Business Tips : 2024ರಲ್ಲಿ ಚಿನ್ನ – ಷೇರು ಯಾವ ಹೂಡಿಕೆಯಲ್ಲಿದೆ ಹೆಚ್ಚು ಲಾಭ?
ಹಣ ಹೂಡಿಕೆ ಮಾಡುವ ಮುನ್ನ ಸಾಕಷ್ಟು ವಿಷ್ಯಗಳ ಬಗ್ಗೆ ಜ್ಞಾನ ಹೊಂದಿರಬೇಕು. ಯಾವ ಹೂಡಿಕೆ ಸುರಕ್ಷಿತ, ಯಾವುದು ಲಾಭಕರ, ಈ ವರ್ಷ ಯಾವುದ್ರಿಂದ ಆದಾಯ ಹೆಚ್ಚಾಗುತ್ತದೆ ಎಂಬುದನ್ನೆಲ್ಲ ಅರಿತು ಹೂಡಿಕೆ ಮಾಡಬೇಕು.
ಹಣ ಗಳಿಕೆ ಜೊತೆಗೆ ಹೂಡಿಕೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸರಿಯಾದ ಜಾಗದಲ್ಲಿ ಹಾಗೂ ಸರಿಯಾದ ಸಮಯದಲ್ಲಿ ಹೂಡಿಕೆ ಶುರು ಮಾಡಿದ್ರೆ ಇದ್ರಿಂದ ಲಾಭವಿದೆ. ಭವಿಷ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಎದುರಾಗೋದಿಲ್ಲ. ತಜ್ಞರು ಕೂಡ ಉತ್ತಮ ಹೂಡಿಕೆಗೆ ಸಲಹೆ ನೀಡ್ತಾರೆ. ಹಿಂದಿನ ವರ್ಷ ಅಂದರೆ 2023 ರಲ್ಲಿ ಹೂಡಿಕೆಗೆ ಹೆಚ್ಚು ಅವಕಾಶವಿತ್ತು. ಷೇರು ಮಾರುಕಟ್ಟೆ ಹಾಗೂ ಚಿನ್ನ ಎರಡರಲ್ಲೂ ಜನರು ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸಿದ್ದರು.
2023ರಲ್ಲಿ ಷೇರುಪೇಟೆ (Stock Market) ಸುಮಾರು 10 ಸಾವಿರ ಅಂಕಗಳ ಜಿಗಿತ ಕಂಡಿತ್ತು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ (Investment) ಮಾಡಿದ್ದ ವ್ಯಕ್ತಿ ಸುಮಾರು ಶೇಕಡಾ 16 ರಷ್ಟು ಲಾಭವನ್ನು ಪಡೆದಿದ್ದ. ಇನ್ನು ಚಿನ್ನದ ವಿಷ್ಯಕ್ಕೆ ಬರೋದಾದ್ರೆ ಚಿನ್ನದಲ್ಲಿ ಹೂಡಿಕೆ ಮಾಡಿದ ವ್ಯಕ್ತಿಗೂ ನಷ್ಟವಾಗಿಲ್ಲ. 2023 ರಲ್ಲಿ ಚಿನ್ನ (Gold) ದ ಮೇಲೆ ಹೂಡಿಕೆ ಆಯ್ಕೆ ಮಾಡಿದ್ದ ವ್ಯಕ್ತಿಗೆ ಸುಮಾರು ಶೇಕಡಾ 15ರಷ್ಟು ಆದಾಯ ಸಿಕ್ಕಿದೆ.
ಯಾವುದೇ ಕ್ಷೇತ್ರದಲಿ ಹೂಡಿಕೆ ಮಾಡುವ ಮೊದಲು ಜನರು ಅದ್ರ ಬಗ್ಗೆ ಸಮೀಕ್ಷೆ ನಡೆಸುತ್ತಾರೆ. ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ರೆ ಸೂಕ್ತ ಎಂಬ ಬಗ್ಗೆ ಚರ್ಚೆ ನಡೆಸುತ್ತಾರೆ. ಹೊಸ ವರ್ಷ ಯಾವ ಕ್ಷೇತ್ರ ಲಾಭ ನೀಡಲಿದೆ, ಚಿನ್ನ ಹಾಗೂ ಷೇರು ಇದ್ರಲ್ಲಿ ಯಾವುದು ಬೆಸ್ಟ್ ಎಂದು ಆಲೋಚನೆ ಮಾಡುತ್ತಿರುವ ಜನರಿಗೆ ಉತ್ತರ ಇಲ್ಲಿದೆ.
2024ನೇ ಸಾಲಿನಲ್ಲಿ ಮನೆ ಖರೀದಿ ಉತ್ತಮನಾ ಅಥವಾ ಬಾಡಿಗೆ ಮನೆಯೇ ಓಕೆನಾ? ತಜ್ಞರು ಏನಂತಾರೆ?
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಲಾಭವೇ? : ಹಿಂದಿನ ವರ್ಷ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಲಾಭಗಳಿಸಿದ್ದವರು ನೀವಾಗಿದ್ದರೆ ಈ ವರ್ಷವೂ ಇದೇ ಕ್ಷೇತ್ರದಲ್ಲಿ ಮುಂದುವರೆಯಬಹುದು ಎನ್ನುತ್ತಾರೆ ತಜ್ಞರು. 2024 ರಲ್ಲೂ ಸೆನ್ಸೆಕ್ಸ್‌ನ ಕಾರ್ಯಕ್ಷಮತೆ ಅತ್ಯುತ್ತಮವಾಗಿರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. 2024ರ ಅಂತ್ಯದ ವೇಳೆಗೆ ಸೆನ್ಸೆಕ್ಸ್ 83,250 ಮತ್ತು ನಿಫ್ಟಿ 25,000 ಅಂಕಗಳನ್ನು ದಾಟುವ ಸಂಭವವಿದೆ. 2024ರಲ್ಲಿ ಸೆನ್ಸೆಕ್ಸ್ ಸುಮಾರು 12 ಸಾವಿರ ಅಂಕಗಳ ಏರಿಕೆಯನ್ನು ಸಾಧಿಸಬಹುದು. ಇದು ಸುಮಾರು 14.41 ಪ್ರತಿಶತದಷ್ಟು ಆದಾಯವಾಗಿದೆ. ಈ ವರ್ಷ ನೀವು ಷೇರಿನಲ್ಲಿ ಹೂಡಿಕೆ ಮಾಡುವ ಮೂಲಕ ಶೇಕಡಾ 14 ರಷ್ಟು ಹೆಚ್ಚಿನ ಆದಾಯ ಪಡೆಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ಲಾಭವಿದ್ಯಾ? : ಹಿಂದಿನ ವರ್ಷ ಚಿನ್ನದ ಮೇಲೆ ಹೂಡಿಕೆ ಮಾಡಿದ್ದ ಜನರಿಗೆ ಲಾಭವಾಗಿತ್ತು. ಈ ವರ್ಷ ಕೂಡ ಅದು ಮುಂದುವರೆಯಲಿದೆ. 2024 ರಲ್ಲೂ ಚಿನ್ನದ ಬೆಲೆಯಲ್ಲಿ ತೀವ್ರ ಏರಿಕೆಯಾಗುವ ನಿರೀಕ್ಷೆಯಿದೆ. ಜನವರಿ 3, 2024 ರಂದು 24 ಕ್ಯಾರೆಟ್ ಶುದ್ಧತೆಯ ಚಿನ್ನದ ಬೆಲೆ 63,344 ರೂಪಾಯಿ ಆಗಿದೆ. ಅದು ವರ್ಷಾಂತ್ಯದ ವೇಳೆಗೆ 72 ಸಾವಿರಕ್ಕೆ ಏರುವ ಸಾಧ್ಯತೆ ಇದೆ. ನಿರೀಕ್ಷೆಯಂತೆ ಇಷ್ಟು ಏರಿಕೆ ಆದ್ರೆ ಹತ್ತು ಗ್ರಾಂ ಚಿನ್ನಕ್ಕೆ ಒಂಭತ್ತು ಸಾವಿರದಂತೆ ಲಾಭವಾಗಲಿದೆ. ಅಂದ್ರೆ ಶೇಕಡಾ 15.2ರಷ್ಟು ಆದಾಯ ಸಿಗುವ ಸಾಧ್ಯತೆ ಇದೆ.
ಕಳೆದ ವರ್ಷ ಕಾರು ಈ ವರ್ಷ ಸಂಸ್ಥೆಯಲ್ಲೇ ಪಾಲು!ಉದ್ಯೋಗಿಗಳಿಗೆ ಶೇ.33ರಷ್ಟು ಷೇರು ಹಂಚಿಕೆ ಮಾಡಿದ ಐಟಿ ಕಂಪನಿ
ಷೇರು ಮತ್ತು ಚಿನ್ನದಲ್ಲಿ ಯಾವುದು ಬೆಸ್ಟ್? : ಷೇರಿನಲ್ಲೂ ಲಾಭವಿದೆ, ಚಿನ್ನದಲ್ಲೂ ಲಾಭವಿದೆ ಎಂದು ತಜ್ಞರು ಹೇಳಿದ್ಮೇಲೂ ನಮ್ಮ ಆಯ್ಕೆ ಯಾವುದು ಎಂಬ ಗೊಂದಲ ಜನರನ್ನು ಕಾಡೋದು ಸಾಮಾನ್ಯ. ನೀವು ಹೆಚ್ಚಿನ ರಿಸ್ಕ್ ತೆಗೆದುಕೊಂಡು ಹೂಡಿಕೆ ಮಾಡ್ತೀರಿ, ಸ್ವಲ್ಪ ನಷ್ಟವಾದ್ರೂ ಚಿಂತೆ ಇಲ್ಲ ಎನ್ನುವವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಉತ್ತಮ. ಅದೇ ನೀವು ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ಸುರಕ್ಷಿತ ಹೂಡಿಕೆಗೆ ಆದ್ಯತೆ ನೀಡ್ತೀರಿ ಎಂದಾದ್ರೆ ಚಿನ್ನದಲ್ಲಿ ಹೂಡಿಕೆ ಮಾಡಿ.