ಮುಂಬೈ[ಮಾ.13]: ದೇಶದ ಟಾಪ್ ಶ್ರೀಮಂತ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ ತನ್ನ ಮಗನ ಮದುವೆ ಸಂಭ್ರಮವನ್ನು ದೇಶದ ಸೇನಾ ಪಡೆ ಹಾಗೂ ಭದ್ರತಾ ಪಡೆಯ ಸಿಬ್ಬಂದಿಯೊಂದಿಗೆ ಆಚರಿಸಿಕೊಂಡಿದ್ದಾರೆ.

ಮುಕೇಶ್ ಹಾಗೂ ನೀತಾ ಅಂಬಾನಿ ಮಗನ ಸಂಭ್ರಮಾಚರಣೆಗೆ ದೇಶದ ಭೂಸೇನೆ, ನೌಕಾದಳ, ಪ್ಯಾರಾ ಮಿಲಿಟರಿ ಪಡೆ, ಮುಂಬೈ ಪೊಲೀಸ್, ರೈಲ್ವೇ ಭದ್ರತಾ ಪಡೆಯ ಸಾವಿರಾರು ಸೈನಿಕರು ಹಾಗೂ ಅವರ ಕುಟುಂಬಸ್ಥರನ್ನು ಆಹ್ವಾನಿಸಲಾಗಿತ್ತು. ಇನ್ನು ಸೈನಿಕರ ಬಳಿ ತಮ್ಮ ಮಗ ಹಾಗೂ ಸೊಸೆಗೆ ಆಶೀರ್ವದಿಸಿ ಹಾರೈಸಬೇಕೆಂದು ಮುಕೇಶ್ ಅಂಬಾನಿ ಹಾಗೂ ಪತ್ನಿ ವಿಶೇಷವಾಗಿ ಕೇಳಿಕೊಂಡಿದ್ದಾರೆ. 

ಮುಂಬೈನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಧೀರೂಭಾಯಿ​ ಅಂಬಾನಿ ಸ್ಕ್ವೇರ್​​ನಲ್ಲಿ ನಡೆದ ಆಕಾಶ್ ಹಾಗೂ ಶ್ಲೋಕಾ ಮೆಹ್ತಾ ಮದುವೆ ಸಂಭ್ರಮಾಚರಣೆ ಸಂದರ್ಭದಲ್ಲಿ ಸೇನಾ ಹಾಗೂ ಭದ್ರತಾ ಪಡೆಯ ಗೌರವಾರ್ಥವಾಗಿ ಡಾನ್ಸ್ ಹಾಗೂ ಮ್ಯೂಸಿಕಲ್ ಫೌಂಟೇನ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 'ಅನಂತ್ ಪ್ರೇಮ್' ಹೆಸರಿನ ಮ್ಯೂಸಿಕಲ್ ಫೌಟಂಟೇನ್ ಶೋ ವಿಶೇಷವಾಗಿ ಗಮನ ಸೆಳೆದಿತ್ತು.

 ಕಾರ್ಯಕ್ರಮದ ವೇಳೆ ಮಾತನಾಡಿದ ನೀತಾ ಅಂಬಾನಿ 'ದೇಶದ ರಕ್ಷಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ನಮಗೆ ಬಹಳಷ್ಟು ಖುಷಿ, ಹೆಮ್ಮೆಯ ವಿಚಾರ. ಇದೊಂದು ಭಾವನಾತ್ಮಕ​ ಹಾಗೂ ಸಂಭ್ರಮದ ಕಾರ್ಯಕ್ರಮ. ನಮ್ಮನ್ನು ಹೆಮ್ಮೆ ಪಡುವಂತೆ ಮಾಡುವ ಈ ನಾಯಕರು ಆಕಾಶ್​​ ಹಾಗೂ ಶ್ಲೋಕಾಗೆ ಆಶೀರ್ವಾದ ನೀಡುತ್ತಾರೆ ಎಂದುಕೊಳ್ತೀನಿ' ಎಂದಿದ್ದಾರೆ.