಕ ಸಂಹಿತೆ ಜಾರಿಗೆ ಬರಲು ಸಿದ್ಧತೆಗಳು ನಡೆಯುತ್ತಿವೆ. ಈ ಹೊಸ ನಿಯಮದ ಪ್ರಕಾರ, ಒಬ್ಬ ಉದ್ಯೋಗಿಯ ಒಟ್ಟು ವೇತನದ (CTC) ಕನಿಷ್ಠ 50 ಪ್ರತಿಶತದಷ್ಟು ಭಾಗ 'ವೇತನ' (Wages/Basic Pay) ಆಗಿರಬೇಕು. ಆದರೆ, ಕಂಪನಿಗಳು ನೇರವಾಗಿ ಮೂಲ ವೇತನವನ್ನು (Basic Pay) ಶೇ. 50ಕ್ಕೆ ಏರಿಸುವ ಸಾಧ್ಯತೆ ಕಡಿಮೆ. ಬದಲಾಗಿ, ಸಂಬಳದ ಇತರ ಘಟಕಗಳನ್ನು ಮರುಹೊಂದಿಸಲು (Restructuring) ಮುಂದಾಗಲಿವೆ. ಇದರಿಂದ ನಿಮ್ಮ ಸಿಟಿಸಿ (CTC) ಬದಲಾಗದಿದ್ದರೂ, ಕೈಗೆ ಬರುವ ಮಾಸಿಕ ಸಂಬಳ ಮಾತ್ರ ಕಡಿಮೆಯಾಗಲಿದೆ.
ವೇತನದ ಹೊಸ ವ್ಯಾಖ್ಯಾನವೇನು?
ಹೊಸ ಕಾರ್ಮಿಕ ಸಂಹಿತೆಯ ಪ್ರಕಾರ, ಎಚ್‌ಆರ್‌ಎ (HRA), ಸಾರಿಗೆ ಭತ್ಯೆ, ಓವರ್‌ಟೈಮ್ ಭತ್ಯೆ ಮುಂತಾದವುಗಳನ್ನು ಹೊರತುಪಡಿಸಿದ ಉಳಿದ ಮೊತ್ತವು ಸಿಟಿಸಿಯ ಶೇ. 50ಕ್ಕಿಂತ ಹೆಚ್ಚಿದ್ದರೆ, ಆ ಹೆಚ್ಚುವರಿ ಮೊತ್ತವನ್ನು 'ಮೂಲ ವೇತನ'ಕ್ಕೆ ಸೇರಿಸಲಾಗುತ್ತದೆ. ಇದರಿಂದ ಭವಿಷ್ಯ ನಿಧಿ (PF) ಮತ್ತು ಗ್ರಾಚ್ಯುಟಿ (Gratuity) ಲೆಕ್ಕಾಚಾರವು ಹೆಚ್ಚಾಗುತ್ತದೆ.
ಕ್ಲಿಯರ್‌ಟ್ಯಾಕ್ಸ್‌ನ ತೆರಿಗೆ ತಜ್ಞೆ ಸಿಎ ಚಾಂದನಿ ಆನಂದನ್ ಹೇಳುವಂತೆ, "ಈ ನಿಯಮವು ಮೂಲ ವೇತನವನ್ನು ಶೇ. 50ಕ್ಕೆ ಏರಿಸಲು ಒತ್ತಾಯಿಸುವುದಿಲ್ಲ. ಬದಲಾಗಿ ವೇತನದ ವ್ಯಾಖ್ಯಾನವನ್ನು ಬದಲಿಸುತ್ತದೆ. ಒಂದು ವೇಳೆ ಮೂಲ ವೇತನ ಮತ್ತು ತುಟ್ಟಿಭತ್ಯೆ ಕಡಿಮೆಯಿದ್ದರೆ, ಕಂಪನಿಗಳು ಇತರ ಭತ್ಯೆಗಳನ್ನು ಮರು ವರ್ಗೀಕರಿಸುವ ಮೂಲಕ ಇದನ್ನು ಸರಿದೂಗಿಸಬಹುದು' ಎನ್ನುತ್ತಾರೆ.
ಕೈಗೆ ಬರುವ ಸಂಬಳ ಏಕೆ ಕಡಿಮೆಯಾಗುತ್ತದೆ?
ಒಂದು ಉದಾಹರಣೆಯೊಂದಿಗೆ ನೋಡುವುದಾದರೆ, ಒಬ್ಬ ಉದ್ಯೋಗಿಯ ವಾರ್ಷಿಕ ಸಿಟಿಸಿ 15 ಲಕ್ಷ ರೂಪಾಯಿ ಇದೆ ಎಂದು ಭಾವಿಸೋಣ. ಸದ್ಯ ಆತನ ಮೂಲ ವೇತನ 4.5 ಲಕ್ಷ ಇರಬಹುದು. ಹೊಸ ನಿಯಮದ ಪ್ರಕಾರ ಪಿಎಫ್ ಮತ್ತು ಗ್ರಾಚ್ಯುಟಿ ಕೊಡುಗೆಗಳು ಹೆಚ್ಚಾಗುವುದರಿಂದ, ಆ ಉದ್ಯೋಗಿಯ ವಾರ್ಷಿಕ 'ಟೇಕ್-ಹೋಮ್' ಸಂಬಳದಲ್ಲಿ ಸುಮಾರು 52,000 ರೂಪಾಯಿಗಳಷ್ಟು ಇಳಿಕೆಯಾಗಬಹುದು.
"ಕಂಪನಿಗಳು ನೇರವಾಗಿ ಮೂಲ ವೇತನವನ್ನು ಹೆಚ್ಚಿಸುವ ಬದಲಾಗಿ, ತೆರೆಯ ಮರೆಯಲ್ಲಿ ಸಂಬಳದ ಘಟಕಗಳನ್ನು ಮರುಹೊಂದಿಸುತ್ತವೆ. ಇದರಿಂದ ನಿವೃತ್ತಿ ಉಳಿತಾಯ ಹೆಚ್ಚಾಗುತ್ತದೆಯಾದರೂ, ಪ್ರತಿ ತಿಂಗಳು ಕೈಗೆ ಸಿಗುವ ನಗದು ಮೊತ್ತ ಕಡಿಮೆಯಾಗುತ್ತದೆ," ಎಂದು 'ಟ್ಯಾಕ್ಸ್‌ಸ್ಪ್ಯಾನರ್' ಸಿಇಒ ಸುಧೀರ್ ಕೌಶಿಕ್ ತಿಳಿಸಿದ್ದಾರೆ.
ಮೂಲ ವೇತನ ಹೆಚ್ಚಳದ ಅಪಾಯಗಳೇನು?
ಕಂಪನಿಗಳು ನೇರವಾಗಿ ಮೂಲ ವೇತನವನ್ನು ಶೇ. 50ಕ್ಕೆ ಏರಿಸಲು ಹಿಂಜರಿಯಲು ಕೆಲವು ಪ್ರಮುಖ ಕಾರಣಗಳಿವೆ. ಮೂಲ ವೇತನ ಹೆಚ್ಚಾದಷ್ಟೂ ಕಂಪನಿಯು ಪಾವತಿಸಬೇಕಾದ ಪಿಎಫ್, ಗ್ರಾಚ್ಯುಟಿ ಮತ್ತು ಎನ್‌ಪಿಎಸ್ (NPS) ಪಾಲು ಹೆಚ್ಚಾಗುತ್ತದೆ. ಇದು ಕಂಪನಿಗೆ ಹೊರೆಯಾದರೆ, ಉದ್ಯೋಗಿಯ ಮಾಸಿಕ ಸಂಬಳ ಗಣನೀಯವಾಗಿ ಇಳಿಕೆಯಾಗುತ್ತದೆ. ಎಚ್‌ಆರ್‌ಎ (HRA) ಅಂತಹ ಭತ್ಯೆಗಳು ಮೂಲ ವೇತನಕ್ಕೆ ಲಿಂಕ್ ಆಗಿರುತ್ತವೆ. ಮೂಲ ವೇತನ ತೀರಾ ಕಡಿಮೆಯಿದ್ದರೂ ಎಚ್‌ಆರ್‌ಎ ಲಾಭ ಸಿಗುವುದಿಲ್ಲ. ಹೀಗಾಗಿ ಕಂಪನಿಗಳು ಸಮತೋಲಿತ ಹಾದಿಯನ್ನು ಅನುಸರಿಸಲಿವೆ.
ತೆರಿಗೆ ಪದ್ಧತಿಗಳ ಮೇಲೆ ಪ್ರಭಾವ
ಹಳೆಯ ತೆರಿಗೆ ಪದ್ಧತಿ: ಇಲ್ಲಿ ಉದ್ಯೋಗಿಗಳು ಪಿಎಫ್ ಕೊಡುಗೆಯ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ ಹೆಚ್ಚುವರಿ ಪಿಎಫ್ ಕಡಿತವನ್ನು ಸರಿದೂಗಿಸಲು ಇದು ಸಾಕಾಗುವುದಿಲ್ಲ.
ಹೊಸ ತೆರಿಗೆ ಪದ್ಧತಿ: ಇಲ್ಲಿ ವಿನಾಯಿತಿಗಳು ಕಡಿಮೆ ಇದ್ದರೂ, 75,000 ರೂಪಾಯಿಗಳ ಹೆಚ್ಚಿನ ಸ್ಟ್ಯಾಂಡರ್ಡ್ ಡಿಡಕ್ಷನ್ ಇರುವುದರಿಂದ ಸಂಬಳ ಕಡಿತದ ಹೊರೆ ಸ್ವಲ್ಪ ಮಟ್ಟಿಗೆ ತಗ್ಗಬಹುದು.
ಉದ್ಯೋಗಿಗಳು ಗಮನಿಸಬೇಕಾದ ಅಂಶಗಳು:
ಉದ್ಯೋಗಿಗಳು ಕೇವಲ 'ಸಿಟಿಸಿ' ನೋಡಿ ಉದ್ಯೋಗವನ್ನು ಒಪ್ಪಿಕೊಳ್ಳಬಾರದು. ಬದಲಾಗಿ ನಿಮ್ಮ ಪಿಎಫ್ ಮತ್ತು ಗ್ರಾಚ್ಯುಟಿ ಕೊಡುಗೆ ಎಷ್ಟು ಹೆಚ್ಚಾಗುತ್ತಿದೆ?ಭತ್ಯೆಗಳು ಮತ್ತು ಸ್ಥಿರ ವೇತನದ ಅನುಪಾತ ಹೇಗಿದೆ? ಎಲ್ಲಾ ಕಡಿತಗಳ ನಂತರ ಕೈಗೆ ಬರುವ ನಿವ್ವಳ ಸಂಬಳ (Net Take-home) ಎಷ್ಟು? ಅನ್ನೋದನ್ನು ಮುಖ್ಯವಾಗಿ ಗಮನಿಸಬೇಕು
"ಇದು ದೀರ್ಘಾವಧಿಯ ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಒಳ್ಳೆಯದು. ನಿಮ್ಮ ನಿವೃತ್ತಿ ಜೀವನಕ್ಕಾಗಿ ಹೆಚ್ಚಿನ ಹಣ ಉಳಿತಾಯವಾಗುತ್ತದೆ. ಕೈಗೆ ಬರುವ ಸಂಬಳದಲ್ಲಿನ ಇಳಿಕೆಯನ್ನು 'ಕಡಿತ' ಎಂದು ನೋಡುವ ಬದಲು 'ಹೂಡಿಕೆ' ಎಂದು ಪರಿಗಣಿಸುವುದು ಸೂಕ್ತ," ಎಂದು ಚಾಂದನಿ ಆನಂದನ್ ಸಲಹೆ ನೀಡಿದ್ದಾರೆ.


