ಮಂಗಳೂರಿನ ಹಣ್ಣಿನ ವ್ಯಾಪಾರಿ ಮಗ ದೇಶದ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಮಾಲೀಕ; 300 ಕೋಟಿ ಸಂಪತ್ತಿನ ಒಡೆಯ!
ಕಠಿಣ ಪರಿಶ್ರಮ, ಬದ್ಧತೆಯಿದ್ದರೆ ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಮಂಗಳೂರು ಮೂಲದ ರಘುನಂದನ್ ಶ್ರೀನಿವಾಸ್ ಕಾಮತ್ ಅತ್ಯುತ್ತಮ ನಿದರ್ಶನ. ಅವರು ಪ್ರಾರಂಭಿಸಿದ ಐಸ್ ಕ್ರೀಮ್ ಉತ್ಪಾದನಾ ಸಂಸ್ಥೆ ಇಂದು ದೇಶಾದ್ಯಂತ ಜನಪ್ರಿಯತೆ ಗಳಿಸಿದೆ.
Business Desk: ಜೀವನದಲ್ಲಿ ಅನೇಕ ಅವಕಾಶಗಳು ಇರುತ್ತವೆ. ಆದರೆ, ಅದರಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡೋದು ನಮ್ಮ ಕೈಯಲ್ಲೇ ಇರುತ್ತದೆ. ಇಂಥ ಸೂಕ್ತ ಅವಕಾಶವನ್ನು ಆಯ್ದುಕೊಂಡರೆ ಖಂಡಿತಾ ಯಶಸ್ಸು ನಮ್ಮ ಕೈಗೆಟುಕುತ್ತದೆ. ಇದಕ್ಕೆ ರಘುನಂದನ್ ಶ್ರೀನಿವಾಸ್ ಕಾಮತ್ ಅತ್ಯುತ್ತಮ ನಿದರ್ಶನ. ನ್ಯಾಚುರಲ್ಸ್ ಐಸ್ ಕ್ರೀಮ್ ಸವಿದವರಿಗೆ ಅದರ ರುಚಿ ಇನ್ನೂ ನಾಲಿಗೆಯ ತುದಿಯಲ್ಲಿ ಇದ್ದಿರಬಹುದು. ತಾಜಾ ಹಣ್ಣುಗಳಿಂದ ಸಿದ್ಧಗೊಳ್ಳುವ ಈ ಐಸ್ ಕ್ರೀಮ್ ಮಾರುಕಟ್ಟೆಯಲ್ಲಿ ಸಿಗುವ ಮಿಕ್ಕೆಲ್ಲ ಬ್ರ್ಯಾಂಡ್ ಐಸ್ ಕ್ರೀಮ್ ಗಳಿಗಿಂತ ಭಿನ್ನ ರುಚಿ ಹೊಂದಿರೋದಂತೂ ನಿಜ. ಇಂಥ ವಿಭಿನ್ನ ರುಚಿಯ ಐಸ್ ಕ್ರೀಮ್ ಗಳ ಮೂಲಕ ಜನಪ್ರಿಯತೆ ಗಳಿಸಿರುವ ನ್ಯಾಚುರಲ್ಸ್ ಐಸ್ ಕ್ರೀಮ್ ಸಂಸ್ಥಾಪಕರು ಶ್ರೀನಿವಾಸ್ ಕಾಮತ್. ಇಂದು ಕೋಟಿಗಟ್ಟಲೆ ವ್ಯವಹಾರ ನಡೆಸುವ ನ್ಯಾಚುರಲ್ಸ್ ಐಸ್ ಕ್ರೀಮ್ ಪ್ರಾರಂಭಿಸುವ ಮುನ್ನ ಶ್ರೀನಿವಾಸ್ ಕಾಮತ್ ಮುಂಬೈ ಜುಹು ಸಮೀಪದ ಕೊಲಿವಾಡದಲ್ಲಿ ಪಾವ್ ಬಾಜಿ ಮಾರಾಟ ಮಾಡುತ್ತಿದ್ದರು. ಆದರೆ, ಪಾವ್ ಬಾಜಿ ಜೊತೆಗೆ ಐಸ್ ಕ್ರೀಮ್ ಸಿದ್ಧಪಡಿಸಿ ಮಾರಾಟ ಮಾಡಲು ಪ್ರಾರಂಭಿಸಿದ ಬಳಿಕ ಅವರ ಉದ್ಯಮದ ಗತಿಯೇ ಬದಲಾಯಿತು.
ರಘನಂದನ್ ಶ್ರೀನಿವಾಸ್ ಕಾಮತ್ ಮೂಲತಃ ಮಂಗಳೂರಿನವರು. ಇವರ ತಂದೆ ಮಂಗಳೂರಿನ ಪುಟ್ಟ ಹಳ್ಳಿಯೊಂದರಲ್ಲಿ ಮಾವಿನ ಹಣ್ಣಿನ ವ್ಯಾಪಾರಿಯಾಗಿದ್ದರು. ತಂದೆಗೆ ಅವರ ಕೆಲಸದಲ್ಲಿ ನೆರವು ನೀಡುತ್ತಿದ್ದ ಕಾಮತ್, ಬಲಿತ ಮಾವಿನ ಹಣ್ಣುಗಳನ್ನು ಕೀಳುವುದು, ಶೇಖರಿಸೋದು ಹಾಗೂ ಸಂಸ್ಕರಿಸುವ ವಿಧಾನ ಅರಿತರು. ನಂತರ ಮುಂಬೈಗೆ ತೆರಳಿ ಸ್ವಂತ ಉದ್ಯಮ ಪ್ರಾರಂಭಿಸುವ ಯೋಚನೆಯನ್ನು ರಘನಂದನ್ ಮಾಡುತ್ತಾರೆ. ಅದರಂತೆ ಮುಂಬೈಯಲ್ಲಿ 1984ರ ಫೆಬ್ರವರಿ 14ರಂದು ಪಾವ್ ಬಾಜಿ ಅಂಗಡಿ ಜೊತೆಗೆ ಐಸ್ ಕ್ರೀಮ್ ಮಾರಾಟ ಪ್ರಾರಂಭಿಸಿದರು.
ಕೋಟಿ ಕೋಟಿ ವಂಚಿಸಿ ಭಾರತದಿಂದ ಪಲಾಯನಗೈದ ಲಲಿತ್ ಮೋದಿ, ಮಗಳು ಈಗ ಮಿಲಿಯನ್ ಡಾಲರ್ ಸಂಸ್ಥೆಯ ಒಡತಿ!
ರಘನಂದನ್ ಪಾವ್ ಬಾಜಿ ಹಾಗೂ ಐಸ್ ಕ್ರೀಮ್ ಪಾರ್ಲರ್ ಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರಾರಂಭಿಸಿದರು. ಆದರೆ, ಪ್ರಾರಂಭದಲ್ಲಿ ಗ್ರಾಹಕರು ನೈಸರ್ಗಿಕ ರುಚಿಯನ್ನು ಹೊಂದಿರುವ ಐಸ್ ಕ್ರೀಮ್ ಗಾಗಿ ಶಾಪ್ ಗೆ ಬರುತ್ತಿದ್ದಾರೆ ಎಂಬುದು ರಘನಂದನ್ ಅವರಿಗೆ ತಿಳಿಯಲಿಲ್ಲ. ಐಸ್ ಕ್ರೀಮ್ ಸಿದ್ಧಪಡಿಸಲು ರಘನಂದನ್ ಹಣ್ಣು, ಹಾಲು ಹಾಗೂ ಸಕ್ಕರೆ ಮಾತ್ರ ಬಳಸುತ್ತಿದ್ದರು. ಹೀಗಾಗಿ ಐಸ್ ಕ್ರೀಮ್ ರುಚಿ ಗ್ರಾಹಕರನ್ನು ಸೆಳೆಯುತ್ತಿದೆ ಎಂಬ ಅರಿವು ಅವರಿಗಿರಲಿಲ್ಲ. ಇದೇ ಕಾರಣಕ್ಕೆ ಹೊಸ ಗ್ರಾಹಕರನ್ನು ಸೆಳೆಯಲು ಅವರು ಪಾವ್ ಬಾಜಿಯನ್ನೇ ಪ್ರಧಾನವಾಗಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು.
ಪ್ರಾರಂಭದಲ್ಲಿ ರಘನಂದನ್ ಅವರ ಶಾಪ್ ನಲ್ಲಿ ಕೇವಲ 4 ಮಂದಿ ಸಿಬ್ಬಂದಿಯಿದ್ದರು. 10 ವಿಭಿನ್ನ ಸ್ವಾಧದ ಐಸ್ ಕ್ರೀಮ್ ಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಆ ನಂತರ 12 ಸ್ವಾದಗಳನ್ನು ಪರಿಚಯಿಸಲಾಯಿತು. ಉದ್ಯಮ ಪ್ರಾರಂಭಿಸಿದ ಮೊದಲ ವರ್ಷ 5ಲಕ್ಷ ರೂ. ಆದಾಯವನ್ನು ಅವರು ಗಳಿಸಿದ್ದರು. ಇದಾದ ಒಂದು ವರ್ಷದ ಬಳಿಕ ಅವರು ಪಾವ್ ಬಾಜಿ ಮಾರಾಟವನ್ನು ನಿಲ್ಲಿಸಿ ಬರೀ ಐಸ್ ಕ್ರೀಮ್ ಮಾರಾಟ ಮಾಡಲು ಪ್ರಾರಂಭಿಸಿದರು.
ಸಹೋದರಿ ಜೊತೆಗೆ ಐಟಿ ಕಂಪನಿ ಸ್ಥಾಪಿಸಿ ಯಶಸ್ಸು ಕಂಡ ಈ ಐಐಟಿ ಪದವೀಧರನ ನಿವ್ವಳ ಸಂಪತ್ತು 39,000 ಕೋಟಿ ರೂ.!
ಇಂದು ನ್ಯಾಚುರಲ್ಸ್ ಐಸ್ ಕ್ರೀಮ್ ಭಾರತದ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. ದೇಶದ 135ಕ್ಕೂ ಅಧಿಕ ಸ್ಥಳಗಳಲ್ಲಿ ನ್ಯಾಚುರಲ್ಸ್ ಐಸ್ ಕ್ರೀಮ್ ಪಾರ್ಲರ್ ಇದೆ. ಈ ಪಾರ್ಲರ್ ಗಳು ಹಲಸಿನ ಹಣ್ಣು, ಎಳನೀರು ಸೇರಿದಂತೆ 20 ವಿವಿಧ ಸ್ವಾದದ ಐಸ್ ಕ್ರೀಮ್ ಗಳನ್ನು ಮಾರಾಟ ಮಾಡುತ್ತಿವೆ. 2020ನೇ ಹಣಕಾಸು ಸಾಲಿನಲ್ಲಿ ನ್ಯಾಚುರಲ್ಸ್ ಐಸ್ ಕ್ರೀಮ್ ರಿಟೇಲ್ ವಹಿವಾಟು ಅಂದಾಜು 300 ಕೋಟಿ ರೂ. ಇದೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ, ಕೆಪಿಎಂಜಿ ಸಮೀಕ್ಷೆಯಲ್ಲಿ ನ್ಯಾಚುರಲ್ಸ್ ಐಸ್ ಕ್ರೀಮ್ ಅನ್ನು ಭಾರತದ ಟಾಪ್ 10 ಬ್ರ್ಯಾಂಡ್ ಗಳಲ್ಲಿ ಹೆಸರಿಸಲಾಗಿದೆ.