ಹೊಸ ಹಣಕಾಸು ವರ್ಷದ ಮೊದಲ ದಿನವೇ ಗ್ರಾಹಕರಿಗೆ ಗುಡ್ ನ್ಯೂಸ್ ; ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 30.50ರೂ. ಇಳಿಕೆ
ಹೊಸ ಹಣಕಾಸು ವರ್ಷದ ಮೊದಲ ದಿನವೇ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದ್ದು, ಜನಸಾಮಾನ್ಯರಿಗೆ ತುಸು ನಿರಾಳತೆ ಸಿಕ್ಕಿದೆ.
ನವದೆಹಲಿ (ಏ.1): ಪ್ರತಿ ತಿಂಗಳ ಮೊದಲ ದಿನ ಎಲ್ ಪಿಜಿ ಸಿಲಿಂಡರ್ ದರದಲ್ಲಿ ಬದಲಾವಣೆಯಾಗುತ್ತದೆ. ಅದರಂತೆ ಇಂದು (ಏ.1) ಕೂಡ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಹಾಗೂ 5ಕೆಜಿ ಫ್ರೀ ಟ್ರೇಡ್ ಎಲ್ ಪಿಜಿ (ಎಫ್ ಟಿಎಲ್) ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಮಾಡಿವೆ. ಈ ಪರಿಷ್ಕೃತ ದರ ಇಂದಿನಿಂದಲೇ (ಏ.1) ಜಾರಿಗೆ ಬರಲಿದ್ದು, 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 30.50ರೂ. ಇಳಿಕೆಯಾಗಿದೆ. ಹಾಗೆಯೇ 5ಕೆಜಿ ಎಫ್ಟಿಎಲ್ ಸಿಲಿಂಡರ್ ಬೆಲೆಯಲ್ಲಿ 7.50 ರೂ. ಇಳಿಕೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಕೂಡ ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು. ಮಾರ್ಚ್ 1ರಂದು 19 ಕೆಜಿ ತೂಕದ ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 25ರೂ. ಏರಿಕೆ ಮಾಡಲಾಗಿತ್ತು. ಇನ್ನು ಫೆಬ್ರವರಿ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 14ರೂ. ಹೆಚ್ಚಳ ಮಾಡಲಾಗಿತ್ತು. ಇದಕ್ಕೂ ಮುನ್ನ ಅಂದರೆ 2024ರ ಪ್ರಾರಂಭದಲ್ಲಿ ಹೊಸ ವರ್ಷದ ಪ್ರಯುಕ್ತ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 39.50ರೂ. ಇಳಿಕೆ ಮಾಡಲಾಗಿತ್ತು.
ಕಳೆದ ಎರಡು ತಿಂಗಳಿಂದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿನ ನಿರಂತರ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ತುಸು ನಿರಾಳತೆ ಸಿಕ್ಕಿದೆ. ಇನ್ನು ಈ ಬಾರಿ ಕೂಡ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆಯಾಗದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಇದು ಸಹಜವಾಗಿ ಗೃಹಿಣಿಯರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡಿದೆ.
ಎಲ್ಲ ಪಾಲಿಸಿದಾರರಿಗೆ ಏ.1ರಿಂದ ಇ-ವಿಮೆ ಕಡ್ಡಾಯ;ಇದರಿಂದ ಯಾರಿಗೆ ಲಾಭ ?
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆ ಮಾಡಿದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ 30.50 ರೂ. ಇಳಿಕೆಯಾಗಿದೆ. ಇದರಿಂದ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ 1764.50 ರೂ. ಗೆ ಲಭಿಸಲಿದೆ. ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 31.50 ರೂ. ಇಳಿಕೆಯಾಗಿದ್ದು , 1717.50 ರೂ.ಗೆ ದೊರೆಯಲಿದೆ. ಇನ್ನು ಚೆನ್ನೈನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 30.50 ರೂ. ಇಳಿಕೆಯಾಗಿದ್ದು, 1930 ರೂ.ಗೆ ಲಭಿಸಲಿದೆ. ಹಾಗೆಯೇ ಕೋಲ್ಕತ್ತಾದಲ್ಲಿ 32 ರೂ. ಕಡಿಮೆಯಾಗಿದ್ದು, 1879 ರೂ. ಗೆ ಲಭಿಸಲಿದೆ. ಇನ್ನು ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ 1830 ರೂ.ಗೆ ದೊರೆಯಲಿದೆ.
ಪ್ರತಿ ತಿಂಗಳ ಆರಂಭದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್, ಹಿಂದೂಸ್ಥಾನ ಪೆಟ್ರೋಲಿಯಂ ಕಾರ್ಪೋರೇಶನ್ ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡುತ್ತದೆ. ಕಳೆದ ತಿಂಗಳ ಅಂತಾರಾಷ್ಟ್ರೀಯ ಬೆಲೆಯ ಅಂದಾಜನ್ನು ಆಧರಿಸಿ ಪ್ರತಿ ತಿಂಗಳ ಮೊದಲ ದಿನ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತದೆ.
ಗಮನಿಸಿ, ಏ.1ರಂದು 2000ರೂ. ಮುಖಬೆಲೆಯ ನೋಟುಗಳ ವಿನಿಮಯ ಅಥವಾ ಠೇವಣಿಗೆ ಅವಕಾಶವಿಲ್ಲ: ಆರ್ ಬಿಐ
ಗೃಹ ಸಿಲಿಂಡರ್ ಬೆಲೆ ಸ್ಥಿರ
ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಕಳೆದ ವರ್ಷದ ಆಗಸ್ಟ್ ಬಳಿಕ ಯಾವುದೇ ಪರಿಷ್ಕರಣೆ ಮಾಡಿಲ್ಲ. 2023ರ ಆಗಸ್ಟ್ 30ರಂದು ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ 200ರೂ. ಕಡಿತ ಮಾಡಲಾಗಿತ್ತು. ಸದ್ಯ ಬೆಲೆ ಅಷ್ಟೇ ಇದ್ದು, ವ್ಯತ್ಯಾಸವಾಗಿಲ್ಲ. ಹೀಗಾಗಿ ಗೃಹಿಣಿಯರಿಗೆ ಕೆಲವು ತಿಂಗಳಿಂದ ನಿರಾಳತೆ ಸಿಕ್ಕಿದೆ.
ನವೆಂಬರ್, ಡಿಸೆಂಬರ್ ಹಾಗೂ ಜನವರಿ ಸತತ ಮೂರು ತಿಂಗಳು ಇಳಿಕೆ ಹಾದಿಯಲ್ಲಿದ್ದ ವಾಣಿಜ್ಯ ಸಿಲಿಂಡರ್ ಬೆಲೆ ಫೆಬ್ರವರಿಯಿಂದ ಏರಿಕೆ ಕಾಣಲು ಪ್ರಾರಂಭಿಸಿತ್ತು. ಆದರೆ, ಈ ತಿಂಗಳು ಮತ್ತೆ ಇಳಿಕೆಯಾಗಿದೆ. ಆದರೆ, ಈ ಇಳಿಕೆಗೆ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ.