Asianet Suvarna News Asianet Suvarna News

ವೈಯಕ್ತಿಕ ಸಾಲದಲ್ಲಿ ಎಷ್ಟೊಂದು ವಿಧ; ಮದುವೆ, ಹಬ್ಬ, ಪ್ರವಾಸಕ್ಕೂ ಸಿಗುತ್ತೆ ಪಸರ್ನಲ್ ಲೋನ್!

ಹಣದ ತುರ್ತು ಅಗತ್ಯ ಎದುರಾದಾಗ ವೈಯಕ್ತಿಕ ಸಾಲಗಳು ನೆರವು ನೀಡುತ್ತವೆ. ವಿವಿಧ ಬ್ಯಾಂಕ್ ಗಳು ವೈಯಕ್ತಿಕ ಸಾಲಗಳನ್ನು ಒಗಿಸುತ್ತವೆ. ಈ ಸಾಲದಲ್ಲಿ ಕೂಡ ಅನೇಕ ವಿಧಗಳಿವೆ. ಅವು ಯಾವುವು? ಇಲ್ಲಿದೆ ಮಾಹಿತಿ. 

Need A Personal Loan Check Out The Different Types Available In India anu
Author
First Published Oct 28, 2023, 4:42 PM IST

Business Desk:ಹಣದ ಅಗತ್ಯ ಹೇಗೆ, ಎಲ್ಲಿ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ದೊಡ್ಡ ಪ್ರಮಾಣದಲ್ಲಿ ಹಣದ ಅಗತ್ಯ ಎದುರಾದಾಗ ಸಾಲ ಮಾಡೋದು ಅನಿವಾರ್ಯ. ಅದರಲ್ಲೂ ದೊಡ್ಡ ಮೊತ್ತದ ವೆಚ್ಚ ಎದುರಾದಾಗ ವೈಯಕ್ತಿಕ ಸಾಲಗಳು ಅಥವಾ ಪಸರ್ನಲ್ ಲೋನ್ಸ್ ನೆರವು ನೀಡುತ್ತವೆ. ಏಕೆಂದರೆ ತಕ್ಷಣಕ್ಕೆ ಯಾವುದೇ ಕಿರಿಕಿರಿಯಿಲ್ಲದೆ ಸಿಗುವ ಸಾಲವೆಂದ್ರೆ ಅದು ವೈಯಕ್ತಿಕ ಸಾಲ. ವಿವಿಧ ಬ್ಯಾಂಕ್ ಗಳು ವಿವಿಧ ವಿಧದ ವೈಯಕ್ತಿಕ ಸಾಲಗಳನ್ನು ನೀಡುತ್ತವೆ. ವೈಯಕ್ತಿಕ ಸಾಲಗಳಲ್ಲಿ ಕೂಡ ಅನೇಕ ವಿಧಗಳಿವೆ. ವೈವಾಹಿಕ ಸಾಲದಿಂದ ಹಿಡಿದು ಪ್ರಯಾಣದ ಸಾಲದ ತನಕ ಅನೇಕ ವಿಧದ ಸಾಲಗಳು ಸಿಗುತ್ತವೆ. ಹೀಗಾಗಿ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಸಾಲಗಳನ್ನು ಪಡೆಯೋದು ಒಳ್ಳೆಯದು. ಹಾಗಾದರಲ್ಲಿ ವೈಯಕ್ತಿಕ ಸಾಲಗಳಲ್ಲಿ ಎಷ್ಟು ವಿಧಗಳಿವೆ? ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ.

ವಿವಾಹ ಸಾಲ
ಭಾರತದಲ್ಲಿ ಮದುವೆ ಅನ್ನೋದು ಒಬ್ಬ ವ್ಯಕ್ತಿಯ ಬದುಕಿನ ಅತ್ಯಂತ ಮುಖ್ಯವಾದ ಘಟನೆ ಮಾತ್ರವಲ್ಲ, ಅದೊಂದು ಸಂಭ್ರಮಾಚರಣೆ ಕೂಡ. ಹೀಗಾಗಿ ವಿವಾಹಕ್ಕೆ ದೊಡ್ಡ ಪ್ರಮಾಣದ ಹಣದ ಅಗತ್ಯವಿರುತ್ತದೆ. ಹೀಗಾಗಿ ಉಳಿತಾಯದ ಹಣದ ಜೊತೆಗೆ ಸಾಲ ಮಾಡೋದು ಕೂಡ ಅನಿವಾರ್ಯ. ವಿವಾಹದ ಸ್ಥಳ ಆಯ್ಕೆಯಿಂದ ಹಿಡಿದು ಕಾರ್ಯಕ್ರಮದ ಆಯೋಜನೆ, ಆಭರಣಗಳು ಹಾಗೂ ಇನ್ನೂ ಅನೇಕ ಅಗತ್ಯಗಳಿಗೆ ಸಾಕಷ್ಟು ಹಣದ ಅವಶ್ಯಕತೆಯಿರುತ್ತದೆ. ಈ ಮದುವೆ ವೆಚ್ಚಗಳಿಗೆ ಬ್ಯಾಂಕ್ ಗಳು ವೈಯಕ್ತಿಕ ಸಾಲಗಳನ್ನು ನೀಡುತ್ತವೆ. ಹೀಗಾಗಿ ಮದುವೆ ಬಜೆಟ್ ನಿರ್ವಹಣೆಗೆ ವರ, ವಧು ಹಾಗೂ ಅವರ ಕುಟುಂಬ ಸದಸ್ಯರಿಗೆ ಬ್ಯಾಂಕ್ ಗಳು ಸಾಲ ನೀಡುತ್ತವೆ.

ಬ್ಯಾಂಕ್ ಎಫ್ ಡಿ ನಿಯಮದಲ್ಲಿ ಬದಲಾವಣೆ; ಅವಧಿಗೂ ಮುನ್ನ1 ಕೋಟಿ ರೂ. ತನಕ ವಿತ್ ಡ್ರಾಗೆ ಅವಕಾಶ

ಪ್ರವಾಸ ಸಾಲ
ಇಂದು ದೂರದ ಪ್ರದೇಶಗಳು ಹಾಗೂ ದೇಶಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. ಪ್ರವಾಸ ಮಾಡೋದು ಆನಂದದ ಸಂಗತಿಯಾದ್ರೂ ಅದರಿಂದ ಒಂದಿಷ್ಟು ಖರ್ಚುಗಳು ಕೂಡ ಹೆಚ್ಚುತ್ತವೆ. ಈ ಖರ್ಚುಗಳನ್ನು ಕೆಲವೊಮ್ಮೆ ನಮ್ಮ ಬಜೆಟ್ ನಲ್ಲಿ ನಿರ್ವಹಿಸೋದು ಸಾಧ್ಯವಾಗೋದಿಲ್ಲ. ಹೀಗಾಗಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ವಿಮಾನ, ಹೋಟೆಲ್ , ಶಾಪಿಂಗ್ ಹಾಗೂ ಇತರ ವೆಚ್ಚಗಳ ನಿರ್ವಹಣೆಗೆ ವೈಯಕ್ತಿಕ ಸಾಲಗಳನ್ನು ಒದಗಿಸುತ್ತವೆ. ಹನಿಮೂನ್ ಅಥವಾ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಪ್ರವಾಸದ ಪ್ಲ್ಯಾನ್ ಮಾಡಲು ನೀವು ಈ ಸಾಲ ಬಳಸಿಕೊಳ್ಳಬಹುದು.

ಶೈಕ್ಷಣಿಕ ಸಾಲ
ಇಂದು ಶಿಕ್ಷಣ ದುಬಾರಿಯಾಗಿದೆ. ಅದರಲ್ಲೂ ಉನ್ನತ ಶಿಕ್ಷಣ ಪಡೆಯೋದು ಸಾಮಾನ್ಯ ಸಂಗತಿಯಲ್ಲ. ಅದಕ್ಕೆ ಲಕ್ಷಗಟ್ಟಲೆ ಹಣದ ಅಗತ್ಯವಿದೆ. ಹೀಗಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಮಕ್ಕಳಿಗೆ ಅವರ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳಲು ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳು ಶೈಕ್ಷಣಿಕ ಸಾಲವನ್ನು ನೀಡುತ್ತವೆ. ಶೈಕ್ಷಣಿಕ ಸಾಲಗಳು ವಿದ್ಯಾರ್ಥಿಗಳಿಗೆ ಟ್ಯೂಷನ್ ಶುಲ್ಕಗಳು, ಕಾಲೇಜು ಅಥವಾ ಶಾಲಾ ಶುಲ್ಕಗಳು ಹಾಗೂ ಇತರ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ನೆರವು ನೀಡುತ್ತವೆ.

ಮನೆ ನವೀಕರಣ ಸಾಲ
ಮನೆಯನ್ನು ನವೀಕರಿಸಲು ಕೂಡ ಬ್ಯಾಂಕ್ ಗಳು ಸಾಲ ನೀಡುತ್ತವೆ. ಮನೆ ದುರಸ್ತಿ, ಮರುನಿರ್ಮಾಣ ಅಥವಾ ಇಂಟೀರಿಯರ್ ಕೆಲಸಗಳಿಗೆ ಬ್ಯಾಂಕ್ ಗಳಿಂದ ವೈಯಕ್ತಿಕ ಸಾಲಗಳನ್ನು ಪಡೆಯಬಹುದು.

ಹಬ್ಬದ ಸಾಲ
ಭಾರತದಲ್ಲಿ ಹಬ್ಬಕ್ಕೇನೂ ಕೊರತೆಯಿಲ್ಲ ಬಿಡಿ. ಹಬ್ಬದ ಜೊತೆಗೆ ಖರ್ಚುಗಳು ಕೂಡ ಹೆಚ್ಚು. ಸಂಬಂಧಿಕರು, ಸ್ನೇಹಿತರು ಎಲ್ಲರ ಜೊತೆಗೆ ಸೇರಿ ಹಬ್ಬ ಆಚರಿಸುವಾಗ ಖರ್ಚು ಹೆಚ್ಚೋದು ಸಹಜ. ಇದು ಕೆಲವರ ಜೇಬಿಗೆ ದೊಡ್ಡ ಹೊರೆಯಾಗುತ್ತದೆ ಕೂಡ. ಇಂಥ ಸಂದರ್ಭಗಳಲ್ಲಿ ಕೂಡ ಬ್ಯಾಂಕ್ ಗಳಿಂದ ಸಾಲ ಪಡೆಯಬಹುದು.

ಸಾಲ ಪಡೆದವರಿಗೆ ಬೆಳಗೆ 8ಕ್ಕೆ ಮೊದಲ ಸಂಜೆ 7 ರ ನಂತರ ಕರೆ ಮಾಡುವಂತಿಲ್ಲ: ಆರ್‌ಬಿಐ

ವೈದ್ಯಕೀಯ ತುರ್ತು ಸಾಲ
ತುರ್ತು ಸಂದರ್ಭಗಳು ಯಾವ ರೂಪದಲ್ಲಿ ಬೇಕಾದರೂ ಎದುರಾಗಬಹುದು. ಇವು ವ್ಯಕ್ತಿ ಅಥವಾ ಕುಟುಂಬಗಳ ಮೇಲೆ ಹಣಕಾಸಿನ ಒತ್ತಡಗಳನ್ನು ಹೇರುತ್ತವೆ. ಆಸ್ಪತ್ರೆ ಹಾಗೂ ವೈದ್ಯಕೀಯ ವೆಚ್ಚಗಳನ್ನು ಭರಿಸಲು ವೈದ್ಯಕೀಯ ತುರ್ತು ಸಾಲಗಳನ್ನು ಬ್ಯಾಂಕ್ ಗಳು ಒದಗಿಸುತ್ತವೆ. 

ಕನ್ಸ್ಯೂಮರ್ ಡೂರೇಬಲ್ ಲೋನ್
ಗ್ರಾಹಕರಿಗೆ ಎಸಿ, ಫ್ರಿಜ್, ಟಿವಿ, ಲ್ಯಾಪ್ ಟಾಪ್ಸ್ , ಸ್ಮಾರ್ಟ್ ಫೋನ್ಸ್ ಹಾಗೂ ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಬ್ಯಾಂಕ್ ಗಳು ಕನ್ಸ್ಯೂಮರ್ ಡೂರೇಬಲ್ ಲೋನ್ ಒದಗಿಸುತ್ತವೆ. 

Follow Us:
Download App:
  • android
  • ios