ಸಹೋದರಿ ಜೊತೆಗೆ ಐಟಿ ಕಂಪನಿ ಸ್ಥಾಪಿಸಿ ಯಶಸ್ಸು ಕಂಡ ಈ ಐಐಟಿ ಪದವೀಧರನ ನಿವ್ವಳ ಸಂಪತ್ತು 39,000 ಕೋಟಿ ರೂ.!
ಹುರೂನ್ ಇಂಡಿಯಾದ 2023ನೇ ಸಾಲಿನ ವರದಿಯಲ್ಲಿ ಝುಹೋ ಕಾರ್ಪ್ ಸಹಸಂಸ್ಥಾಪಕಿಯಾಗಿರುವ ರಾಧಾ ವೆಂಬು ಭಾರತದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ ಎಂದು ಗುರುತಿಸಲ್ಪಟ್ಟಿದ್ದಾರೆ. ಆದರೆ, ಈ ಕಂಪನಿಯ ಸ್ಥಾಪನೆ ಹಾಗೂ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರೋರು ಶ್ರೀಧರ್ ವೆಂಬು. ಇವರು ರಾಧಾ ವೆಂಬು ಸಹೋದರ.
Business Desk:ಯಾವಾಗಲೂ ದೊಡ್ಡ ಕನಸು ಕಾಣಬೇಕು ಅನ್ನುತ್ತಾರೆ. ನಿಜ, ದೊಡ್ಡ ಕನಸು ಕಾಣುವ ವ್ಯಕ್ತಿ ಮಾತ್ರ ದೊಡ್ಡ ಸಾಧನೆ ಮಾಡಬಲ್ಲ. ಸಾಮಾನ್ಯ ಉದ್ಯೋಗಿಯೊಬ್ಬ ದೊಡ್ಡ ಉದ್ಯಮಿಯಾಗಿ ಬೆಳೆಯೋದು ಇಂಥ ಕನಸುಗಳಿಂದಲೇ. ಇದಕ್ಕೆ ಶ್ರೀಧರ್ ವೆಂಬು ಅತ್ಯುತ್ತಮ ನಿದರ್ಶನ. ಸಾಮಾನ್ಯ ಉದ್ಯೋಗಿಯಾಗಿದ್ದ ಅವರು ಭಾರತದ ಶ್ರೀಮಂತ ಉದ್ಯಮಿಯಾಗಿ ಬೆಳೆದ ಪರಿ ಅನೇಕರಿಗೆ ಸ್ಫೂರ್ತಿದಾಯಕ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಶ್ರೀಧರ್ ವೆಂಬು ಯಾವುದೇ ಹೊರಗಿನ ಹಣಕಾಸಿನ ನೆರವು ಪಡೆಯದೆ ಕಂಪನಿ ಸ್ಥಾಪಿಸಿ ಯಶಸ್ಸು ಸಾಧಿಸಿದ್ದಾರೆ. ಝುಹೋ ಕಾರ್ಪೋರೇಷನ್ ಸಹಸಂಸ್ಥಾಪಕ ಹಾಗೂ ಸಿಇಒ ಆಗಿರುವ ಶ್ರೀಧರ್ ವೆಂಬು ಅವರ ಇತ್ತೀಚಿನ ನಿವ್ವಳ ಸಂಪತ್ತು 39,000 ಕೋಟಿ ರೂ. ಶ್ರೀಧರ್ ವೆಂಬು ಜೊತೆಗೆ ಅವರ ಸಹೋದರಿ ರಾಧಾ ವೆಂಬು ಕೂಡ ಸಂಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನೆರವು ನೀಡುತ್ತಿದ್ದಾರೆ.
ಶ್ರೀಧರ್ ವೆಂಬು ಯಾರು?
ಶ್ರೀಧರ್ ವೆಂಬು ತಮಿಳುನಾಡಿನ ತಂಜಾವೂರಿನವರು. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು, ಓದಿನಲ್ಲಿ ತುಂಬಾ ಚುರುಕಾಗಿದ್ದರು. ತಮಿಳುನಾಡಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಇವರು, 1989ರಲ್ಲಿ ಐಐಟಿ ಮದ್ರಾಸ್ ನಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪೂರ್ಣಗೊಳಿಸಿದರು. ಆ ಬಳಿಕ ನ್ಯೂ ಜೆರ್ಸಿ ಪ್ರಿನ್ಸೆಟನ್ ಯನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಪಡೆದರು. Qualcomm ಸಂಸ್ಥೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿದ ಇವರು, ತಮ್ಮ ಸಹೋದರರ ಜೊತೆ ಸೇರಿ 1996ರಲ್ಲಿ ಅಡ್ವಂಟೆಂಟ್ (Adventnet) ಕಂಪನಿ ಸ್ಥಾಪಿಸಿದರು. ಇದು ಐಟಿ ಕಂಪನಿಯಾಗಿದ್ದು, 2009ರಲ್ಲಿ ಇದರ ಹೆಸರನ್ನು ಜುಹು ಕಾರ್ಪೋರೇಷನ್ ಎಂದು ಬದಲಾಯಿಸಲಾಯಿತು.
ಕೇವಲ 10000 ರೂ. ಸಾಲ ಪಡೆದು ಬಿಸಿನೆಸ್ ಆರಂಭಿಸಿದ್ದ ವ್ಯಕ್ತಿ, ಈಗ ಅಂಬಾನಿ, ಟಾಟಾಗೇ ಸ್ಪರ್ಧಿ!
ಗ್ರಾಮೀಣ ಭಾಗದ ಪ್ರತಿಭಾವಂತ ಜನರಿಗೆ ಐಟಿ ವಲಯಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಶ್ರೀಧರ್ ವೆಂಬು ಝುಹೂ ಕಾರ್ಪೋರೇಷನ್ ಪ್ರಾರಂಭಿಸಿದರು. ಗ್ರಾಮೀಣ ಪ್ರದೇಶಗಳಿಗೆ ಸಾಫ್ಟವೇರ್ ಅಭಿವೃದ್ಧಿಯನ್ನು ವಿಸ್ತರಿಸುವ ಉದ್ದೇಶವನ್ನು ಅವರು ಹೊಂದಿದ್ದರು. ಐಟಿ ಸೇವೆಗಳು ಭಾರತದ ಪ್ರಮುಖ ರಫ್ತಿನ ಮೂಲವಾಗಿದ್ದವು ಕೂಡ. ಹೀಗಾಗಿ ಈ ಅವಕಾಶವನ್ನು ವೆಂಬು ಸಮರ್ಥವಾಗಿ ಬಳಸಿಕೊಂಡರು ಕೂಡ.
2020ರಲ್ಲಿ ಶ್ರೀಧರ್ ವೆಂಬು ಹೊಸ ಗ್ರಾಮೀಣ ಶೈಕ್ಷಣಿಕ ಸ್ಟಾರ್ಟ್ ಅಪ್ ಪ್ರಾರಂಭಿಸಿದರು. ಈ ಸ್ಕೂಲ್ ಮೂಲಕ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಬಯಸಿದ್ದರು. ಝುಹೂ ಸ್ಕೂಲ್, ಶೈಕ್ಷಣಿಕ ತಂತ್ರಜ್ಞಾನ ಕಂಪನಿಯಾಗಿದ್ದು, ಇದು ತರಬೇತಿ ನೀಡುವ ಮೂಲಕ ಕೌಶಲಯುತ ಉದ್ಯೋಗಿಗಳನ್ನು ಸೃಷ್ಟಿಸುತ್ತದೆ. ಇನ್ನು ಝುಹೂ ಸಿಬ್ಬಂದಿಗಳಲ್ಲಿ ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿಯ ಜೊತೆಗೆ 10,000ರೂ. ಸ್ಟೇಫಂಡ್ ಕೂಡ ನೀಡಲಾಗುತ್ತದೆ. ಇನ್ನು ಈ ಶಾಲೆ ಮಕ್ಕಳನ್ನು ಅವರ ಕೌಶಲ್ಯಗಳ ಆಧಾರದಲ್ಲಿ ಸೇರಿಸಿಕೊಳ್ಳುತ್ತದೆಯೇ ಹೊರತು ಅವರ ಅಂಕಗಳು ಅಥವಾ ಶ್ರೇಣಿಗಳ ಆಧಾರದಲ್ಲಿ ಅಲ್ಲ.
ಬೆರಳೆಣಿಕೆಯಷ್ಟು ಇಂಜಿನಿಯರ್ ಗಳ ತಂಡದೊಂದಿಗೆ ಪ್ರಾರಂಭಗೊಂಡ ಝುಹೋ ಕಾರ್ಪ್ ನಲ್ಲಿ ಇಂದು 16,000ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಇನ್ನು ಈ ಕಂಪನಿ ಭಾರತದಲ್ಲಿ ಮಾತ್ರವಲ್ಲ, ಯುಎಸ್, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಶಾಖೆಗಳನ್ನು ಹೊಂದಿದೆ. ಈ ಕಂಪನಿಯ ಕೇಂದ್ರ ಕಚೇರಿ ಚೆನ್ನೈನಲ್ಲಿದೆ. ಝುಹೋ ಕಾರ್ಪ್ ಮೈಕ್ರೋಸಾಫ್ಟ್, ಒರಾಕಲ್, ಸೇಲ್ಸ್ ಫೋರ್ಸ್ ಹಾಗೂ ಇತರ ದೊಡ್ಡ ಕಂಪನಿಗಳ ಜೊತೆಗೆ ಸ್ಪರ್ಧೆ ನಡೆಸುತ್ತಿದೆ.
ಮನರಂಜನಾ ಉದ್ಯಮದಲ್ಲೂ ಅಂಬಾನಿಯದ್ದೇ ಸಾಮ್ರಾಜ್ಯ: ಡಿಸ್ನಿ ಹಾಟ್‌ಸ್ಟಾರ್ ಕೂಡ ರಿಲಯನ್ಸ್ ಪಾಲು!
ಕಂಪನಿಯಲ್ಲಿ ಶ್ರೀಧರ್ ವೆಂಬು ಪಾಲು ಕೇವಲ ಶೇ.5
ಝುಹೋ ಕಾರ್ಪ್ ನಲ್ಲಿ ಶ್ರೀಧರ್ ವೆಂಬು ಕೇವಲ ಶೇ.5ರಷ್ಟು ಷೇರು ಹೊಂದಿದ್ದಾರೆ. ಝುಹೋ ಕಾರ್ಪ್ ನಲ್ಲಿ ಬಹುಪಾಲು ಷೇರುಗಳನ್ನು ಅವರ ಸಹೋದರಿ ರಾಧಾ ವೆಂಬು ಹೊಂದಿದ್ದಾರೆ. ಶೇ.47.8ರಷ್ಟು ಷೇರುಗಳನ್ನು ರಾಧಾ ವೆಂಬು ಹೊಂದಿದ್ದಾರೆ. ಆಕೆ ನಿವ್ವಳ ಆದಾಯ ಸುಮಾರು 19,000 ಕೋಟಿ ರೂ. ಇದೆ. ಇನ್ನೊಬ್ಬ ಸಹೋದರ ಶೇಖರ್ ಕೂಡ ಈ ಕಂಪನಿಯಲ್ಲಿ ಪಾಲು ಹೊಂದಿದ್ದಾರೆ. ಹುರೂನ್ ಇಂಡಿಯಾದ 2023ನೇ ಸಾಲಿನ ವರದಿಯಲ್ಲಿ ಝುಹೋ ಕಾರ್ಪ್ ಸಹಸಂಸ್ಥಾಪಕಿಯಾಗಿರುವ ರಾಧಾ ವೆಂಬು ಭಾರತದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ ಎಂದು ಗುರುತಿಸಲ್ಪಟ್ಟಿದ್ದಾರೆ. 36,000 ಕೋಟಿ ರೂ. ನಿವ್ವಳ ಸಂಪತ್ತು ಹೊಂದಿರುವ ಈಕೆ ಭಾರತದ 100 ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ 40ನೇ ಸ್ಥಾನ ಗಳಿಸಿದ್ದಾರೆ.