ಈ ವರ್ಷ ಸಂಪತ್ತು ಗಳಿಕೆಯಲ್ಲೂ ಮುಖೇಶ್ ಅಂಬಾನಿ ನಂ.1;ಮೂರನೇ ಸ್ಥಾನಕ್ಕೆ ಜಾರಿದ ಸಾವಿತ್ರಿ ಜಿಂದಾಲ್
ಈ ವರ್ಷ ಜಿಂದಾಲ್ ಗ್ರೂಪ್ ಮುಖ್ಯಸ್ಥೆ ಸಾವಿತ್ರಿ ಜಿಂದಾಲ್ ಅತೀಹೆಚ್ಚು ಸಂಪತ್ತು ಗಳಿಸಿದ್ದಾರೆ ಎಂದು ಹೇಳಲಾಗಿತ್ತು.ಆದರೆ, ಇತ್ತೀಚಿನ ಬ್ಲೂಮ್ ಬರ್ಗ್ ವರದಿ ಅನ್ವಯ ಮುಖೇಶ್ ಅಂಬಾನಿ ಸಂಪತ್ತಿಗೆ ಅತೀಹೆಚ್ಚು ಸೇರ್ಪಡೆಯಾಗಿದೆ. ಈ ಮೂಲಕ ಸಂಪತ್ತು ಗಳಿಕೆಯಲ್ಲೂ ಅಂಬಾನಿ ನಂ.1.
ನವದೆಹಲಿ (ಡಿ.30): ಭಾರತದ ನಂ.1 ಶ್ರೀಮಂತ ಉದ್ಯಮಿ ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಮುಖೇಶ್ ಅಂಬಾನಿ 2023ನೇ ಸಾಲಿನಲ್ಲಿ ಸಂಪತ್ತು ಗಳಿಕೆಯಲ್ಲಿ ಕೂಡ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಅಂಬಾನಿ ಅವರ ಒಟ್ಟು ಸಂಪತ್ತಿಗೆ ಈ ವರ್ಷ 9.98 ಶತಕೋಟಿ ಡಾಲರ್ ಸೇರ್ಪಡೆಯಾಗುವ ಮೂಲಕ ಜಿಂದಾಲ್ ಗ್ರೂಪ್ ಮುಖ್ಯಸ್ಥೆ ಸಾವಿತ್ರಿ ಜಿಂದಾಲ್ ಅವರನ್ನು ಹಿಂದಿಕ್ಕಿ ಗಳಿಕೆಯಲ್ಲೂ ಮುಂಚೂಣಿ ಕಾಯ್ದುಕೊಂಡಿದ್ದಾರೆ. ಇದನ್ನು ಬ್ಲೂಮ್ ಬರ್ಗ್ ಅಂಕಿಅಂಶಗಳೇ ದೃಢೀಕರಿಸಿವೆ ಎಂದು ಕೆಲವು ಮಾಧ್ಯಮ ವರದಿಗಳು ತಿಳಿಸಿವೆ. ಕೆಲವು ದಿನಗಳ ಹಿಂದಷ್ಟೇ ಬ್ಲೂಮ್ ಬರ್ಗ್ ಬಿಲಿಯನೇರ್ ಗಳ ಸೂಚ್ಯಂಕ ಈ ಕ್ಯಾಲೆಂಡರ್ ವರ್ಷದಲ್ಲಿ ಸಾವಿತ್ರಿ ಜಿಂದಾಲ್ ಸಂಪತ್ತಿನಲ್ಲಿ ಉಳಿದ ಭಾರತೀಯರಿಗಿಂತ ಅಧಿಕ ಏರಿಕೆಯಾಗಿದೆ ಎಂದು ತಿಳಿಸಿತ್ತು. ಆದರೆ, ಈಗ ಸಾವಿತ್ರಿ ಜಿಂದಾಲ್ ಸಂಪತ್ತು ಗಳಿಕೆಯಲ್ಲಿ ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಎರಡನೇ ಸ್ಥಾನದಲ್ಲಿ ಎಚ್ ಸಿಎಲ್ ಸ್ಥಾಪಕ ಶಿವ್ ನಡಾರ್ ಇದ್ದಾರೆ.
ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರ ಸಂಪತ್ತಿನಲ್ಲಿ 2023ನೇ ಸಾಲಿನಲ್ಲಿ ಈ ಹಿಂದೆ 9.6 ಶತಕೋಟಿ ಡಾಲರ್ ಏರಿಕೆಯಾಗಿದೆ ಎಂದು ಹೇಳಲಾಗಿತ್ತು. ಆದರೆ, ಈಗಿನ ವರದಿ ಅನ್ವಯ ಅವರ ಸಂಪತ್ತಿನಲ್ಲಿ 9 ಶತಕೋಟಿ ಡಾಲರ್ ಏರಿಕೆಯಾಗಿದೆ. ಸಂಪತ್ತು ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿರುವ ಶಿವ್ ನಡಾರ್ ಅವರ ಒಟ್ಟು ಸಂಪತ್ತಿಗೆ ಈ ವರ್ಷ 9.47 ಶತಕೋಟಿ ಡಾಲರ್ ಸೇರ್ಪಡೆಯಾಗಿದೆ. ಇದರಿಂದ ಶಿವ್ ನಡಾರ್ ಅವರ ಒಟ್ಟು ಸಂಪತ್ತು 34 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಅಂದರೆ ಎಚ್ ಸಿಎಲ್ ಷೇರುಗಳಲ್ಲಿ ಈ ವರ್ಷ ಶೇ.41ರಷ್ಟು ಏರಿಕೆಯಾಗಿದೆ.
ಅಂಬಾನಿ,ಅದಾನಿಗಿಂತಲೂ ಹೆಚ್ಚು ಸಂಪತ್ತು ಗಳಿಸಿದ ಸಾವಿತ್ರಿ ಜಿಂದಾಲ್; ಸಂಪತ್ತಿನಲ್ಲಿ9.6 ಶತಕೋಟಿ ಡಾಲರ್ ಏರಿಕೆ
ಸಂಪತ್ತು ಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿರುವ ಸಾವಿತ್ರಿ ಜಿಂದಾಲ್ ನಿವ್ವಳ ಸಂಪತ್ತಿನಲ್ಲಿ ಈ ವರ್ಷ 9 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಇನ್ನು ಅವರ ನಿವ್ವಳ ಸಂಪತ್ತು 24.7 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಅವರ ಸಂಪತ್ತಿನ ಬಹುಭಾಗ ಜಿಂದಾಲ್ ಸ್ಟೇಲ್, ಜಿಂದಾಲ್ ಸ್ಟೀಲ್ ಆಂಡ್ ಪವರ್, ಜಿಂದಾಲ್ ಎನರ್ಜಿಯಿಂದ ಬಂದಿದೆ.
ಮುಖೇಶ್ ಅಂಬಾನಿ ಅವರ ಸಂಪತ್ತಿನಲ್ಲಿ ಈ ವರ್ಷ ಭಾರೀ ಹೆಚ್ಚಳವಾಗಲು ಕಾರಣವಾಗಿದ್ದು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಲ್ಲಿ ಶೇ.9ರಷ್ಟು ಏರಿಕೆಯಾಗಿರೋದು ಹಾಗೂ ಜಿಯೋ ಫೈನಾನ್ಸಿಯಲ್ ಸರ್ವೀಸಸ್ ಸ್ಟಾಕ್ ಷೇರುಗಳು ಲಿಸ್ಟಿಂಗ್ ಆಗಿರೋದು. ಇದರಿಂದಾಗಿಯೇ ಈ ವರ್ಷ ಮುಖೇಶ್ ಅಂಬಾನಿ ಅವರ ಸಂಪತ್ತಿಗೆ 9.98 ಶತಕೋಟಿ ಡಾಲರ್ ಸೇರ್ಪಡೆಯಾಗಿದ್ದು, ಅವರ ಒಟ್ಟು ಸಂಪತ್ತು 97.1 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಈ ಮೂಲಕ ಮುಖೇಶ್ ಅಂಬಾನಿ ಭಾರತದ ಶ್ರೀಮಂತ ಉದ್ಯಮಿ ಎಂಬ ಬಿರುದನ್ನು ಈ ವರ್ಷ ಉಳಿಸಿಕೊಂಡಿದ್ದಾರೆ.
ಇನ್ನು ಡಿಎಲ್ ಎಫ್ ಮುಖ್ಯಸ್ಥ ಕೆ.ಪಿ.ಸಿಂಗ್ ಅವರ ಸಂಪತ್ತಿಗೆ 7.83 ಶತಕೋಟಿ ಡಾಲರ್ ಸೇರ್ಪಡೆಯಾಗಿದ್ದು, ನಾಲ್ಕನೇ ಸ್ಥಾನದಲ್ಲಿದ್ದಾರೆ. ಶಾಪೂರ್ ಮಿಸ್ತ್ರ ಅವರ ಸಂಪತ್ತಿಗೆ 7.41 ಶತಕೋಟಿ ಡಾಲರ್ ಸೇರ್ಪಡೆಯಾಗಿದೆ. ಕುಮಾರ್ ಮಂಗಲಂ ಬಿರ್ಲಾಅವರ ಸಂಪತ್ತಿಗೆ 7.09 ಶತಕೋಟಿ ಡಾಲರ್ ಸೇರ್ಪಡೆಗೊಂಡಿದೆ. ಇನ್ನು ಈ ವರ್ಷದಲ್ಲಿ ಹೆಚ್ಚು ಸಂಪತ್ತು ಗಳಿಸಿದವರ ಪಟ್ಟಿಯಲ್ಲಿ ದಿಲೀಪ್ ಶಾಂಘವಿ, ರವಿ ಜೈಪುರಿಯಾ, ಆದಿತ್ಯ ಬಿರ್ಲಾ ಮತ್ತಿತರರು ಇದ್ದಾರೆ.
ಹೊಸ ವರ್ಷದಲ್ಲಿ ಮುಕೇಶ್ ಅಂಬಾನಿ ಬಿಗ್ ಬಿಸಿನೆಸ್ ಪ್ಲಾನ್ , AI ಬಳಸಿ ಕೋಟಿ ಕೋಟಿ ಗಳಿಸುತ್ತಾ ಅಂಬಾನಿ ಗ್ರೂಪ್!
ಅತೀಹೆಚ್ಚು ಸಂಪತ್ತು ಕಳೆದುಕೊಂಡ ಅದಾನಿ
ಈ ವರ್ಷ ಅತೀಹೆಚ್ಚು ಸಂಪತ್ತು ಕಳೆದುಕೊಂಡ ಉದ್ಯಮಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ. ಭಾರತದ ಎರಡನೇ ಶ್ರೀಮಂತ ಉದ್ಯಮಿಯಾಗಿರುವ ಅದಾನಿ ಅವರ ಸಂಪತ್ತಿನಲ್ಲಿ ಈ ವರ್ಷ 37 ಶತಕೋಟಿ ಡಾಲರ್ ಇಳಿಕೆಯಾಗಿದೆ. ಇದರಿಂದ ಅವರ ಒಟ್ಟು ಸಂಪತ್ತು 83.2 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ. ಈ ಹಿಂದೆ ಅವರ ಒಟ್ಟು ಸಂಪತ್ತು 110 ಬಿಲಿಯನ್ ಡಾಲರ್ ಗೆ ಏರಿಕೆಯಾಗಿತ್ತು. ಆದರೆ, ಫೆಬ್ರವರಿಯಲ್ಲಿ ಹಿಂಡೆನ್ ಬರ್ಗ್ ವರದಿ ಬಿಡುಗಡೆಯಾದ ಬಳಿಕ ಭಾರೀ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಸಂಪತ್ತಿನಲ್ಲಿ ಇಳಿಕೆಯಾಗಿದೆ.