ಮುಂಬೈ(ಅ.13): ಭಾರತೀಯ ಷೇರು ಮಾರುಕಟ್ಟೆ ಕಳೆದ ಕೆಲವು ದಿನಗಳಿಂದ ಅಯೋಮಯದ ಪರಿಸ್ಥಿತಿಯಲ್ಲಿದೆ. ಒಮ್ಮೆ ಉತ್ತಮ ಅಂಕಗಳನ್ನು ಪಡೆದು ಗೂಳಿ ನೆಗೆತ ತೋರಿಸುವ ಷೇರು ಮಾರುಕಟ್ಟೆ, ಮತ್ತೊಮ್ಮೆ ಕನಿಷ್ಠ ಅಂಕ ಪಡೆದು ಗೂಳಿ ಕಣ್ಣಲ್ಲಿ ನೀರು ತರಿಸುತ್ತಿದೆ.

ಕಳೆದೊಂದು ವಾರದಲ್ಲೇ ಮುಂಬೈ ಷೇರು ಮಾರುಕಟ್ಟೆ ಡೋಲಾಯಮಾನ ಪರಿಸ್ಥಿತಿಯಲ್ಲಿದ್ದು, ಲಾಭ ನಷ್ಟ ಎಂಬ ಹಾವು ಏಣಿ ಆಟದಲ್ಲಿ ಸಿಲುಕಿಕೊಂಡಿದೆ. ಈ ಬೆಳವಣಿಗೆಯಿಂದ ಹೂಡಿಕೆದಾರ ಕೂಡ ಹರ್ಷ ಮತ್ತು ದು:ಖ ಎಂಬ ಎರಡು ದೋಣಿಯಲ್ಲಿ ಕಾಲಿರಿಸಿ ಸಂಚರಿಸುತ್ತಿದ್ದಾನೆ.

ಈ ಮಧ್ಯೆ ಸೆನ್ಸೆಕ್ಸ್ ನ ಅತಂತ್ರ ಸ್ಥಿತಿಯಲಲ್ಲಿ ಮ್ಯೂಚುವಲ್ ಫಂಡ್ಸ್ ಗಳಲ್ಲಿ ಹಣ ಹೂಡಿಕೆ ಮಾಡಿರುವವರ ಗತಿಯೇನು ಎಂಬುದು ಚರ್ಚೆಯಾಗುತ್ತಿರುವ ಪ್ರಮುಖ ವಿಷಯವಾಗಿದೆ. ಸದ್ಯ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಆಶಾಭಾವ ಪರಿಸ್ಥಿತಿ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾರುಕಟ್ಟೆ ಅನಿಶ್ಚಿತತೆ ಪರಿಣಾಮ ಮ್ಯೂಚುವಲ್ ಫಂಡ್ಸ್ ಕ್ಷೇತ್ರ ಕೂಡ ನಷ್ಟ ಅನುಭವಿಸುತ್ತಿದ್ದು, ಮ್ಯೂಚುವಲ್ ಫಂಡ್ಸ್ ಹೂಡಿಕೆದಾರರು ಆತಂಕದಲ್ಲಿದ್ದಾರೆ. ಆದರೆ ಹೂಡಿಕೆ ಹಿಂತೆಗೆತದಂತ ಪರಿಸ್ಥಿತಿ ಇನ್ನೂ ನಿರ್ಮಾಣವಾಗದೇ ಇರುವುದರಿಂದ ಈ ಆತಂಕ ಕ್ಷಣಿಕ ಮಾತ್ರ ಎನ್ನೂವವರೂ ಇದ್ದಾರೆ.

ಷೇರು ಮಾರುಕಟ್ಟೆ ಪರಿಸ್ಥಿತಿ ಅವಲೋಕಿಸದೇ ದೀರ್ಘಕಾಲದವರೆಗೆ ಸಂಯಮದಿಂದ ಗಟ್ಟಿಯಾಗಿ ನಿಲ್ಲುವ ಹೂಡಿಕೆದಾರರು ಖಂಡಿತ ಲಾಭ ಪಡೆಯಲಿದ್ದಾರೆ ಎಂಬುದು ತಜ್ಞರ ಅಭಿಪ್ರಾಐವಾಗಿದೆ. ಇನ್ನು ಈ ಪರಿಸ್ಥಿತಿಯನ್ನು ಕೇವಲ ಭಾರತೀಯ ಮಾರುಕಟ್ಟೆ ಅಷ್ಟೇ ಅಲ್ಲದೇ ಏಶಿಯಾ ಮತ್ತು ಜಾಗತಿಕ ಮಾರುಕಟ್ಟೆಯೂ ಎದುರಿಸುತ್ತಿದೆ ಎಂಬುದು ತಜ್ಞರ ಸಮರ್ಥನೆ.