ಸ್ವಿಗ್ಗಿ ಇನ್‌ಸ್ಟಾಮಾರ್ಟ್ ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ನಂದಿತಾ ಸಿನ್ಹಾ ಅವರನ್ನು ನೇಮಕ ಮಾಡಿದೆ. ಈ ಹಿಂದೆ ಮಿಂತ್ರಾ ಸಿಇಒ ಆಗಿ ಯಶಸ್ವಿಯಾಗಿದ್ದ ನಂದಿತಾ, ಫ್ಲಿಪ್‌ಕಾರ್ಟ್ ಮತ್ತು HUL ನಂತಹ ಕಂಪನಿಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ಇನ್‌ಸ್ಟಾಮಾರ್ಟ್ ಹೊಸ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ.

ಬೆಂಗಳೂರು: ದಿನಸಿ ಹಾಗೂ ದಿನಬಳಕೆಯ ವಸ್ತುಗಳನ್ನು ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಇನ್‌ಸ್ಟಾಮಾರ್ಟ್ (Swiggy Instamart) ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ನಂದಿತಾ ಸಿನ್ಹಾ ಅವರನ್ನು ನೇಮಕ ಮಾಡಿದೆ. ಈ ಮಹತ್ವದ ನೇಮಕವು ಆಗಸ್ಟ್ 03, 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿದ್ದು, ಇದುವರೆಗೆ ಈ ಹುದ್ದೆಯಲ್ಲಿದ್ದ ಅಮಿತೇಶ್ ಝಾ ಅವರ ಸ್ಥಾನವನ್ನು ನಂದಿತಾ ಅವರು ತುಂಬಲಿದ್ದಾರೆ.

ಯಾರಿವರು ನಂದಿತಾ ಸಿನ್ಹಾ?

ನಂದಿತಾ ಸಿನ್ಹಾ ಅವರು ಕಾರ್ಪೊರೇಟ್ ವಲಯದಲ್ಲಿ ಅಪಾರ ಅನುಭವ ಹೊಂದಿರುವ ದಿಗ್ಗದ ನಾಯಕಿಯಾಗಿದ್ದಾರೆ.

ಮಿಂತ್ರಾ ಸಿಇಒ ಸಾಧನೆ: ಇವರು ಇದಕ್ಕೂ ಮುನ್ನ ಪ್ರಸಿದ್ಧ ಫ್ಯಾಷನ್ ಇ-ಕಾಮರ್ಸ್ ತಾಣವಾದ ಮಿಂತ್ರಾ (Myntra) ಸಂಸ್ಥೆಯ ಸಿಇಒ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ ಮಾರುಕಟ್ಟೆಯಲ್ಲೂ ಮಿಂತ್ರಾವನ್ನು 2024ರಲ್ಲಿ ಲಾಭದ ಹಾದಿಗೆ ತಂದ ಪ್ರಮುಖ ಶ್ರೇಯ ಇವರಿಗೆ ಸಲ್ಲುತ್ತದೆ.

ದೈತ್ಯ ಕಂಪನಿಗಳಲ್ಲಿ ಅನುಭವ: ಫ್ಲಿಪ್‌ಕಾರ್ಟ್, ಬ್ರಿಟಾನಿಯಾ ಮತ್ತು ಹಿಂದೂಸ್ತಾನ್ ಯೂನಿಲಿವರ್‌ನಂತಹ (HUL) ವಿಶ್ವವಿಖ್ಯಾತ ದೈತ್ಯ ಕಂಪನಿಗಳಲ್ಲಿ ಉನ್ನತ ನಾಯಕತ್ವದ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಕನ್ಸೂಮರ್‌ ಇಂಟರ್ನೆಟ್, ಫ್ಯಾಷನ್ ಮತ್ತು ಎಫ್‌ಎಂಸಿಜಿ (FMCG) ವಲಯದಲ್ಲಿ ಇವರಿಗೆ ಬರೋಬ್ಬರಿ 20 ವರ್ಷಗಳ ದೀರ್ಘ ಅನುಭವವಿದೆ.

ಮೇಲ್ಮಟ್ಟದ ನಾಯಕರಿಂದ ಮೆಚ್ಚುಗೆ

ಈ ಬದಲಾವಣೆಯ ಕುರಿತು ಮಾತನಾಡಿದ ಸ್ವಿಗ್ಗಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಗ್ರೂಪ್ ಸಿಇಒ ಶ್ರೀಹರ್ಷ ಮಜೇಟಿ, "ಭಾರತದ ಅತ್ಯಂತ ಯಶಸ್ವಿ ಕನ್ಸೂಮರ್ ಇಂಟರ್ನೆಟ್ ನಾಯಕಿಯರಲ್ಲಿ ಒಬ್ಬರಾಗಿರುವ ನಂದಿತಾ ಅವರನ್ನು ಇನ್‌ಸ್ಟಾಮಾರ್ಟ್ ಸಿಇಒ ಆಗಿ ಸ್ವಾಗತಿಸಲು ನನಗೆ ಅತೀವ ಸಂತೋಷವಾಗುತ್ತಿದೆ. ಅವರ ಅತ್ಯುತ್ತಮ ದೂರದೃಷ್ಟಿ ಮತ್ತು ಗ್ರಾಹಕಸ್ನೇಹಿ ಕಾರ್ಯವೈಖರಿಯಿಂದ ಇನ್‌ಸ್ಟಾಮಾರ್ಟ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ, ನಿರ್ಗಮಿತ ಸಿಇಒ ಅಮಿತೇಶ್ ಝಾ ಅವರ ಸೇನೆಯನ್ನು ಸ್ಮರಿಸಿದ ಅವರು, "ಇನ್‌ಸ್ಟಾಮಾರ್ಟ್‌ನ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ಅಮಿತೇಶ್ ಝಾ ಅವರು ಅತ್ಯುತ್ತಮ ನಾಯಕತ್ವ ಒದಗಿಸಿದ್ದಾರೆ. ಸಂಸ್ಥೆಯನ್ನು ಬಲವಾದ ಸ್ಥಿತಿಗೆ ತಂದಿರುವ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ," ಎಂದು ಶುಭ ಹಾರೈಸಿದರು.

ನೂತನ ಸಿಇಒ ನಂದಿತಾ ಸಿನ್ಹಾ ಪ್ರತಿಕ್ರಿಯೆ

ತಮ್ಮ ಹೊಸ ಜವಾಬ್ದಾರಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದ ನಂದಿತಾ ಸಿನ್ಹಾ, "ಇನ್‌ಸ್ಟಾಮಾರ್ಟ್ ತಂಡ ಕಟ್ಟಿರುವ ಈ ವ್ಯವಹಾರವನ್ನು ನಾನು ಮೊದಲಿನಿಂದಲೂ ಮೆಚ್ಚಿದ್ದೇನೆ. ಇದೊಂದು ಗ್ರಾಹಕರಿಗೆ ಮೊದಲ ಆದ್ಯತೆ ನೀಡುವ ಅತ್ಯುತ್ತಮ ಸಂಸ್ಥೆಯಾಗಿದೆ. ಭಾರತೀಯರು ತಮ್ಮ ದೈನಂದಿನ ಅಗತ್ಯಗಳಿಗೆ ನಡೆಸುವ ಶಾಪಿಂಗ್ ಕೇಂದ್ರಿತವಾಗಿ ಇನ್‌ಸ್ಟಾಮಾರ್ಟ್ ಅದ್ಭುತವಾಗಿ ಬೆಳೆದಿದೆ. ಸಂಸ್ಥೆಯ ಮುಂದಿನ ಹಂತದ ಬೆಳವಣಿಗೆಯ ದೃಷ್ಟಿಯಿಂದ ನಮ್ಮ ನುರಿತ ತಂಡ ಮತ್ತು ಪಾಲುದಾರರೊಂದಿಗೆ ಕೈಜೋಡಿಸಿ ಕೆಲಸ ಮಾಡಲು ನಾನು ಉತ್ಸುಕಳಾಗಿದ್ದೇನೆ," ಎಂದು ತಿಳಿಸಿದರು.

ನಂದಿತಾ ಸಿನ್ಹಾ ಅವರ ಆಗಮನದಿಂದ ಇನ್‌ಸ್ಟಾಮಾರ್ಟ್ ತನ್ನ ಗ್ರಾಹಕ ಸೇವೆಯನ್ನು ಮತ್ತಷ್ಟು ಚುರುಕುಗೊಳಿಸುವ ಜೊತೆಗೆ, ಕ್ವಿಕ್ ಕಾಮರ್ಸ್ ವಲಯದಲ್ಲಿ ಲಾಭದಾಯಕತೆಯ ದೃಷ್ಟಿಯಿಂದ ಹೊಸ ಮೈಲಿಗಲ್ಲು ತಲುಪುವ ನಿರೀಕ್ಷೆಯಿದೆ.

ಇನ್‌ಸ್ಟಾಮಾರ್ಟ್ ಬೆಳವಣಿಗೆಯ ಹೆಜ್ಜೆಗಳು

ಆಗಸ್ಟ್ 2020ರಲ್ಲಿ ಕಾರ್ಯಾಚರಣೆ ಆರಂಭಿಸಿದ ಇನ್‌ಸ್ಟಾಮಾರ್ಟ್, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬೃಹತ್ ಡೆಲಿವರಿ ಪಡೆಯನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆಯುತ್ತಿದೆ. ಪ್ರಸ್ತುತ ದೇಶದ 131ಕ್ಕೂ ಹೆಚ್ಚು ನಗರಗಳಲ್ಲಿ ದಿನಸಿ ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳನ್ನು ಕ್ಷಿಪ್ರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.