LPG Price:ಉಜ್ವಲ ಯೋಜನೆ ಎಲ್ಪಿಜಿ ಸಬ್ಸಿಡಿ 300ರೂ.ಗೆ ಹೆಚ್ಚಳ; 603ರೂ.ಗೆ ಸಿಗಲಿದೆ ಅಡುಗೆ ಅನಿಲ ಸಿಲಿಂಡರ್
ಉಜ್ವಲ ಯೋಜನೆ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ನವರಾತ್ರಿಗೂ ಮುನ್ನ ಗಿಫ್ಟ್ ನೀಡಿದೆ. ಎಲ್ ಪಿಜಿ ಸಬ್ಸಿಡಿಯನ್ನು 200ರೂ.ನಿಂದ 300ರೂ.ಗೆ ಹೆಚ್ಚಿಸಿದೆ. ಇದರಿಂದ ಈ ಯೋಜನೆ ಫಲಾನುಭವಿಗಳಿಗೆ 603ರೂ.ಗೆ ಅಡುಗೆ ಅನಿಲ ಸಿಲಿಂಡರ್ ಸಿಗಲಿದೆ.
ನವದೆಹಲಿ (ಅ.4):ಗೃಹಿಣಿಯರಿಗೆ ನವರಾತ್ರಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರ ಗಿಫ್ಟ್ ನೀಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ಎಲ್ ಪಿಜಿ ಸಿಲಿಂಡರ್ ಗಳಿಗೆ ನೀಡುವ ಸಬ್ಸಿಡಿಯನ್ನು 200ರೂ.ನಿಂದ 300ರೂ.ಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ (ಅ.4ರಂದು) ಒಪ್ಪಿಗೆ ನೀಡಿದೆ. ಸಚಿವ ಸಂಪುಟದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ವಿಚಾರ ತಿಳಿಸಿದ್ದಾರೆ. ಇದರಿಂದ ಬಡಮಹಿಳೆಯರಿಗೆ ಇನ್ನು ಮುಂದೆ ಎಲ್ ಪಿಜಿ ಸಿಲಿಂಡರ್ ಮೇಲೆ 100ರೂ. ಹೆಚ್ಚುವರಿ ಸಬ್ಸಿಡಿ ಸಿಗಲಿದೆ. ಪ್ರಸ್ತುತ 14.2ಕೆಜಿ ಎಲ್ ಪಿಜಿ ಅಡುಗೆ ಅನಿಲದ ಸಿಲಿಂಡರ್ ಬೆಲೆ 903ರೂ. ಇದೆ. ಉಜ್ವಲ ಯೋಜನೆ ಫಲಾನುಭವಿಗಳಿಗೆ 300ರೂ. ಸಬ್ಸಿಡಿ ಹಿನ್ನೆಲೆಯಲ್ಲಿ ಇನ್ನು ಮುಂದೆ 603ರೂ.ಗೆ ದೊರೆಯಲಿದೆ. ಪ್ರಧಾ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು (ಅ.4) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2020ರ ಜೂನ್ ನಲ್ಲಿ ಉಜ್ವಲ ಯೋಜನೆ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಈ ಯೋಜನೆಯ ಫಲಾನುಭವಿಗಳು ಕೂಡ ಮಾರುಕಟ್ಟೆ ದರದಲ್ಲೇ ಸಿಲಿಂಡರ್ ಖರೀದಿಸಬೇಕಾಗಿತ್ತು. ಆದರೆ, ಈ ಯೋಜನೆಯನ್ನು ಮತ್ತೆ ಪ್ರಾರಂಭಿಸಿದ ಸರ್ಕಾರ ಇನ್ನೂ ಒಂದು ವರ್ಷಗಳ ಕಾಲ ವಿಸ್ತರಿಸೋದಾಗಿ ಈ ವರ್ಷದ ಮಾರ್ಚ್ ನಲ್ಲಿ ತಿಳಿಸಿತ್ತು.
ಏನಿದು ಪ್ರಧಾನ ಮಂತ್ರಿ ಉಜ್ವಲ ಯೋಜನೆ?
ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಪ್ರಮುಖ ಯೋಜನೆಗಳಲ್ಲಿ ಇದು ಕೂಡ ಒಂದು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡವರಿಗೆ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಹಾಗೂ ಸಿಲಿಂಡರ್ ನೀಡಲಾಗುತ್ತಿದೆ. 2016ರಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಇದೀಗ ಉಜ್ವಲ 2.0 ಯೋಜನೆ ಚಾಲ್ತಿಯಲ್ಲಿದೆ. ಬಡವರ್ಗದ ಮಹಿಳೆಯರಿಗೆ ಅಡುಗೆ ತಯಾರಿಕೆಯಲ್ಲಿನ ಶ್ರಮ ತಗ್ಗಿಸಲು ಹಾಗೂ ಕಟ್ಟಿಗೆಯಂತಹ ಸಾಂಪ್ರದಾಯಿಕ ಇಂಧನ ಬಳಕೆ ತಗ್ಗಿಸಿ ಹೊಗೆರಹಿತ ಅಡುಗೆಯನ್ನು ಪ್ರೋತ್ಸಾಹಿಸಲು ಈ ಯೋಜನೆ ಜಾರಿಗೆ ತರಲಾಗಿದೆ.
2016ರಿಂದ 2019ರ ವರೆಗಿನ ಮೊದಲ ಹಂತದ ಉಜ್ವಲ ಯೋಜನೆಯಲ್ಲಿ ಕೇಂದ್ರ ಸರ್ಕಾರ 8 ಕೋಟಿ ಅಡುಗೆ ಅನಿಲ ಸಂಪರ್ಕ ನೀಡಿದೆ. ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದಲ್ಲಿ ಜಾರಿಗೆ ತಂದಿರುವ ಈ ಯೋಜನೆಯಡಿ ಬಡ ಕುಟುಂಬಗಳಿಗೆ ತ್ವರಿತವಾಗಿ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ. ಮೊದಲು ಸಂಪರ್ಕ ಪಡೆಯಲು 10 ದಿನ ಕಾಯಬೇಕಿದ್ದರೆ, ಇದೀಗ ತಕ್ಷಣವೇ ನೀಡಲಾಗುತ್ತದೆ.
ಯಾರು ಈ ಯೋಜನೆ ಪ್ರಯೋಜನ ಪಡೆಯಬಹುದು?
ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಹಾಗೂ ಸಿಲಿಂಡರ್ ಪಡೆಯಲು ಮಹಿಳೆಯರು ಮಾತ್ರ ಅರ್ಹರಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಮಹಿಳೆಗೆ ಉಜ್ವರ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ. ಮಹಿಳೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಇನ್ನು ಉಜ್ವಲ ಯೋಜನೆ ಲಾಭ ಪಡೆಯುವ ಕುಟುಂಬದಲ್ಲಿ ಇತರ ಗ್ಯಾಸ್ ಸಂಪರ್ಕ ಇರಬಾರದು.
ದೇಶದ ಅರಿಶಿನ ಬೆಳೆಗಾರರ ದೀರ್ಘಕಾಲದ ಮನವಿ ಆಲಿಸಿದ ಮೋದಿ, ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆ!
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿದಾರ ಮಹಿಳೆಯ ಆಧಾರ್ ಕಾರ್ಡ್, ಗುರುತಿನ ಚೀಟಿ ಕಡ್ಡಾಯವಾಗಿದೆ. ಆಯಾ ರಾಜ್ಯ ಸರ್ಕಾರ ನೀಡುವ ಬಡತನ ರೇಖೆಗಿಂತ ಕೆಳಗಿನ ಪಡಿತರ ಚೀಟಿ(BPL Card) ಹೊಂದಿರಬೇಕು. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಕಾರ್ಡ್, ಪಡಿತರ ಚೀಟಿ ದಾಖಲೆ, ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು.ಉಜ್ವಲ ಯೋಜನೆಯಡಿ ಹೊಸ ಗ್ಯಾಸ್ ಸಂಪರ್ಕ ಪಡೆಯಲು ಬಯಸಿದ ಮಹಿಳೆ ಎರಡು ವಿಧದಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹಾಗೂ, ಡೌನ್ಲೋಡ್ ಮಾಡಿದ ಅರ್ಜಿ ಭರ್ತಿ ಮಾಡಿ ಹತ್ತಿರದ ಗ್ಯಾಸ್ ಎಜೆನ್ಸಿಗೆ ನೀಡುವ ಮೂಲಕವೂ ಸಲ್ಲಿಕೆ ಮಾಡಬಹುದು.