NPS ಖಾತೆದಾರರೇ ಗಮನಿಸಿ,ಇನ್ಮುಂದೆ ಟೈರ್-II ಖಾತೆಗೆ ಕ್ರೆಡಿಟ್ ಕಾರ್ಡ್ ಪಾವತಿ ಅವಕಾಶವಿಲ್ಲ
*ಆ.3ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಮಾಹಿತಿ ನೀಡಿರುವ ಪಿಎಫ್ ಆರ್ ಡಿಎ
*ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ
*ಎನ್ ಪಿಎಸ್ ಟೈರ್ -I ಖಾತೆಗೆ ಈ ಹಿಂದಿನಂತೆ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಗೆ ಅವಕಾಶ
ನವದೆಹಲಿ (ಜು.4): ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಟೈರ್ -II ಖಾತೆ ಚಂದಾದಾರಿಕೆ ಅಥವಾ ಕೊಡುಗೆಗೆ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ಪಾವತಿಯನ್ನು ಸ್ವೀಕರಿಸದಿರಲು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ಧರಿಸಿದೆ. ಅಲ್ಲದೆ, ತಕ್ಷಣದಿಂದಲೇ ಎನ್ ಪಿಎಸ್ ಟೈರ್ -II ಖಾತೆಗಳ ಪಾವತಿಗೆ ಕ್ರೆಡಿಟ್ ಕಾರ್ಡ್ ಪಾವತಿ ಸ್ವೀಕರಿಸೋದನ್ನು ನಿಲ್ಲಿಸುವಂತೆ ಎಲ್ಲ ಶಾಖೆಗಳಿಗೆ (ಪಿಒಪಿಎಸ್) ಸೂಚನೆ ನೀಡಿದೆ. ಆಗಸ್ಟ್ 3ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಪಿಎಫ್ ಆರ್ ಡಿಎ, 'ಎನ್ ಪಿಎಸ್ ಟೈರ್ -II ಖಾತೆ ಚಂದಾದಾರಿಕೆಗಳು ಅಥವಾ ಕೊಡುಗೆಗಳಿಗೆ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡುವ ವಿಧಾನ ನಿಲ್ಲಿಸಲು ಪ್ರಾಧಿಕಾರ ನಿರ್ಧರಿಸಿದೆ. ಅದಕ್ಕೆ ಅನುಗುಣವಾಗಿ ಎನ್ ಪಿಎಸ್ ಟೈರ್ -II ಖಾತೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ರೆಡಿಟ್ ಕಾರ್ಡ್ ಮೂಲಕದ ಪಾವತಿ ಸ್ವೀಕಾರ ನಿಲ್ಲಿಸುವಂತೆ ಎಲ್ಲ ಪಿಒಪಿಎಸ್ ಗಳಿಗೆ ಸಲಹೆ ನೀಡಲಾಗಿದೆ' ಎಂದು ತಿಳಿಸಿದೆ.
ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 2013 ಸೆಕ್ಷನ್ 14 ಅಡಿಯಲ್ಲಿನ ಅಧಿಕಾರಗಳನ್ನು ಬಳಸಿ ಎನ್ ಪಿಎಸ್ ಟೈರ್ -II ಖಾತೆಗಳಿಗೆ (NPS Tier II accounts) ಕ್ರೆಡಿಟ್ ಕಾರ್ಡ್ ಬಳಕೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಿಎಫ್ ಆರ್ ಡಿಎ (PFRDA) ತಿಳಿಸಿದೆ. ಈ ಕಾಯ್ದೆಯು ಚಂದಾದಾರರ ಹಿತಾಸಕ್ತಿ ರಕ್ಷಣೆ ಮಾಡುವ ಜೊತೆಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಹಾಗೂ ಪಿಂಚಣಿ ಯೋಜನೆಗಳ ನಿರಂತರ ಬೆಳವಣಿಗೆಗೆ ನಿಯಂತ್ರಣ, ಉತ್ತೇಜನ ಹಾಗೂ ಭರವಸೆಯನ್ನು ಒದಗಿಸುತ್ತದೆ ಎಂದು ಪಿಎಫ್ ಆರ್ ಡಿಎ ಹೇಳಿದೆ.
Fortune Global 500 ಪಟ್ಟಿ: ಭಾರತದ ಅಗ್ರ ಶ್ರೇಯಾಂಕ ಸಂಸ್ಥೆ ಎನಿಸಿಕೊಂಡ ಎಲ್‌ಐಸಿ
ಇ-ಎನ್ ಪಿಎಸ್ ಪೋರ್ಟಲ್ ಮೂಲಕ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಹೂಡಿಕೆ (Invest) ಮಾಡಲು ಖಾತೆದಾರರಿಗೆ ಅವಕಾಶ ನೀಡುವ ಏಕೈಕ ಉಳಿತಾಯ ಯೋಜನೆಯೆಂದ್ರೆ ಅದು ಎನ್ ಪಿಎಸ್ ಆಗಿದೆ. ಬೇರೆ ಯಾವುದೇ ಉಳಿತಾಯ ಯೋಜನೆಗಳಲ್ಲಿ ಕ್ರೆಡಿಟ್ ಕಾರ್ಡ್ ಪಾವತಿ ವ್ಯವಸ್ಥೆ ಲಭ್ಯವಿಲ್ಲ. ಪ್ರಸ್ತುತ ಎನ್ ಪಿಎಸ್ ಟೈರ್ -II ಖಾತೆಗಳಿಗೆ (NPS Tier II accounts) ಮಾತ್ರ ಕ್ರೆಡಿಟ್ ಕಾರ್ಡ್ (Credit Card) ಬಳಕೆ ನಿಲ್ಲಿಸಲಾಗಿದೆ. ಆದರೆ, ಟೈರ್ -I ಖಾತೆಗಳಿಗೆ ಹಿಂದಿನಂತೆ ಈಗಲು ಕೂಡ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡುವ ವ್ಯವಸ್ಥೆ ಲಭ್ಯವಿದೆ.
ಮ್ಯೂಚುವಲ್ ಫಂಡ್ಸ್ (Mutual funds) ಅಥವಾ ಸ್ಟಾಕ್ (Stock) ಇತ್ಯಾದಿ ಹೂಡಿಕೆ (Investment) ಯೋಜನೆಗಳಿಗೆ ಪಾವತಿಗಳನ್ನು ಮಾಡಲು ಕ್ರೆಡಿಟ್ ಕಾರ್ಡ್ (Credit card) ಬಳಸಿ ಪಾವತಿ ಮಾಡೋದನ್ನು ಹೆಚ್ಚಾಗಿ ಪ್ರೋತ್ಸಾಹಿಸಲಾಗೋದಿಲ್ಲ. ಇದಕ್ಕೆ ಕಾರಣ ಅಧಿಕ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಭಯ. ಕ್ರೆಡಿಟ್ ಕಾರ್ಡ್ ಬಳಸಿ ನೆಟ್ ಬ್ಯಾಂಕಿಂಗ್ ಮೂಲಕ ಎನ್ ಪಿಎಸ್ ಗೆ ಪಾವತಿ ಮಾಡಲು ಕ್ರೆಡಿಟ್ ಕಾರ್ಡ್ ಬಳಕೆದಾರರು ಶೇ. 0.60ರಷ್ಟನ್ನು ಪೇಮೆಂಟ್ ಗೇಟ್ ವೇ ಶುಲ್ಕವಾಗಿ ಪಾವತಿಸಬೇಕು.
ವಿಳಂಬ ಐಟಿಆರ್ ಸಲ್ಲಿಕೆ ಮಾಡೋರಿಗೆ ಡಬಲ್ ಶಾಕ್; ದಂಡದ ಜೊತೆಗೆ ಪರಿಶೀಲನೆ ಅವಧಿಯೂ ಇಳಿಕೆ
ಎನ್ ಪಿಎಸ್ ಟೈರ್ -II ಖಾತೆಯನ್ನು ಚಂದಾದಾರರು ಸ್ವಯಂ ಖುಷಿಯಿಂದ ತೆರೆಯಬಹುದಾಗಿದೆ. ಆದರೆ, ಈ ಖಾತೆ ತೆರೆಯಲು ಅವರು ಎನ್ ಪಿಎಸ್ ಟೈರ್ -I ಖಾತೆ ಹೊಂದಿರೋದು ಅಗತ್ಯ. ಟೈರ್ -II ಖಾತೆ ಹೊಂದಿಕೆಯಾಗುವ ವಿತ್ ಡ್ರಾ ಹಾಗೂ ನಿರ್ಗಮನ ನಿಯಮಗಳನ್ನು ಹೊಂದಿದೆ. ಹಾಗೆಯೇ ಎನ್ ಪಿಎಸ್ ಟೈರ್ -II ಖಾತೆ ಯಾವುದೇ ತೆರಿಗೆ ವಿನಾಯ್ತಿ (Tax exemption) ಪಡೆಯಲು ಅರ್ಹತೆ ಹೊಂದಿಲ್ಲ.