ಎಟಿಎಂನಿಂದ ಹಣ ಕದಿಯಲು ಹೊಸ ಮಾರ್ಗವೊಂದನ್ನು ಕಳ್ಳರು ಕಂಡುಕೊಂಡಿದ್ದಾರೆ. ಇಲ್ಲಿ ಹಣ ಕದಿಯಲು ನಿಮ್ಮ ಡೆಟಿಎಂ ಕಾರ್ಡ್, ಪಿನ್ ನಂಬರ್ ಬೇಕಾಗಿಲ್ಲ. ಕೇವಲ ಆಧಾರ್ ಅಥವಾ ಬಯೋಮೆಟ್ರಿಕ್ ಮಾಹಿತಿಯಷ್ಟೇ ಬಳಸಲಾಗುತ್ತದೆ. ಹೌದು ನೀವು ಆಧಾರ್ ಕಾರ್ಡ್ ಮಾಡುವ ವೇಳೆ ಬಯೋಮೆಟ್ರಿಕ್ ಮಷೀನ್‌ಗೆ ಬೆರಳಿನ ಗುರುತು ನೀಡಿರಬಹುದು. ಸದ್ಯ ಇದೇ ಬೆರಳಚ್ಚುವಿನಿಂದ ನಿಮ್ಮ ಹಣ ಎಟಿಎಂನಿಂದ ಕದಿಯಲಾಗುತ್ತಿದೆ.

ಹರ್ಯಾಣ ನಿವಾಸಿ, 40 ವರ್ಷದ ವಿಕ್ರಮ್ ಎಂಬವರ ಫೋನ್ ಗೆ ಇದ್ದಕ್ಕಿದ್ದಂತೆಯೇ ಮೆಸೇಜ್ ಒಂದು ಬಂದಿದೆ. ಈ ಸಂದೇಶದಲ್ಲಿ ನಿಮ್ಮ ಫಿಂಗರ್ ಪ್ರಿಂಟ್ ಗುರುತಿನಿಂದ ದೆಹಲಿಯ ಒಂದು ಮೈಕ್ರೋ ಎಟಿಎಂನಿಂದ 1 ಸಾವಿರ ರೂಪಾಯಿ ಡ್ರಾ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಈ ಘಟನೆ ನಡೆದ ಕೇವಲ 1 ವಾರದ ಬಳಿಕ ಇಂತಹುದೇ ಮೈಕ್ರೋ ಎಟಿಎಂನಿಂದ 7500 ರೂಪಾಯಿ ಡ್ರಾ ಮಾಡಲಾಯಿತು. ಆದರೆ ಈ ಬಾರಿ ಹಣವನ್ನು ಬಿಹಾರದ ಎಟಿಎಂನಿಂದ ತೆಗೆಯಲಾಗಿತ್ತು.

ಮೈಕ್ರೋ ಎಟಿಎಂನಿಂದ ಹಣ ಡ್ರಾ ಮಾಡಲು ಪಿನ್ ಅಥವಾ ಪಾಸ್ ವರ್ಡ್ ನಂಬರ್ ಬೇಕಾಗುವುದಿಲ್ಲ. ಇಲ್ಲಿ ಕೇವಲ ನಿಮ್ಮ ಡೆಬಿಟ್ ಕಾರ್ಡ್/ಆಧಾರ್ ಕಾರ್ಡ್ ನೊಂದಿಗೆ ಫಿಂಗರ್ ಪ್ರಿಂಟ್ ಅಗತ್ಯ ಬೀಳುತ್ತದೆ ಎಂಬುವುದು ಗಮನಾರ್ಹ.

ಇದು ನಡೆದದ್ದು ಹೇಗೆ?

ಟೈಮ್ಸ್ ಆಫ್ ಇಂಡಿಯಾದ ವರದಿಯನ್ವಯ ವಿಕ್ರಮ್ ಆಧಾರ್ ಕಾರ್ಡ್ ಮಾಡುವ ಉದ್ಯೋಗದಲ್ಲಿದ್ದ. ಇದನ್ನರಿತ ಹ್ಯಾಕರ್ಸ್ UIDAI ಸಾಫ್ಟ್ ವೇರ್ ನಲ್ಲಿ ವಿಕ್ರಮ್ ರವರ ವೈಯುಕ್ತಿಕ ಐಡಿ ಹಾಗೂ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿದ್ದಾರೆ. ಇಷ್ಟೇ ಅಲ್ಲದೇ ನಕಲಿ ಕಾರ್ಡ್ ಗಳನ್ನು ಮಾಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಹ್ಯಾಕರ್ಸ್ ವಿಕ್ರಮ್ ರವರ ಬಯೋಮೆಟ್ರಿಕ್ ಮಾಹಿತಿ ಮೂಲಕ ಮೈಕ್ರೋ ಎಟಿಎಂನಿಂದ ಹಣವನ್ನೂ ಕದ್ದಿದ್ದಾರೆ ಹಾಗೂ ಇನ್ನುಳಿದ ಕೆಲ ಸರ್ಕಾರಿ ವೆಬ್ ಸೈಟ್ ಗಳಿಗೂ ಲಾಗಿನ್ ಆಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ವಿಕ್ರಮ್ ಈ ಕುರಿತಾಗಿ ದೂರು ನೀಡಿ ತಮ್ಮ ಬಯೋಮೆಟ್ರಿಕ್ ಲಾಕ್ ಮಾಡಿಸಿದ್ದಾರೆ.

ನೀವು ಹೇಗೆ ಇದರಿಂದ ಪಾರಾಗುವುದು?

ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಲಾಕ್ ಮಾಡಲು https://resident.uidai.gov.in/biometric-lock ಗೆ ತೆರಳಿ ನಿಮ್ಮ ಆಧಾರ್ ನಂಬರ್ ನಮೂದಿಸಿ. ಬಳಿಕ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುವ OTP ನಂಬರ್ ನಿಂದ ಲಾಕ್ ಮಾಡಿ. ಇದಾದ ಬಳಿಕ ನಿಮ್ಮ ಫಿಂಗರ್ ಪ್ರಿಂಟ್ಸ್ ಬಳಸಿ ಯಾರೂ ಮೈಕ್ರೋ ಎಟಿಎಂನಿಂದ ಹಣ ಕದಿಯಲು ಸಾಧ್ಯವಿಲ್ಲ