ನ್ಯೂಯಾರ್ಕ್(ಏ.08): ಅಮೆರಿಕದ ಫೋರ್ಬ್ಸ್ ನಿಯತಕಾಲಿಕೆ ಜಾಗತಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ, ಚೀನಾದ ಉದ್ಯಮಿ ಜಾಕ್‌ ಮಾ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಮರಳಿ ಪಡೆದಿದ್ದಾರೆ.

ಅಮೆಜಾನ್‌ ಸಿಇಒ ಜೆಫ್‌ ಬೆಜೋಸ್‌ 13 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಸತತ ನಾಲ್ಕನೇ ವರ್ಷವೂ ಅಗ್ರಸ್ಥಾನ ಅಲಂಕರಿಸಿದ್ದಾರೆ. ವರ್ಷದ ಹಿಂದಷ್ಟೇ 31ನೇ ಸ್ಥಾನದಲ್ಲಿದ್ದ ಸ್ಪೇಸ್‌ ಎಕ್ಸ್‌ ಸ್ಥಾಪಕ ಎಲಾನ್‌ ಮಸ್ಕ್‌ 11.17 ಲಕ್ಷ ಕೋಟಿ ಸಂಪತ್ತಿನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಭಾರತ ಹಾಗೂ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿರುವ ಮುಕೇಶ್‌ ಅಂಬಾನಿ 6.25 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಜಾಗತಿಕ ಶ್ರಿಮಂತರ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ್ದ ಜಾಕ್‌ ಮಾ ಈ ಬಾರಿ 26ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್‌ ಅದಾನಿ 3.73 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಭಾರತದ 2ನೇ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದು, ಜಾಗತಿಕವಾಗಿ 24ನೇ ಸ್ಥಾನ ಪಡೆದಿದ್ದಾರೆ. ಎಚ್‌ಸಿಎಲ್‌ ಟೆಕ್ನಾಲೊಜಿಸ್‌ನ ಸ್ಥಾಪಕ ಶಿವ ನಾಡರ್‌ 1.23 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಭಾರತದ 3ನೇ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.

ಅತಿ ಹೆಚ್ಚು ಶತಕೋಟ್ಯಧೀಶರ ಪಟ್ಟಿಯಲ್ಲಿ ಭಾರತ ವಿಶ್ವ ನಂ. 3

ಅತಿ ಹೆಚ್ಚು ಶತಕೋಟ್ಯಧೀಶರನ್ನು ಹೊಂದಿರುವ ದೇಶಗಳ ಪೈಕಿ ಭಾರತ 3ನೇ ಸ್ಥಾನದಲ್ಲಿದೆ. ಕ್ರಮವಾಗಿ ಮೊದಲ 2 ಎರಡು ಸ್ಥಾನ ಹೊಂದಿರುವ ಅಮೆರಿಕ ಮತ್ತು ಚೀನಾದಲ್ಲಿ 724 ಮತ್ತು 698 ಜನರಿದ್ದರೆ, ಭಾರತದಲ್ಲಿ ಅಷ್ಟು ಆಸ್ತಿ ಹೊಂದಿರುವವರ ಸಂಖ್ಯೆ 130ರಷ್ಟಿದೆ.

ಭಾರತದ ಟಾಪ್‌ 3

ಮುಕೇಶ್‌ ಅಂಬಾನಿ 6.25 ಲಕ್ಷ ಕೋಟಿ ರು

ಗೌತಮ್‌ ಅದಾನಿ 3.73 ಲಕ್ಷ ಕೋಟಿ ರು.

ಶಿವ ನಾಡರ್‌ 1.23 ಲಕ್ಷ ಕೋಟಿ ರು.