Asianet Suvarna News Asianet Suvarna News

2025ಕ್ಕೆ ಮತ್ತೆ ಹೂಡಿಕೆದಾರರ ಸಮಾವೇಶ: ಸಿಎಂ ಬೊಮ್ಮಾಯಿ

ಮುಂದೆ ಬಿಜೆಪಿಗೆ ಅಧಿಕಾರ ಸಿಗಲಿದೆ. ಇದೇ ವಿಶ್ವಾಸದಲ್ಲಿ ಮುಂದಿನ ಸಮಾವೇಶ ಘೋಷಣೆ: ಬೊಮ್ಮಾಯಿ

Global Investors Meet again in 2025 in Karnataka Says CM Basavaraj Bommai grg
Author
First Published Nov 3, 2022, 6:30 AM IST

ಬೆಂಗಳೂರು(ನ.03):  ‘ರಾಜ್ಯದಲ್ಲಿ ಮುಂದಿನ ಅವಧಿಗೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ನಂಬಿಕೆಯನ್ನು ಹೂಡಿಕೆದಾರರು ಹೊಂದಿರುವುದರಿಂದಲೇ ದೊಡ್ಡ ಪ್ರಮಾಣದ ಹೂಡಿಕೆ ಹರಿದುಬಂದಿದೆ. ಈ ವಿಶ್ವಾಸ ನಮಗೂ ಇದೆ. ಹೀಗಾಗಿಯೇ 2025ರ ಜನವರಿಗೆ ಮುಂದಿನ ಆವೃತ್ತಿಯ ಜಾಗತಿಕ ಹೂಡಿಕೆದಾರರ ಸಮಾವೇಶವನ್ನೂ ಘೋಷಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮುಂದಿನ ಅವಧಿಗೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬುದು ನಮ್ಮ ದೃಢ ವಿಶ್ವಾಸ. ನಾವು ಅಧಿಕಾರಕ್ಕೆ ಬಂದು ಈಗ ಒಡಂಬಡಿಕೆ ಮಾಡಿಕೊಂಡಿರುವ ಎಲ್ಲಾ ಯೋಜನೆಗಳಿಗೂ ಅನುಮೋದನೆ ನೀಡಿ ಅನುಷ್ಠಾನಗೊಳಿಸುವುದರ ಜತೆಗೆ ಉದ್ಯಮಿಗಳ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸುತ್ತೇವೆ’ ಎಂದು ಹೇಳಿದರು.

ಬುಧವಾರ ಉದ್ಘಾಟನೆಗೊಂಡ ‘ಜಾಗತಿಕ ಹೂಡಿಕೆದಾರರ ಸಮಾವೇಶದ’ (ಜಿಮ್‌-2022) ಮೂಲಕ ಚುನಾವಣಾ ಸಂದೇಶ ರವಾನಿಸಿದ ಅವರು, ‘ಮುಂದಿನ ವರ್ಷದ ಮೇ ತಿಂಗಳಲ್ಲಿ ಚುನಾವಣೆ ಬರಲಿದೆ. ಹೀಗಿದ್ದರೂ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಯಾವ ಧೈರ್ಯದಿಂದ ಮಾಡುತ್ತಿದ್ದೀರಿ ಎಂಬ ಪ್ರಶ್ನೆ ಕೇಳಿ ಬಂತು. ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅದೇ ವಿಶ್ವಾಸದಲ್ಲಿ 2025ರ ಜನವರಿಗೆ ಮುಂದಿನ ಜಾಗತಿಕ ಹೂಡಿಕೆದಾರರ ಸಮಾವೇಶವನ್ನೂ ಘೋಷಿಸುತ್ತಿದ್ದೇನೆ. ಇದು ನಮಗೆ ಇರುವ ವಿಶ್ವಾಸ’ ಎಂದು ಹೇಳಿದರು.

Invest Karnataka 2022: ಮೊದಲ ದಿನವೇ ದಾಖಲೆಯ ₹7.6 ಲಕ್ಷ ಕೋಟಿ ಹೂಡಿಕೆ!

‘ಪ್ರಧಾನಿ ನರೇಂದ್ರ ಮೋದಿ ಅವರ 5 ಟ್ರಿಲಿಯನ್‌ (ಲಕ್ಷ ಕೋಟಿ) ಡಾಲರ್‌ ಆರ್ಥಿಕತೆಯ ಗುರಿಗೆ ರಾಜ್ಯದಿಂದಲೇ 1 ಟ್ರಿಲಿಯನ್‌ ಡಾಲರ್‌ ಕೊಡುಗೆ ನೀಡುತ್ತೇವೆ. ನಮ್ಮ ಉದ್ಯಮ ಸ್ನೇಹಿ ನೀತಿಗಳು, ಜನಪರ ಆಡಳಿತದಿಂದಾಗಿ ಜನ ಹಾಗೂ ಹೂಡಿಕೆದಾರರ ವಿಶ್ವಾಸ ಗಳಿಸಿದ್ದೇವೆ. ನಮ್ಮ ಸರ್ಕಾರದ ಮೇಲೆ ಉದ್ಯಮಿಗಳಿಗೆ ವಿಶ್ವಾಸವಿರುವುದರಿಂದಲೇ ಮೇ ತಿಂಗಳಲ್ಲಿ ಚುನಾವಣೆ ಇದ್ದರೂ 7 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಹರಿದುಬಂದಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

3 ತಿಂಗಳಲ್ಲಿ ಅನುಮೋದನೆ:

‘ಇನ್ವೆಸ್ಟ್‌ ಕರ್ನಾಟಕ -2022ರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಹಿ ಹಾಕಲಾಗಿರುವ ಎಲ್ಲ ಬಂಡವಾಳ ಹೂಡಿಕೆಯ ಒಪ್ಪಂದಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, 2.80 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳದ ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಮುಂದಿನ 3 ತಿಂಗಳೊಳಗಾಗಿ ಹೂಡಿಕೆಯ ಎಲ್ಲಾ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಲಾಗುವುದು. ಕರ್ನಾಟಕದಲ್ಲಿ ಇನ್ನೂ ಹೆಚ್ಚು ಕೈಗಾರಿಕಾ ಸ್ನೇಹಿ ವಾತಾವರಣವನ್ನು ನಿರ್ಮಿಸುತ್ತೇವೆ. ಗರಿಷ್ಟಮಟ್ಟದ , ದಕ್ಷ ಹಾಗೂ ಉತ್ತಮ ಗುಣಮಟ್ಟದ ಉತ್ಪಾದಕತೆ ರಾಜ್ಯದಲ್ಲಿ ಆಗಬೇಕು ಎಂಬುದು ನಮ್ಮ ಗುರಿ’ ಎಂದರು.

ವಿಶ್ವಮಟ್ಟಕ್ಕೆ ಬೆಳೆಯಬೇಕೆಂಬ ಸಂಕಲ್ಪ :

‘ಕರ್ನಾಟಕ ಏರೋಸ್ಪೇಸ್‌, ಬಯೋಟೆಕ್‌, ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ರಂಗಗಳಲ್ಲಿ ಮುಂಚೂಣಿಯಲ್ಲಿದೆ. ರಾಜ್ಯ ಸ್ಟಾರ್ಚ್‌ ಅಪ್‌ ಹಾಗೂ ಯೂನಿಕಾರ್ನ್‌ ಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಭಾರತದ ಸುಮಾರು 105 ಯೂನಿಕಾರ್ನ್‌ಗಳಲ್ಲಿ ಸುಮಾರು 35 ಯೂನಿಕಾರ್ನ್‌ಗಳು ಕರ್ನಾಟಕದಲ್ಲಿವೆ. ದೇಶದ 4 ಡೆಕಾಕಾರ್ನ್‌ಗಳಲ್ಲಿ 3 ಕರ್ನಾಟಕಲ್ಲಿದೆ. ಉತ್ಪಾದನಾ ವಲಯ, ಸೇವಾ ವಲಯ, ಐಟಿಬಿಟಿ ವಲಯ, ಸ್ಟಾರ್ಚ್‌ಅಪ್‌ ವಲಯದಲ್ಲಿ ಕರ್ನಾಟಕ ಬಲಿಷ್ಠವಾಗಿದೆ. ನಮ್ಮಲ್ಲಿನ ಪ್ರತಿಷ್ಠಿತ ಕೈಗಾರಿಕೆಗಳು ವಿಶ್ವಮಟ್ಟಕ್ಕೆ ಬೆಳೆಯಬೇಕು ಎಂಬುದು ನಮ್ಮ ಸಂಕಲ್ಪ’ ಎಂದು ಹೇಳಿದರು.

Invest Karnataka 2022: ದೇಶದ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

‘ಸಂಶೋಧನೆಗಳಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಅಂಡ್‌ ಡಿ) ನೀತಿಯನ್ನು ತಂದ ಮೊದಲ ರಾಜ್ಯ ಕರ್ನಾಟಕ. ಸಣ್ಣಗ್ಯಾರೇಜ… ನಿಂದ ಹಿಡಿದು ದೊಡ್ಡ ಸಂಸ್ಥೆಯವರೆಗೆ ಸಂಶೋಧನೆಗೆ ಒತ್ತು ನೀಡಲಾಗುವುದು. ಇದಕ್ಕೆ ಪೂರಕವಾಗಿ ಈಸ್‌ ಆಫ್‌ ಡುಯಿಂಗ್‌ ಬಿಸೆನೆಸ್‌, ಕೈಗಾರಿಕಾ ಪ್ರೋತ್ಸಾಹಕ ನೀತಿ, ಸೆಮಿಕಂಡಕ್ಟರ್‌ ನೀತಿ, ಇವಿ ನೀತಿ, ಆರ್‌ ಅಂಡ್‌ ನೀತಿ ರಾಜ್ಯದಲ್ಲಿವೆ’ ಎಂದರು.

ಹೆಚ್ಚು ಉದ್ಯೋಗ ನೀಡುವ ಉದ್ದಿಮೆಗೆ ಹೆಚ್ಚು ಸಬ್ಸಿಡಿ

ರಾಜ್ಯ ಶ್ರೀಮಂತವಾಗುವುದು ಮಾತ್ರವಲ್ಲ, ಇಲ್ಲಿನ ಜನ ಶ್ರೀಮಂತರಾಗಬೇಕು. ಈ ಸದುದ್ದೇಶದಿಂದ ಕರ್ನಾಟದಲ್ಲಿ ಉದ್ಯೋಗ ನೀತಿಯನ್ನು ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗಳಿಗೆ ಎಲ್ಲ ರೀತಿಯ ಸಬ್ಸಿಡಿಗಳನ್ನು ನೀಡಲಾಗುವುದು. ಜತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಸಬ್ಸಿಡಿಗಳನ್ನು ನೀಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
 

Follow Us:
Download App:
  • android
  • ios