Asianet Suvarna News Asianet Suvarna News

5ಜಿ ಸ್ಪೆಕ್ಟ್ರಮ್ ಗೆ ಭಾರೀ ಬೇಡಿಕೆ; ಎರಡನೇ ದಿನ 1.49 ಲಕ್ಷ ಕೋಟಿ ರೂ. ಬಿಡ್ ಸಲ್ಲಿಕೆ

*ಮಂಗಳವಾರದಿಂದ ಆರಂಭವಾಗಿರುವ 5ಜಿ  ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ
*5ಜಿ  ಸ್ಪೆಕ್ಟ್ರಮ್ ಗೆ ಎರಡನೇ ದಿನವಾದ ಬುಧವಾರ ಐದು ಸುತ್ತುಗಳಲ್ಲಿ ನಡೆದ ಬಿಡ್ಡಿಂಗ್
*ರಿಲಯನ್ಸ್‌ ಜಿಯೋ, ಭಾರ್ತಿ  ಏರ್‌ಟೆಲ್‌, ಅದಾನಿ ಒಡೆತನದ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ

5G Spectrum Auction Enters Third Day Bids Worth Rs 1.49 Lakh Cr Received On Day 2
Author
Bangalore, First Published Jul 28, 2022, 1:31 PM IST

ನವದೆಹಲಿ (ಜು.28): ಭಾರತದ ಮೊದಲ 5ಜಿ  ಸ್ಪೆಕ್ಟ್ರಮ್ ಹರಾಜಿನ ಎರಡನೇ ದಿನವಾದ ಬುಧವಾರ ಒಟ್ಟು 1.49 ಲಕ್ಷ ಕೋಟಿ ರೂ. ಮೊತ್ತದ ಬಿಡ್  ಸಲ್ಲಿಕೆಯಾಗಿದೆ.  ರಿಲಯನ್ಸ್‌ ಜಿಯೋ ಹಾಗೂ ಭಾರ್ತಿ ಏರ್‌ಟೆಲ್‌ ನಡುವೆ ಭಾರೀ ಪೈಪೋಟಿಯ ಬಿಡ್ಡಿಂಗ್ ನಡೆದಿರುವ ಕಾರಣ ಮಾರಾಟ ಪ್ರಕ್ರಿಯೆ ಮೂರನೇ ದಿನಕ್ಕೆ ಮುಂದೂಡಲ್ಪಟ್ಟಿದೆ. 5ಜಿ  ಸ್ಪೆಕ್ಟ್ರಮ್ ಗೆ ಬುಧವಾರ ಐದು ಸುತ್ತುಗಳಲ್ಲಿ ಬಿಡ್ಡಿಂಗ್ ನಡೆದಿದೆ.  5ಜಿ  ಸ್ಪೆಕ್ಟ್ರಮ್ ತಡೆರಹಿತ ಸಂಪರ್ಕ ಕಲ್ಪಿಸುವ ಜೊತೆಗೆ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲಿದೆ. ಎಲ್ಲ ಬ್ಯಾಂಡ್ ಗಳ ನಡುವೆ ಉತ್ತಮ ಪೈಪೋಟಿ ಕಂಡುಬಂದಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 700 ಮೆಗಾಹರ್ಟ್ಸ್‌ ಬ್ಯಾಂಡ್‌ಗಳಿಗೆ ಸಿಕ್ಕ ಪ್ರತಿಕ್ರಿಯೆಗೆ ಅಶ್ವಿನಿ ವೈಷ್ಣವ್ ಹರ್ಷ ವ್ಯಕ್ತಪಡಿಸಿದ್ದಾರೆ. 2016 ಹಾಗೂ  2021ರಲ್ಲಿ ನಡೆದ ಎರಡು ಹರಾಜಿನಲ್ಲಿ 700 ಮೆಗಾಹರ್ಟ್ಸ್‌ ಬ್ಯಾಂಡ್‌ಗಳಿಗೆ ಯಾವುದೇ ಖರೀದಿದಾರರು ಸಿಕ್ಕಿರಲಿಲ್ಲ. ಬಹುದೂರದ ಪ್ರದೇಶಗಳ ಕವರೇಜ್ ಗೆ ದುಬಾರಿ ಮೌಲ್ಯದ  700 ಮೆಗಾಹರ್ಟ್ಸ್‌ ಬ್ಯಾಂಡ್‌ ಅತೀಮುಖ್ಯ. 'ಈ ವಲಯವು ಹೊಸ ಉತ್ಸಾಹದೊಂದಿಗೆ ಮುನ್ನುಗ್ಗುತ್ತಿದೆ ಎನ್ನೋದು  5ಜಿ  ಸ್ಪೆಕ್ಟ್ರಮ್ ಹರಾಜಿಗೆ ವ್ಯಕ್ತವಾದ ಪ್ರತಿಕ್ರಿಯೆಯಲ್ಲಿ ಪ್ರತಿಫಲಿಸುತ್ತಿದೆ' ಎಂದು  ವೈಷ್ಣವ್ ವರದಿಗಾರರೊದಿಗೆ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉದ್ಯಮ ದಿಗ್ಗಜರಾದ ಮುಖೇಶ್ ಅಂಬಾನಿ, ಸುನೀಲ್ ಭಾರ್ತಿ ಮಿತ್ತಲ್ ಹಾಗೂ ಗೌತಮ್ ಅದಾನಿ ಒಡೆತನದ ಕಂಪನಿಗಳ ಜೊತೆಗೆ ವೊಡಾಫೋನ್‌ ಐಡಿಯಾ ಕೂಡ ಬಿಡ್ ನ ಮೊದಲ ದಿನವಾದ ಮಂಗಳವಾರ ನಡೆದ ನಾಲ್ಕು ಸುತ್ತುಗಳಲ್ಲಿ 1.45ಲಕ್ಷ ಕೋಟಿ ರೂ. ಬಿಡ್ ಗಳನ್ನು (Bids) ಸಲ್ಲಿಕೆ ಮಾಡಿದ್ದಾರೆ. ಬುಧವಾರವೂ ಐದು ಸುತ್ತುಗಳಲ್ಲಿ (Rounds)ಬಿಡ್ಡಿಂಗ್ ನಡೆದಿದೆ. ಗುರುವಾರ ಕೂಡ ಬಿಡ್ಡಿಂಗ್ ಮುಂದುವರಿಯಲಿದೆ ಎಂದು ವೈಷ್ಣವ್ ತಿಳಿಸಿದ್ದಾರೆ.

ಹಣದುಬ್ಬರ, ಆರ್ಥಿಕ ಹಿಂಜರಿತ ಭೀತಿಗೆ ನಲುಗಿದ ಮೆಟಾ: ಆದಾಯ ಕುಸಿತ, ಷೇರುಗಳು ಅಲ್ಲೋಲ ಕಲ್ಲೋಲ

ಹರಾಜಿನಲ್ಲಿ ಉತ್ತಮ ಸ್ಪರ್ಧೆ ನೋಡಿ ನನಗೆ ಸಂತಸವಾಗಿದೆ. ಎಲ್ಲ ಬಾಂಡ್ ಗಳಿಗೂ (Bands) ಉತ್ತಮ ಸ್ಪರ್ಧೆ ಏರ್ಪಟ್ಟಿದೆ ' ಎಂದು ಅವರು ತಿಳಿಸಿದರು. 'ಒಂಭತ್ತನೇ ಸುತ್ತಿನ ಕೊನೆಯಲ್ಲಿ ಈ ತನಕ  1,49,454 ಕೋಟಿ ರೂ. ಮೌಲ್ಯದ ಬಿಡ್ ಗಳನ್ನು ಸ್ವೀಕರಿಸಲಾಗಿದೆ' ಎಂದು  ವೈಷ್ಣವ್ ಮಾಹಿತಿ ನೀಡಿದ್ದಾರೆ. ವಿಶ್ಲೇಷಕರ ಪ್ರಕಾರ ಅಂಬಾನಿ ಅವರ ರಿಲಯನ್ಸ್ ಜಿಯೋ ಈ ಸ್ಪರ್ಧೆಯಲ್ಲಿ ಅತ್ಯಂತ ಆಕ್ರಮಣಕಾರಿಯಾಗಿದೆ.

700   ಮೆಗಾಹರ್ಟ್ಸ್‌, 800 ಮೆಗಾಹರ್ಟ್ಸ್‌, 900  ಮೆಗಾಹರ್ಟ್ಸ್‌, 1800  ಮೆಗಾಹರ್ಟ್ಸ್‌, 2100 ಮೆಗಾಹರ್ಟ್ಸ್‌, 2500  ಮೆಗಾಹರ್ಟ್ಸ್‌, 3300  ಮೆಗಾಹರ್ಟ್ಸ್‌ ಹಾಗೂ 26  ಗಿಗಾ ಹರ್ಟ್ಸ್‌ ಬಾಂಡ್ ಗಳಿಗೆ ಬೇಡಿಕೆ ವ್ಯಕ್ತವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 

ಮೊದಲ ದಿನದ ಹರಾಜಿನಲ್ಲೇ ಬಿಡ್‌ ಮೊತ್ತ 1.45 ಲಕ್ಷ ಕೋಟಿ ರೂ. ದಾಟುವ ಮೂಲಕ ಸರ್ಕಾರದ ಎಲ್ಲ ಅಂದಾಜುಗಳನ್ನು ಮೀರಿದೆ. ಅಲ್ಲದೆ, 2015ನೇ ಸಾಲಿನ ದಾಖಲೆಯ ಮಟ್ಟವನ್ನು ಕೂಡ ಮುರಿದಿದೆ. ಆ ವರ್ಷ ಹರಾಜಿನಿಂದ 1.09 ಲಕ್ಷ ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಇನ್ನು ಎರಡನೇ ದಿನದ ಬಿಡ್ಡಿಂಗ್ ಹಾಗೂ ಬೇಡಿಕೆಯಲ್ಲಿ ಸರ್ಕಾರದ ಆಂತರಿಕ ಅಂದಾಜು 80,000 ಕೋಟಿ ರೂ.ಗಿಂತ ಶೇ.87ರಷ್ಟು ಹೆಚ್ಚಳ ಕಂಡುಬಂದಿದೆ. 

ಆಗಸ್ಟ್ ನಲ್ಲಿ ಈ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ!

ವಿವಿಧ ಬ್ಯಾಂಡ್ ಗಳ ಅಂದ್ರೆ ಕಡಿಮೆ (600 ಮೆಗಾ ಹರ್ಟ್ಸ್‌, 700 ಮೆ.ಹ, 800 ಮೆ.ಹ, 900 ಮೆ.ಹ, 1800 ಮೆ.ಹ, 2100 ಮೆ.ಹ, 2300 ಮೆ.ಹ), ಮಧ್ಯಮ (3300 ಮೆ.ಹ) ಮತ್ತು ಹೆಚ್ಚಿನ (26 ಗಿಗಾ ಹರ್ಟ್ಸ್‌) ಆವರ್ತನ ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್‌ಗಳ ಹರಾಜು ನಡೆಸಲಾಗುತ್ತಿದೆ.


 

Follow Us:
Download App:
  • android
  • ios