ಭಾರತದಲ್ಲಿ ಚೀನಾದ ಎಫ್‌ಡಿಐಗೆ ಸರ್ಕಾರದ ಬ್ರೇಕ್‌| ಇನ್ನೇನಿದ್ದರೂ ಕೇಂದ್ರದ ಅನುಮತಿ ಪಡೆದೇ ಚೀನಾ ಹೂಡಿಕೆ ಮಾಡಬೇಕು| ದೇಶದ ಆರ್ಥಿಕ ಕುಸಿತದ ಲಾಭ ಚೀನಾ ಪಡೆಯದಂತೆ ಮಾಡಲು ಈ ಕ್ರಮ

ನವದೆಹಲಿ(ಏ.19): ಕೊರೋನಾ ವೈರಸ್‌ ಸಮಸ್ಯೆಯಿಂದಾಗಿ ಭಾರತದ ಆರ್ಥಿಕತೆ ಹಿಂಜರಿಕೆಯಲ್ಲಿರುವುದರಿಂದ ಚೀನಾ ಇದರ ಲಾಭ ಪಡೆಯಲು ಯತ್ನಿಸಬಹುದೆಂಬ ಕಾರಣಕ್ಕೆ ಕೇಂದ್ರ ಸರ್ಕಾರ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ನೀತಿಯನ್ನೇ ಬದಲಿಸಿದೆ.

ಹೊಸ ನೀತಿಯ ಪ್ರಕಾರ, ಭಾರತದ ಜೊತೆಗೆ ಗಡಿ ಹಂಚಿಕೊಳ್ಳುವ ಯಾವುದೇ ದೇಶಗಳು ಇನ್ನುಮುಂದೆ ಭಾರತದ ಕಂಪನಿಗಳಲ್ಲಿ ನೇರವಾಗಿ ಬಂಡವಾಳ ಹೂಡಿಕೆ ಮಾಡುವಂತಿಲ್ಲ. ಬದಲಿಗೆ, ಕೇಂದ್ರ ಸರ್ಕಾರದ ಮೂಲಕವೇ ಹೂಡಿಕೆ ಮಾಡಬೇಕು. ಈ ನಿಯಮ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ್‌ ಹಾಗೂ ಮ್ಯಾನ್ಮಾರ್‌ಗೆ ಅನ್ವಯಿಸಲಿದೆ. ಈ ಹಿಂದೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಮಾತ್ರ ಭಾರತ ಈ ನಿರ್ಬಂಧ ವಿಧಿಸಿತ್ತು. ಈಗ ವಿಶೇಷವಾಗಿ ಚೀನಾವನ್ನು ಗಮನದಲ್ಲಿಟ್ಟುಕೊಂಡು ಭಾರತದ ಜೊತೆ ಗಡಿ ಹಂಚಿಕೊಳ್ಳುವ ಎಲ್ಲಾ ದೇಶಗಳಿಗೂ ವಿಸ್ತರಿಸಿದೆ.

'ಕಾರ್ಮಿಕರಿಗೆ ತಿಂಗಳಿಗೆ 10,000 ರೂಪಾಯಿ ನೀಡಿ'

ದೇಶದಲ್ಲಿ ಆರ್ಥಿಕ ಹಿಂಜರಿಕೆ ಇರುವುದರಿಂದ ಚೀನಾ ದೊಡ್ಡ ಪ್ರಮಾಣದಲ್ಲಿ ಇಲ್ಲಿನ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿ, ನಂತರ ಈ ಕಂಪನಿಗಳನ್ನು ಪೂರ್ಣ ಪ್ರಮಾಣದಲ್ಲಿ ಕೈವಶ ಮಾಡಿಕೊಳ್ಳುವ ಅಪಾಯವಿದೆ. ಈ ಕುರಿತು ಸಣ್ಣ ಹಾಗೂ ಮಧ್ಯಮ ಗಾತ್ರದ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದವು. ಅದರಂತೆ ಕೇಂದ್ರ ಸರ್ಕಾರ ಶನಿವಾರ ನಿಯಮ ಬದಲಿಸಿ ಆದೇಶ ಹೊರಡಿಸಿದೆ.

ಭಾರತದಲ್ಲಿ ಚೀನಿ ಕಂಪನಿಗಳ ಹೂಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. 2014ರಲ್ಲಿ ಕೇವಲ 12,160 ಕೋಟಿ ರು. ಇದ್ದ ಚೀನಾದ ಹೂಡಿಕೆ ಈಗ ಸುಮಾರು 2 ಲಕ್ಷ ಕೋಟಿ ರು. ಆಗಿದೆ. ಇತ್ತೀಚೆಗಷ್ಟೆಚೀನಾದ ಪೀಪಲ್ಸ್‌ ಬ್ಯಾಂಕ್‌ ಭಾರತದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸುಮಾರು 3000 ಕೋಟಿ ರು. ಮೌಲ್ಯದ ಷೇರುಗಳನ್ನು ಖರೀದಿಸಿತ್ತು.