ನವದೆಹಲಿ[ಜೂ.14]: ಮದ್ಯದ ದೊರೆ ಪಾಂಟಿ ಛಡ್ಡಾ ಅವರ ಮಗ ಹಾಗೂ ವೇವ್‌ ಗ್ರೂಪ್‌ನ ಉಪಾಧ್ಯಕ್ಷ ಮನ್‌ಪ್ರೀತ್‌ಸಿಂಗ್‌ ಛಡ್ಡಾ ಅಲಿಯಾಸ್‌ ಮೋಂಟಿ ಛಡ್ಡಾನನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿದೆ.

ಸುಮಾರು 100 ಕೋಟಿ ಅವ್ಯವಹಾರದ ಸಂಪರ್ಕ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ದಳ ಥಾಯ್ಲೆಂಡ್‌ನ ಫುಕೆಟ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಬಂಧಿಸಿದೆ. ಘಾಜಿಯಾಬಾದ್‌ನಲ್ಲಿ ಹೈಟೆಕ್‌ ಟೌನ್‌ಶಿಪ್‌ ನಿರ್ಮಾಣ ಮತ್ತು ಮನೆ ಹಂಚಿಕೆ ಸಂಬಂಧ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮನೆಯನ್ನೂ ನೀಡದೇ, ಹಣವನ್ನೂ ಹಿಂದಿರುಗಿಸದೇ ಮೋಸ ಎಸಗಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಅವರನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪಾಂಟಿ ಛಡ್ಡಾ ಹಾಗೂ ಅವರ ಸಹೋದರನನ್ನು 2012ರಲ್ಲಿ ಅನಾಮಧೇಯ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ನಂತರ ಎಲ್ಲ ವ್ಯವಹಾರವನ್ನು ಮೋಂಟಿ ಛಡ್ಡಾ ವಹಿಸಿಕೊಂಡಿದ್ದರು.