Bengaluru: ಸಮೋಸಾ ಮಾರಿ ದಿನಕ್ಕೆ 12ಲಕ್ಷ ರೂ. ಗಳಿಸುತ್ತಿದ್ದಾರೆ ಈ ಮಹಿಳಾ ಉದ್ಯಮಿ!
ಇಂದು ಸ್ಟಾರ್ಟ್ ಅಪ್ ಪ್ರಾರಂಭಿಸುತ್ತಿರೋರ ಸಂಖ್ಯೆ ಹೆಚ್ಚಿದೆ. ಇದಕ್ಕಾಗಿ ಕೆಲವರು ಲಕ್ಷಾಂತರ ರೂಪಾಯಿ ವೇತನದ ಉದ್ಯೋಗ ತ್ಯಜಿಸುತ್ತಿದ್ದಾರೆ. ನಿಧಿ ಸಿಂಗ್ ಹಾಗೂ ಅವರ ಪತಿ ಶಿಖರ್ ವೀರ್ ಸಿಂಗ್ ಕೂಡ ಇಂಥವರ ಸಾಲಿಗೆ ಸೇರುತ್ತಾರೆ. ಲಕ್ಷಾಂತರ ರೂಪಾಯಿ ವೇತನದ ಉದ್ಯೋಗ ತೊರೆದು ಬೆಂಗಳೂರಿನಲ್ಲಿ ಸಮೋಸ ತಯಾರಿಸಿ ಮಾರಾಟ ಮಾಡುತ್ತಿರುವ ಈ ದಂಪತಿ ಈಗ ಪ್ರತಿ ತಿಂಗಳು 30,000 ಸಮೋಸ ಮಾರಾಟ ಮಾಡುತ್ತಿದ್ದಾರೆ. ಈ ಉದ್ಯಮದ ಮೂಲಕ ಅವರು 45 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ.
Business Desk: ಪತಿ-ಪತ್ನಿ ಇಬ್ಬರಿಗೂ ಒಳ್ಳೆಯ ಉದ್ಯೋಗ, ತಿಂಗಳಿಗೆ ಲಕ್ಷಾಂತರ ರೂ. ವೇತನವಿದ್ರೆ ಬಯಸಿದ್ದನ್ನು ಖರೀದಿಸಿ ಬದುಕು ಹೀಗೆ ಸಾಗಿದ್ರೆ ಸಾಕು ಎಂಬ ಕಂಫರ್ಟ್ ಝೋನ್ ನೊಳಗೆ ಬಂಧಿಯಾಗುವವರೇ ಹೆಚ್ಚು. ಆದ್ರೆ ಇಂಥದ್ದೇ ಕಂಫರ್ಟ್ ಝೋನ್ ನೊಳಗಿದ್ದ ದಂಪತಿ ಅದರಿಂದ ಹೊರಬಂದು ಸ್ವಂತ ಉದ್ಯಮ ಸ್ಥಾಪಿಸಿ ಇಂದು ಹಿಂದಿಗಿಂತಲೂ ಅಧಿಕ ಆದಾಯ ಗಳಿಸುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಅವರೇ 'ಸಮೋಸ ಸಿಂಗ್' ಸಂಸ್ಥಾಪಕರಾದ ನಿಧಿ ಸಿಂಗ್ ಹಾಗೂ ಶಿಖರ್ ವೀರ್ ಸಿಂಗ್. ನಿಧಿ ಸಿಂಗ್ ಹಾಗೂ ಅವರ ಪತಿ ಶಿಖರ್ ವೀರ್ ಸಿಂಗ್ ಇಬ್ಬರೂ ಬೆಂಗಳೂರಿನಲ್ಲಿ ಉನ್ನತ ಹುದ್ದೆಯಲ್ಲಿದ್ದು, ಕೈ ತುಂಬಾ ಸಂಪಾದನೆ ಮಾಡುತ್ತಿದ್ದರು. ಆದರೆ, ವೃತ್ತಿಜೀವನ ಹಾಗೂ ಆರ್ಥಿಕ ಸ್ಥಿತಿ ಎರಡೂ ಸ್ಥಿರವಾಗಿರುವ ಈ ಸಮಯದಲ್ಲೇ ಇವರಿಬ್ಬರೂ ಅನಿಶ್ಚಿತತೆಯಿಂದ ಕೂಡಿರುವ ಉದ್ಯಮ ಜಗತ್ತನ್ನು ಪ್ರವೇಶಿಸುವ ನಿರ್ಧಾರ ಕೈಗೊಂಡರು. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೇತನದ ಉದ್ಯೋಗ ತೊರೆದು ಸಮೋಸ ಮಾರುವ ಉದ್ಯಮ ಪ್ರಾರಂಭಿಸಿದರು. ಇವರ ಈ ನಿರ್ಧಾರ ಅನೇಕರಿಗೆ ಹುಚ್ಚಾಟ ಅನಿಸಿದ್ದರೆ ಅಚ್ಚರಿಯಿಲ್ಲ. ಆದರೆ, ಇವರಿಬ್ಬರಿಗೂ ಸವಾಲುಗಳನ್ನು ಎದುರಿಸುವ ಹುಮ್ಮಸ್ಸಿತ್ತು. ಇದೇ ಕಾರಣಕ್ಕೆ ಸ್ವಂತ ಉದ್ಯಮದ ಹಾದಿ ಕಠಿಣವಾಗಿದ್ದರೂ ಅದೆಲ್ಲವನ್ನೂ ಎದುರಿಸಿದರು. ಪರಿಣಾಮ ಇಂದು ನಿಧಿ ಹಾಗೂ ಶಿಖರ್ ವೀರ್ ಸಿಂಗ್ ಇಬ್ಬರೂ ತಮ್ಮ ಹಿಂದಿನ ಅಧಿಕ ಪ್ಯಾಕೇಜ್ ನ ಉದ್ಯೋಗಕ್ಕಿಂತ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.
30ಲಕ್ಷ ರೂ. ವೇತನದ ಉದ್ಯೋಗ ತ್ಯಜಿಸಿದ್ದ ನಿಧಿ
ನಿಧಿ ಸಿಂಗ್ ಹಾಗೂ ಶಿಖರ್ ವೀರ್ ಸಿಂಗ್ ಹರಿಯಾಣದಲ್ಲಿ ಬಿ.ಟೆಕ್ ಓದುವ ಸಮಯದಲ್ಲಿ ಪರಿಚಿತರಾಗಿ ಆ ಬಳಿಕ ಪರಸ್ಪರ ಪ್ರೀತಿಸಿ ಮದುವೆಯಾದರು. ಇಬ್ಬರೂ ಬಯೋಟೆಕ್ನಾಲಜಿಯಲ್ಲಿ ಬಿ.ಟೆಕ್ ಪದವಿ ಹೊಂದಿದ್ದಾರೆ. ಶಿಖರ್ ಹೈದರಾಬಾದ್ ಇನ್ಸಿಟಿಟ್ಯೂಟ್ ಆಫ್ ಲೈಫ್ ಸೈನಸ್ ನಲ್ಲಿಎಂ.ಟೆಕ್ ಪದವಿ ಕೂಡ ಪೂರ್ಣಗೊಳಿಸಿದ್ದಾರೆ. 2015ರಲ್ಲಿ ಶಿಖರ್ ಉದ್ಯೋಗ ತ್ಯಜಿಸುವ ಸಮಯದಲ್ಲಿ ಅವರು ಬಯೋಕಾನ್ ನಲ್ಲಿ ಪ್ರಧಾನ ಇಂಜಿನಿಯರ್ ಆಗಿದ್ದರು. ಇನ್ನು ನಿಧಿ ಕಾರ್ಪೋರೇಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉದ್ಯೋಗ ತ್ಯಜಿಸುವ ಸಮಯದಲ್ಲಿ ಅವರ ವಾರ್ಷಿಕ ಪ್ಯಾಕೇಜ್ 30ಲಕ್ಷ ರೂ. 2015ರಲ್ಲಿ ಇವರಿಬ್ಬರೂ ಉದ್ಯೋಗ ತ್ಯಜಿಸಿ ಅದರ ಮರು ವರ್ಷ ಸಮೋಸ ಸಿಂಗ್ ಸ್ಟಾರ್ಟ್ ಅಪ್ ಪ್ರಾರಂಭಿಸಿದ್ದರು.
ಬುಲೆಟ್ ಮೇಲೆ ಹುಡುಗಿ, ಹಿಂದೆ ಪಾನಿಪುರಿ ಗಾಡಿ: ಇಲ್ಲಿದೆ ನೋಡಿ BTech ಪಾನಿಪುರಿವಾಲಿ ಕಥೆ
ಉದ್ಯಮಕೋಸ್ಕರ ಕನಸಿನ ಮನೆ ಮಾರಿದ್ದರು
ನಿಧಿ ಸಿಂಗ್ ಹಾಗೂ ಅವರ ಪತಿ ಇಬ್ಬರೂ ಆರ್ಥಿಕವಾಗಿ ಸದೃಢವಾಗಿರುವ ಕುಟುಂಬದ ಹಿನ್ನೆಲೆ ಹೊಂದಿದ್ದರು. ನಿಧಿ ಅವರ ತಂದೆ ವಕೀಲರಾಗಿದ್ದರೆ, ಶಿಖರ್ ಅವರ ತಂದೆ ಚಂಡೀಗಢ ಹಾಗೂ ಅಂಬಲಾದಲ್ಲಿ ಸ್ವಂತ ಜ್ಯುವೆಲ್ಲರಿ ಶಾಪ್ ಗಳನ್ನು ಹೊಂದಿದ್ದರು. ಆದರೆ, ನಿಧಿ ಹಾಗೂ ಶಿಖರ್ ಕುಟುಂಬದಿಂದ ಸಹಾಯ ಪಡೆಯದೆ ತಮ್ಮ ಉಳಿತಾಯದ ಹಣದಲ್ಲೇ ಉದ್ಯಮ ಪ್ರಾರಂಭಿಸಿದರು. ಸಮೋಸಕ್ಕೆ ಬೇಡಿಕೆ ಹೆಚ್ಚಿದಂತೆ ಅದರ ತಯಾರಿಗೆ ದೊಡ್ಡ ಸ್ಥಳದ ಅಗತ್ಯ ಎದುರಾದಾಗ ತಮ್ಮ ಕನಸಿನ ಅಪಾರ್ಟ್ ಮೆಂಟ್ ಅನ್ನು 80ಲಕ್ಷ ರೂ.ಗೆ ಮಾರಾಟ ಮಾಡಿದರು. ಆ ಮನೆಯಲ್ಲಿ ಅವರಿಬ್ಬರು ಕೇವಲ ಒಂದೇ ಒಂದು ದಿನ ವಾಸಿಸಿದ್ದರು. ಹೀಗೆ ಕನಸಿನ ಮನೆ ಮಾರಿದ ಹಣದಿಂದ ಫ್ಯಾಕ್ಟರಿಯೊಂದನ್ನು ಬಾಡಿಗೆಗೆ ಪಡೆದರು.
ಒಂದೇ ತಿಂಗಳಲ್ಲಿ ಬರೀ ಎರಡು ಷೇರುಗಳಿಂದ 650 ಕೋಟಿ ರೂ. ಗಳಿಸಿದ ರೇಖಾ ಜುಂಜುನ್ ವಾಲಾ!
ತಿಂಗಳಿಗೆ 30 ಸಾವಿರ ಸಮೋಸ ಮಾರಾಟ
ನಿಧಿ ಸಿಂಗ್ ಹಾಗೂ ಶಿಖರ್ ಅವರಿಗೆ ತಮ್ಮ ಉದ್ಯಮದ ಮೇಲೆ ಸಿಕ್ಕಾಪಟ್ಟೆ ಆತ್ಮವಿಶ್ವಾಸವಿತ್ತು. ಅದು ಸುಳ್ಳಾಗಲಿಲ್ಲ. ಅವರ ಉದ್ಯಮ ಏಳುಬೀಳುಗಳ ಕಂಡು ಬೆಳೆದು ನಿಂತಿತು. ಇಂದು ಅವರು ಪ್ರತಿ ತಿಂಗಳು 30,000 ಸಮೋಸ ಮಾರಾಟ ಮಾಡುತ್ತಾರೆ. 45 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ. ಇವರ ಬಟರ್ ಚಿಕನ್ ಹಾಗೂ ಕಡಾಯಿ ಪನ್ನೀರ್ ಸಮೋಸಗಳು ಸಾಕಷ್ಟು ಜನಪ್ರಿಯತೆ ಗಳಿಸಿವೆ. ನಿಧಿ ಸಿಂಗ್ ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಸದ್ಯ ಯೋಜನೆ ರೂಪಿಸುತ್ತಿದ್ದಾರೆ.