ಬೆಂಗಳೂರು[ಫೆ.17]: ಬಿಬಿಎಂಪಿಯ 24 ಹೆರಿಗೆ ಆಸ್ಪತ್ರೆಗಳಲ್ಲಿ ವರ್ಷವಿಡೀ ಹುಟ್ಟುವ ಎಲ್ಲಾ ಹೆಣ್ಣು ಮಕ್ಕಳಿಗೆ ಐದು ಲಕ್ಷ ರು. ಬಾಂಡ್‌ ನೀಡುವ ಪಿಂಕ್‌ ಬೇಬಿ ಯೋಜನೆ ವಿಸ್ತರಣೆ, ಮಹಿಳೆಯರಿಗೆ ಕಿರು ಸಾಲ, ಪ್ರತಿ ವಾರ್ಡಿಗೆ ತಲಾ 20 ಮಹಿಳೆಯರಿಗೆ ಸ್ಕೂಟಿ...

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 2019-20ನೇ ಸಾಲಿನ ಬಜೆಟ್‌ ಸೋಮವಾರ ಮಂಡನೆಯಾಗಲಿರುವ ಬಜೆಟ್‌ನ ಈ ಪ್ರಮುಖ ಘೋಷಣೆಗಳು ಹೊರ ಬೀಳುವ ಸಾಧ್ಯತೆಯಿದ್ದು, ತನ್ಮೂಲಕ ಈ ಬಾರಿಯ ಬಜೆಟ್‌ ಪಿಂಕ್‌ ಬಜೆಟ್‌ ಆಗುವ ಎಲ್ಲ ಲಕ್ಷಣಗಳಿವೆ!

ಏಕೆಂದರೆ ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಗಿ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಬಜೆಟ್‌ ಮಂಡನೆ ಮಾಡುತ್ತಿದ್ದು, ಅವರ ಗಮನ ಮಹಿಳಾ ಕಲ್ಯಾಣ ಯೋಜನೆಗಳ ಕಡೆಗೆ ನೀಡುವ ಮೂಲಕ ಬಜೆಟ್‌ಗೆ ಗುಲಾಬಿ ಬಣ್ಣ ಬಳಿಯುವ ಸಾಧ್ಯತೆಗಳಿವೆ.

ಜತೆಗೆ, ಬಿಬಿಎಂಪಿಯಲ್ಲಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತದ ನಾಲ್ಕನೇಯ ಇದಾಗಿದ್ದು, ಮಹಿಳೆಯರ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಅಲ್ಲದೆ, ಸಿದ್ಧಗಂಗಾ ಮಠದ ಡಾ

ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ನಗರದ ಅತ್ಯುತ್ತಮ ಶಿಕ್ಷಣ ಸಂಸ್ಥೆಗೆ ಪ್ರತಿ ವರ್ಷ ಪ್ರಶಸ್ತಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಪ್ರಸಕ್ತ ವರ್ಷ ಹೇಮಲತಾ ಗೋಪಾಲಯ್ಯ ಅವರು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ಒಲಿದು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ರಚನೆ ಆದ ಬಳಿಕ ಮೊದಲ ಬಾರಿಗೆ ಮಹಿಳೆಯೊಬ್ಬರು ಬಜೆಟ್‌ ಮಂಡನೆ ಮಾಡಲಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಈ ಹಿಂದೆ 2005-06 ನೇ ಸಾಲಿನಲ್ಲಿ ಲಲಿತಾ ಶ್ರೀನಿವಾಸ ಗೌಡ ಅವರು ಸದಸ್ಯೆ ಬಿಎಂಪಿ ಬಜೆಟ್‌ ಮಂಡನೆ ಮಾಡಿದ್ದರು, ಅದಾದ ಬಳಿಕ ಯಾವುದೇ ಮಹಿಳೆ ಬಜೆಟ್‌ ಮಂಡನೆ ಮಾಡಿರಲಿಲ್ಲ.

ಬಿಬಿಎಂಪಿಯ ಎಲ್ಲ ವಿಭಾಗಗಳೊಂದಿಗೆ ಚರ್ಚೆ ನಡೆಸಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ, ಬಜೆಟ್‌ನಲ್ಲಿ ಯಾವೆಲ್ಲ ಯೋಜನೆ ಘೋಷಿಸಬೇಕು ಎಂಬುದನ್ನು ಅಂತಿಮಗೊಳಿಸಿದ್ದಾರೆ. ಸೋಮವಾರ ಬೆಳಗ್ಗೆ 11.30ಕ್ಕೆ ಕೌನ್ಸಿಲ್‌ ಸಭಾಂಗಣದಲ್ಲಿ 2019-20ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ.

ಭಾರೀ ಯೋಜನೆಗೆ ಕಡಿವಾಣ?:

ರಾಜ್ಯ ಸರ್ಕಾರ ಬೆಂಗಳೂರು ನಗರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾರೀ ಗಾತ್ರದ ಯೋಜನೆಗಳನ್ನು ಕೈಗೊಳ್ಳುವುದಕ್ಕೆ ಮುಂದಿನ ಮೂರು ವರ್ಷಗಳಿಗೆ 8,015 ಕೋಟಿ ರು. ಮೀಸಲಿಟ್ಟಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅದಕ್ಕೆ ಪೂರಕವಾದ ಯೋಜನೆಗಳ ಬಗ್ಗೆ ಮಾತ್ರ ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಸಿದ್ಧಪಡಿಸುವುದಕ್ಕೆ ಮುಂದಾಗಿದೆ. ಹೀಗಾಗಿ ಈ ವರ್ಷ ಭಾರೀ ಮೊತ್ತದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಬಿಬಿಎಂಪಿ ಬಜೆಟ್‌ನಲ್ಲಿ ಘೋಷಣೆ ಮಾಡುವುದು ಅನುಮಾನವಾಗಿದೆ.

11 ಸಾವಿರ ಕೋಟಿ ಮೀರದ ಬಜೆಟ್‌?

ಬಿಬಿಎಂಪಿ ಆಯುಕ್ತರು .8,300 ಕೋಟಿ ಮೊತ್ತದ ಕರಡು ಬಜೆಟನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಿದ್ದರು. ಅದಕ್ಕೆ ಇನ್ನಷ್ಟುಯೋಜನೆಗಳನ್ನು ಸೇರಿಸಿರುವ ಸ್ಥಾಯಿ ಸಮಿತಿ 2019-20ನೇ ಸಾಲಿಗೆ .10,600 ಕೋಟಿಗೂ ಹೆಚ್ಚು .11 ಸಾವಿರ ಕೋಟಿ ಮೀರದಂತೆ ಬಜೆಟ್‌ ಮಂಡನೆ ಮಾಡುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ.

ಶೇ.55ರಷ್ಟುಕಳೆದ ಬಜೆಟ್‌ ಅನುಷ್ಠಾನ?

ವಿಧಾನಸಭಾ ಚುನಾವಣೆ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ನಿರ್ಲಕ್ಷ್ಯದಿಂದಾಗಿ 2018-19ನೇ ಸಾಲಿನ ಬಜೆಟ್‌ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಮೂಲಗಳ ಪ್ರಕಾರ 2018-19ನೇ ಸಾಲಿನ ಬಜೆಟ್‌ ಶೇ.55ರಷ್ಟುಮಾತ್ರ ಅನುಷ್ಠಾನಗೊಂಡಿದೆ ಎಂದು ಹೇಳಲಾಗುತ್ತಿದೆ. ಉಳಿದ ಯೋಜನೆಗಳ ಅನುಷ್ಠಾನವನ್ನು 2019-20ಕ್ಕೆ ನಿಗದಿ ಮಾಡಲಾಗಿದೆ.

ಸಾರ್ವಜನಿಕರ ಬೇಡಿಕೆ ಏನು?

- ವೈಜ್ಞಾನಿಕ ಮತ್ತು ವಾರ್ಡ್‌ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿಗೆ ಆದ್ಯತೆ

- ಉದ್ಯಾನಗಳಲ್ಲಿನ ಎಲೆಗಳನ್ನು ಸಾವಯವ ಗೊಬ್ಬರವಾಗಿ ಮಾರ್ಪಾಡಿಸಬೇಕು

- ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು

- ಹಿಂದುಳಿದವರಿಗೆ ಘೋಷಿಸುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ಕೊಡಬೇಕು

- ಟ್ರಾಫಿಕ್‌, ವಾಹನ ಪಾರ್ಕಿಂಗ್‌ ಸಮಸ್ಯೆ ಪರಿಹಾರ

- ಬೀದಿದೀಪ ನಿರ್ವಹಣೆಗೆ ಆದ್ಯತೆ

- ಬಿಬಿಎಂಪಿ ಶಾಲೆಗಳಿಗೆ ಕಾಯಕಲ್ಪ

- ರಸ್ತೆ ಗುಂಡಿ ಮುಕ್ತಿ

- ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗದಂತೆ ಕ್ರಮ

2019-20ರ ಸಂಭವನೀಯ ಬಜೆಟ್‌!

* ಆರೋಗ್ಯ

- ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಜನಿಸುವ ಎಲ್ಲ ಹೆಣ್ಣು ಮಕ್ಕಳಿಗೆ ಪಿಂಕ್‌ ಬೇಬಿ ಯೋಜನೆ ವಿಸ್ತರಣೆ

- ಬಿಬಿಎಂಪಿ ಆಸ್ಪತ್ರೆಗಳಿಗೆ ಅತ್ಯಾಧುನಿಕ ಲೈಫ್‌ ಸಪೋರ್ಟರ್‌ ಆಂಬ್ಯುಲೆನ್ಸ್‌ಗಳ ಖರೀದಿಗೆ ಅನುದಾನ

- 198 ವಾರ್ಡ್‌ಗಳಲ್ಲಿ ಡಯಾಲಿಸಿಸ್‌ ಕೇಂದ್ರ

- ಹೊಸ ರೆಫೆರಲ್‌ ಆಸ್ಪತ್ರೆಗಳ ನಿರ್ಮಾಣ

* ಕಲ್ಯಾಣ ಕಾರ್ಯಕ್ರಮ

- ಹಾಲು, ಪೇಪರ್‌ ಹಾಕುವವರಿಗೆ ಪ್ರತಿವಾರ್ಡ್‌ನಲ್ಲಿ 50 ಸೈಕಲ್‌

- ಒಂಟಿ ಮನೆ ಯೋಜನೆ ಅನುದಾನ ಹೆಚ್ಚಳ

- ಪ್ರತಿ ವಾರ್ಡ್‌ನಲ್ಲಿ ಎಸ್ಸಿ,ಎಸ್ಟಿವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

* ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಅಕ್ಷರ ದಾಸೋಹ

- ಶ್ರೀಗಳ ಹೆಸರಿನಲ್ಲಿ ಪ್ರಶಸ್ತಿ

- ಬಡ ವಿದ್ಯಾರ್ಥಿ ಶಿಕ್ಷಣ ಆದ್ಯತೆ

- ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸುತ್ತಿರುವ ಸಂಸ್ಥೆಗೆ ಅನುದಾನ

ಇತರೆ

- ಐಟಿ-ಬಿಬಿ ಸಂಸ್ಥೆಗಳಿರುವ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿ

- ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿರು ಕೆಂಪೇಗೌಡ ಗೋಪುರ ದುರಸ್ತಿ

- 110 ಹಳ್ಳಿಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ

- ಪೌರ ಕಾರ್ಮಿಕರಿಗೆ ಕೆಲ ಕಲ್ಯಾಣ ಕಾರ್ಯಕ್ರಮ