ಕರ್ನಾಟಕದಲ್ಲಿ ಸಣ್ಣದಾಗಿ ಉದ್ಯಮವನ್ನು ಆರಂಭಿಸಿ ಸತತ ಪ್ರಯತ್ನ ಮಾಡಿ ಆ ಉದ್ಯಮವನ್ನು ಗೆಲ್ಲಿಸಿ ನೂರಾರು ಮಂದಿಗೆ ಕೆಲಸ ಕೊಟ್ಟು ಪರೋಕ್ಷವಾಗಿ ನಾಡಿನ ಅಭಿವೃದ್ಧಿಗೆ ಕಾರಣರಾಗುವ ಸಾವಿರಾರು ಉದ್ಯಮಿಗಳಿದ್ದಾರೆ. ಅವರಲ್ಲಿ ಕೆಲವು ಸಾಧಕರನ್ನು ಆರಿಸಿ ಆ ಸಾಧನೆಯನ್ನು ಗೌರವಿಸಲು ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಕರ್ನಾಟಕ ಬಿಸಿನೆಸ್‌ ಅವಾರ್ಡ್ಸ್ ಎಂಬ ಪ್ರಶಸ್ತಿ ನೀಡುತ್ತಿದೆ. ಈ ಸಾಲಿನ ಕರ್ನಾಟಕ ಬಿಸಿನೆಸ್‌ ಅವಾರ್ಡ್ಸ್ ಪುರಸ್ಕೃತ ಮೈಲಾರಿ ಮಸಾಲ ಸಂಸ್ಥೆಯ ಗೆಲುವಿನ ಕತೆ ಇಲ್ಲಿದೆ.

"

ಹಾಸನದ ಮಹೇಶ್‌ ದೇವಪ್ಪ ಮತ್ತು ಸಂಗೀತಾ ದಂಪತಿಗೆ ಚನ್ನರಾಯಪಟ್ಟಣದಲ್ಲಿ ಒಂದು ಬಟ್ಟೆಅಂಗಡಿ ಇತ್ತು. ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಸಂಗೀತಾ ಅವರಿಗೆ ಅಡುಗೆಯಲ್ಲಿ ತುಂಬಾ ಆಸಕ್ತಿ. ಹೊಸ ಬಗೆಯ ಮಸಾಲೆಗಳನ್ನು ಮಾಡುವುದು, ಅದನ್ನು ಬೇರೆಯವರು ಬಳಸಿ ಚೆನ್ನಾಗಿದೆ ಅಂದರೆ ಖುಷಿ. ಆ ಖುಷಿಗಾಗಿ ಮನೆಯಲ್ಲೇ ಮಸಾಲೆ ತಯಾರಿಸಿ ಸರಳವಾಗಿ ಪ್ಯಾಕ್‌ ಮಾಡಿ ಬಟ್ಟೆಅಂಗಡಿಯಲ್ಲಿ ಇಟ್ಟರು.

ಸೆನ್ಸೆಕ್ಸ್‌ ಮತ್ತೆ 1200 ಅಂಕ ಜಿಗಿತ: ಎರಡೇ ದಿನದಲ್ಲಿ 3511 ಅಂಕ ಏರಿಕೆ!

ಅದನ್ನು ಅಲ್ಲಿಗೆ ಬಂದ ಮಹಿಳೆಯರು ಬಳಸತೊಡಗಿದರು. ಬೇಡಿಕೆ ಜಾಸ್ತಿಯಾದಂತೆಲ್ಲಾ ಒನ್‌ ಫೈನ್‌ ಡೇ ಒಬ್ಬ ಸ್ನೇಹಿತರು ಬಂದು ಮಹೇಶ್‌ ಅವರ ಬಳಿ ನೀವು ದೊಡ್ಡದೊಂದು ಮಸಾಲ ಉತ್ಪನ್ನ ಕಂಪನಿಗೆ ಮಸಾಲೆ ತಯಾರಿಸುವ ಕಚ್ಛಾ ಪದಾರ್ಥಗಳನ್ನು ಒದಗಿಸಬಹುದೇ ಎಂದು ಕೇಳಿದರು. ಅದಕ್ಕೆ ಸ್ವಲ್ಪ ಬಂಡವಾಳ ತೊಡಗಿಸಬೇಕಿತ್ತು. ಮಹೇಶ್‌ ಸ್ವಲ್ಪ ಯೋಚಿಸಿದರು. ನಂತರ ಓಕೆ ಅಂತ ಹೇಳಿ ಬಂಡವಾಳ ಹೂಡಿ ಹೊಸ ಸಾಹಸ ಆರಂಭಿಸಿಯೇಬಿಟ್ಟರು.

ಅದು 2009. ಕೆಲವು ತಮಗೆ ಗೊತ್ತಿದ್ದ ರೆಸಿಪಿ, ಇನ್ನು ಕೆಲವು ಕಂಪನಿ ಕೊಟ್ಟರೆಸಿಪಿ ಸೇರಿಸಿ ಅನೇಕ ಮಸಾಲೆ ಉತ್ಪನ್ನಗಳನ್ನು ತಯಾರಿಸಿಕೊಡತೊಡಗಿದರು. ಐದಾರು ವರ್ಷ ಈ ಕಾಯಕ ನಡೆಯಿತು. ಅಡುಗೆ ಇವರದು, ಹೆಸರು ಕಂಪನಿಯದು. ಹೀಗೇ ಆಗುತ್ತಿರುವಾಗ ಒಂದು ದಿನ ತಮ್ಮದೇ ಒಂದು ಕಂಪನಿ ಆರಂಭಿಸಿದರೆ ಹೇಗೆ ಎಂಬ ಆಲೋಚನೆ ಹುಟ್ಟಿದ ಫಲವಾಗಿ ಹುಟ್ಟಿಕೊಂಡ ಸಂಸ್ಥೆಯೇ ಮೈಲಾರಿ ಮಸಾಲ.

2016. ಹೊಸ ಕಂಪನಿ ಶುರುವಾಯಿತು. ಅಲ್ಲಿಯವರೆಗೆ ಬೇರೆಯವರಿಗೆ ಮಸಾಲೆ ಉತ್ಪನ್ನ ಮಾಡಿಕೊಡಬೇಕಿತ್ತು. ಇಲ್ಲಿ ಸ್ವಂತ ಕಂಪನಿ. ಉತ್ಪನ್ನವೂ ತಾವೇ ನೋಡಬೇಕು, ಮಾರ್ಕೆಟಿಂಗ್‌ ಕೂಡ ಅವರೇ ಮಾಡಬೇಕು. ಮಾರುಕಟ್ಟೆಯಲ್ಲಿ ಬೇರೆ ಸಾಕಷ್ಟುಮಸಾಲೆ ಉತ್ಪನ್ನಗಳು ಇದ್ದವು. ಸ್ಪರ್ಧೆ ಎದುರಿಸುವುದು ಮತ್ತು ಗೆದ್ದು ತೋರಿಸುವುದು ಅನಿವಾರ್ಯವಾಗಿತ್ತು. ತಾವೇ ಫೀಲ್ಡಿಗೆ ಇಳಿದರು. ಹಳ್ಳಿಹಳ್ಳಿಗಳಿಗೆ ಹೋದರು. ಸಂತೆಯಲ್ಲಿ ಮೈಲಾರಿ ಮಸಾಲ ಉತ್ಪನ್ನಗಳ ಸ್ಟಾಲ್‌ ಇಟ್ಟರು. ಕೆಲವು ಕಡೆ ಉಚಿತವಾಗಿ ಮಸಾಲೆ ಉತ್ಪನ್ನ ಕೊಟ್ಟರು. ಪ್ರತಿಯೊಬ್ಬರ ಗಮನ ಮೈಲಾರಿ ಅನ್ನುವ ಹೆಸರಿನ ಮೇಲೆ ಬೀಳುವಂತೆ ಮಾಡಲು ಶತಪ್ರಯತ್ನ ಮಾಡಿದರು. ಸುಮಾರು ಒಂದೂವರೆ ವರ್ಷಗಳ ಕಾಲ ಹೋರಾಟ ನಡೆಸಿದ ಮೇಲೆ ಜನರಿಗೆ ಮೈಲಾರಿ ಉತ್ಪನ್ನಗಳ ರುಚಿ ತಿಳಿಯಿತು.

ಉಜ್ವಲಾ: ಇನ್ನೂ ಒಂದು ಕೋಟಿ ಜನರಿಗೆ ಉಚಿತ ಗ್ಯಾಸ್!

ಯಾವುದಾದರೂ ಅಷ್ಟೇ, ಒಮ್ಮೆ ಕೈ ಹಿಡಿದರೆ ಮತ್ತೆ ಬಿಡುವುದಿಲ್ಲ. ಮೈಲಾರಿ ಮಸಾಲ ಉತ್ಪನ್ನ ಜನರಿಗೆ ಹಿಡಿಸಿತು. ಜನರು ಮೈಲಾರಿ ಮಸಾಲ ಕೊಡಿ ಎಂದು ಕೇಳತೊಡಗಿದರು. ಮಹೇಶ್‌ ಅವರು ಆಗ ಟೀಪುಡಿ ತಯಾರಿಕೆ ಶುರು ಮಾಡಿದರು. ಟೀ ಅಂತೂ ಎಲ್ಲರೂ ಕುಡಿದೇ ಕುಡಿಯುತ್ತಾರೆ. ಟೀ ಉತ್ಪನ್ನವಾದರೂ ಎಲ್ಲರ ಮನೆಯಲ್ಲಿ ಇರಲಿ ಅನ್ನುವ ಆಸೆ ಅವರದು. ಆ ಉತ್ಪನ್ನವೂ ಹಿಟ್‌ ಆಯಿತು. ಒಂದರಹಿಂದೊಂದು ಉತ್ಪನ್ನ ಬಿಡುಗಡೆ ಮಾಡುತ್ತಲೇ ಬಂದರು. ಜನರು ಎಲ್ಲಾ ಉತ್ಪನ್ನವನ್ನೂ ಇಷ್ಟಪಟ್ಟರು. ಹಾಗಾಗಿಯೇ ಇವತ್ತು ಮೈಲಾರಿ ಮಸಾಲದ 165 ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಇದೇ ಖುಷಿಯಲ್ಲಿ ಮಹೇಶ್‌ ಮತ್ತೆ 55 ಮೈಲಾರಿ ಉತ್ಪನ್ನಗಳನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ.

ಮೈಲಾರಿ ಇವತ್ತು ಕರ್ನಾಟಕದಲ್ಲಷ್ಟೇ ಅಲ್ಲ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ರಾಜ್ಯಗಳಲ್ಲೂ ಸಿಗುತ್ತದೆ. ಇಬ್ಬರಿಂದ ಆರಂಭವಾದ ಕಂಪನಿಯಲ್ಲಿ ಈಗ 200 ಮಂದಿ ಕೆಲಸಗಾರರಿದ್ದಾರೆ. ನಾಲ್ಕು ನೂರು ವಿತರಕರಿದ್ದಾರೆ. ಜೀವನೋಪಾಯಕ್ಕಾಗಿ ಆರಂಭಿಸಿದ ಕಂಪನಿ ಇಂದು ನೂರಾರು ಮಂದಿಯ ಜೀವನೋಪಾಯಕ್ಕೆ ಕಾರಣವಾಗುವಂತೆ ಮಾಡಿದ್ದು ಮಹೇಶ್‌ ಶ್ರಮಕ್ಕೆ ಸಂದ ಫಲ. ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಅನ್ನುವುದಕ್ಕೆ ಮಹೇಶ್‌ ಹಠವೇ ಸಾಕ್ಷಿ.