ಐಐಟಿಯಲ್ಲಿಓದಿದ ಈಕೆ ವಿಶ್ವದಲ್ಲೇ ಅತೀಹೆಚ್ಚು ವೇತನ ಪಡೆಯವ ಭಾರತೀಯ ಸಿಇಒ ಪತ್ನಿ;ಇವರ ಆದಾಯ ಎಷ್ಟು ಗೊತ್ತಾ?
ಗೂಗಲ್ ಸಿಇಒ ಸುಂದರ್ ಪಿಚೈ ಜಗತ್ತಿನಲ್ಲಿ ಅತೀಹೆಚ್ಚು ವೇತನ ಪಡೆಯುವ ಭಾರತೀಯ ಮೂಲದ ಸಿಇಒ. 2022ನೇ ಸಾಲಿನಲ್ಲಿ ಇವರು 1,869 ಕೋಟಿ ರೂ. (ದಿನಕ್ಕೆ 5 ಕೋಟಿ ರೂ.) ವೇತನ ಪಡೆದಿದ್ದರು. ಇವರ ಸಾಧನೆ ಹಿಂದೆ ಪತ್ನಿ ಅಂಜಲಿ ಪಿಚೈ ಅವರ ಪಾತ್ರ ಕೂಡ ಮಹತ್ವದ್ದು. ಪಿಚೈ ಅವರಂತೆ ಅಂಜಲಿ ಕೂಡ ಐಐಟಿ ಹಳೆಯ ವಿದ್ಯಾರ್ಥಿನಿ. ಹಾಗಾದ್ರೆ ಅಂಜಲಿ ಅವರು ಏನು ಕೆಲಸ ಮಾಡುತ್ತಾರೆ? ಅವರ ಆದಾಯ ಎಷ್ಟಿದೆ? ಇಲ್ಲಿದೆ ಮಾಹಿತಿ

Business Desk: ಭಾರತದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಇರುವ ಅತ್ಯುನ್ನತ ಸಂಸ್ಥೆ ಅಂದ್ರೆ ಅದು ಐಐಟಿ. ಜಗತ್ತಿಗೆ ಅತ್ಯಂತ ನಿಪುಣ ಇಂಜಿನಿಯರ್ ಗಳನ್ನು ನೀಡಿದ ಹೆಗ್ಗಳಿಕೆ ಈ ಐಐಟಿಗಳಿಗಿದೆ. ಈ ಸಂಸ್ಥೆಗಳಲ್ಲಿ ಕಲಿತು ಹೊರಬಂದಿರುವ ಅನೇಕ ಇಂಜಿನಿಯರ್ ಗಳು ಇಂದು ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಐಐಟಿಯಿಂದ ದೊಡ್ಡ ಮೊತ್ತದ ಪ್ಯಾಕೇಜ್ ನೊಂದಿಗೆ ಹೊರಬರುತ್ತಾರೆ. ಜಗತ್ತಿನಲ್ಲಿ ಅತೀಹೆಚ್ಚು ವೇತನ ಪಡೆಯುವ ಭಾರತೀಯ ಮೂಲದ ಉದ್ಯೋಗಿ ಕೂಡ ಐಐಟಿಯ ಹಳೆಯ ವಿದ್ಯಾರ್ಥಿ. ಅಷ್ಟೇ ಅಲ್ಲ, ಇವರ ಪತ್ನಿ ಕೂಡ ಐಐಟಿಯಲ್ಲೇ ಕಲಿತವರು. ಹೌದು, ನಾವಿಲ್ಲಿ ಹೇಳಲು ಹೊರಟ್ಟಿರೋದು ಅಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರ ಪತ್ನಿ ಅಂಜಲಿ ಪಿಚೈ ಬಗ್ಗೆ. 2022ನೇ ಸಾಲಿನಲ್ಲಿ ಸುಂದರ್ ಪಿಚೈ ಅವರ ವೇತನ ಬರೋಬರಿ 1,869 ಕೋಟಿ ರೂ. (ದಿನಕ್ಕೆ 5 ಕೋಟಿ ರೂ.) ಈ ಮೂಲಕ ಪಿಚೈ ವಿಶ್ವದಲ್ಲಿ ಅತೀ ಹೆಚ್ಚು ವೇತನ ಪಡೆಯುವ ಸಿಇಒ ಆಗಿದ್ದಾರೆ. ಸುಂದರ್ ಪಿಚೈ ಅವರ ಸಾಧನೆಯಲ್ಲಿ ಅವರ ಪತ್ನಿ ಅಂಜಲಿ ಕೂಡ ಮಹತ್ವದ ಪಾತ್ರ ವಹಿಸಿದ್ದಾರೆ ಎಂದೇ ಹೇಳಬಹುದು. ಬಲ್ಲ ಮೂಲಗಳ ಪ್ರಕಾರ ಅಂಜಲಿ ನಿವ್ವಳ ಸಂಪತ್ತು22 ಮಿಲಿಯನ್ ಡಾಲರ್ ಇದೆ.
ಅಂಜಲಿ ಪಿಚೈ 1971ರ ಜನವರಿ 11ರಂದು ರಾಜಸ್ಥಾನದ ಕೋಟಾ ನಗರದಲ್ಲಿ ಜನಿಸಿದ್ದರು. ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಂಜಲಿ ಆರಂಭಿಕ ಶಿಕ್ಷಣ ಕೋಟಾದಲ್ಲಿ ಪೂರೈಸಿದರು. ಇದಾದ ಬಳಿಕ ಅವರು ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ತಮ್ಮ ಬ್ಯಾಚುಲರ್ ಡಿಗ್ರಿಯನ್ನು ಐಐಟಿ ಖರಗ್ಪುರದಲ್ಲಿ ಪಡೆದರು. ಐಐಟಿಯಿಂದ ಪದವಿ ಪಡೆಯುತ್ತಿದ್ದಂತೆ ಅಂಜಲಿ ಅವರಿಗೆ ಎಕ್ಸೆಂಜರ್ ಕಂಪನಿಯಲ್ಲಿ ಉದ್ಯೋಗ ಸಿಕ್ಕಿತು. ಈ ಕಂಪನಿಯಲ್ಲಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ ಅವರು ಇನ್ ಟ್ಯೂಟ್ (Intuit) ಸಂಸ್ಥೆ ಸೇರಿದರು. ಪ್ರಸ್ತುತ ಅಂಜಲಿ ಆ ಸಂಸ್ಥೆಯಲ್ಲಿ ಬ್ಯುಸಿನೆಸ್ ಆಪರೇಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಗತ್ತಲ್ಲೇ ಅತೀ ಹೆಚ್ಚು ಸಂಬಳ ಪಡೆಯೋ ಭಾರತೀಯನಿಗೆ 1869 ಕೋಟಿ ವೇತನ!
ಯಶಸ್ಸಿನ ಕ್ರೆಡಿಟ್ ಪತ್ನಿಗೆ ನೀಡಿರುವ ಪಿಚೈ
ಪ್ರಸ್ತುತ ಗೂಗಲ್ ನಲ್ಲಿ ಸಿಇಒಯಂತಹ ಪ್ರತಿಷ್ಟಿತ ಹುದ್ದೆ ಅಲಂಕರಿಸಲು ಪತ್ನಿ ಅಂಜಲಿ ಪಿಚೈ ಅವರೇ ಕಾರಣ ಎಂದಿದ್ದಾರೆ ಸುಂದರ್ ಪಿಚೈ. ಗೂಗಲ್ ಸಂಸ್ಥೆಯಲ್ಲಿ ಎಕ್ಸಿಕ್ಯುಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಟ್ವಿಟ್ಟರ್ ಹಾಗೂ ಯಾಹೂ ಸೇರಿದಂತೆ ಅನೇಕ ಪ್ರತಿಷ್ಟಿತ ಕಂಪನಿಗಳಿಂದ ಪಿಚೈ ಅವರಿಗೆ ಉದ್ಯೋಗ ಆಫರ್ ಬಂದಿತ್ತು. ಆದರೆ, ಇದ್ಯಾವುದನ್ನು ಒಪ್ಪಿಕೊಳ್ಳದೆ ಗೂಗಲ್ ನಲ್ಲಿ ಮುಂದುವರಿಯುವಂತೆ ಪತ್ನಿ ಅಂಜಲಿ ಸಲಹೆ ನೀಡಿದ್ದರು.
ಇಬ್ಬರೂ ಕ್ಲಾಸ್ ಮೇಟ್ಸ್
ಸುಂದರ್ ಪಿಚೈ ಹಾಗೂ ಅಂಜಲಿ ಇಬ್ಬರೂ ಖರಗ್ಪುರ ಐಐಟಿಯಲ್ಲಿ ಸಹಪಾಠಿಗಳಾಗಿದ್ದರು. ಒಂದೇ ತರಗತಿಯಲ್ಲಿದ್ದ ಕಾರಣ ಪ್ರಾರಂಭದಲ್ಲಿ ಇಬ್ಬರ ಮಧ್ಯೆ ಸ್ನೇಹ ಬೆಳೆಯಿತು. ಆದರೆ, ಆ ಬಳಿಕ ನಿಧಾನವಾಗಿ ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದರು. ಇಂಜಿನಿಯರಿಂಗ್ ಪದವಿ ಕೊನೆಯ ವರ್ಷದಲ್ಲಿರುವಾಗ ಸುಂದರ್ ಪಿಚೈ ಅಂಜಲಿ ಅವರಿಗೆ ಮದುವೆಯಾಗಲು ಪ್ರೊಪೋಸ್ ಮಾಡಿದರು. ಅಂಜಲಿ ಕೂಡ ಒಪ್ಪಿಕೊಂಡರು.
ಐಐಟಿ ಗ್ರಾಜ್ಯುವೇಟ್ ಆಗಿರೋ ಈ ಉದ್ಯೋಗಿ ಸ್ಯಾಲರಿ ಮುಕೇಶ್ ಅಂಬಾನಿಗಿಂತ ಮೂರು ಪಟ್ಟು ಹೆಚ್ಚು!
ಆರು ತಿಂಗಳು ಮಾತಿಲ್ಲ
ಇಂಜಿನಿಯರಿಂಗ್ ಪದವಿ ಬಳಿಕ ಸುಂದರ್ ಪಿಚೈ ಉನ್ತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಆ ಸಮಯದಲ್ಲಿ ಅಂಜಲಿ ಭಾರತದಲ್ಲೇ ಇದ್ದರು. ಆದರೆ, ಅಂತಾರಾಷ್ಟ್ರೀಯ ಕರೆ ಮಾಡಿ ಅಂಜಲಿ ಜೊತೆಗೆ ಮಾತನಾಡುವಷ್ಟು ಹಣ ಪಿಚೈ ಬಳಿಯಿರಲಿಲ್ಲ. ಹೀಗಾಗಿ ಆರು ತಿಂಗಳ ಕಾಲ ಇವರಿಬ್ಬರೂ ಮಾತನಾಡಿರಲಿಲ್ಲ. ಆದರೆ, ಇದರಿಂದ ಅವರಿಬ್ಬರ ನಡುವಿನ ಸಂಬಂಧದಲ್ಲಿ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಸ್ವಲ್ಪ ಸಮಯದ ಬಳಿಕ ಅಂಜಲಿ ಕೂಡ ಅಮೆರಿಕಕ್ಕೆ ತೆರಳಿದರು.