ನವದೆಹಲಿ(ಡಿ.24): ಹೊಸ ವರ್ಷದಿಂದ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ಬೆಲೆಯನ್ನು ತೈಲ ಕಂಪನಿಗಳು ಪ್ರತಿ ವಾರಕ್ಕೊಮ್ಮೆ ಪರಿಷ್ಕರಿಸುವ ಪದ್ಧತಿ ಜಾರಿಗೆ ಬರುವ ಸಾಧ್ಯತೆಯಿದೆ. ಸದ್ಯ ತಿಂಗಳಿಗೊಮ್ಮೆ ಎಲ್‌ಪಿಜಿ ಬೆಲೆ ಪರಿಷ್ಕರಿಸಲಾಗುತ್ತಿದ್ದು, ಇದರಿಂದ ತಮಗೆ ನಷ್ಟವಾಗುತ್ತಿದೆ ಎಂದು ತೈಲ ಕಂಪನಿಗಳು ಹೇಳುತ್ತಿವೆ.

ಕಚ್ಚಾತೈಲ ಮಾರುಕಟ್ಟೆಯಲ್ಲಿ ಏರಿಳಿತಗೊಂಡ ಬೆಲೆಗೆ ಅನುಗುಣವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ನಿತ್ಯ ಬೆಳಿಗ್ಗೆ 6 ಗಂಟೆಗೆ ಪರಿಷ್ಕರಣೆಯಾಗುತ್ತವೆ. ಆದರೆ, ಅಡುಗೆ ಅನಿಲದ ಬೆಲೆ ಮಾರುಕಟ್ಟೆಯಲ್ಲಿ ಏರಿಳಿತವಾದರೂ ಒಂದು ತಿಂಗಳವರೆಗೆ ತೈಲ ಕಂಪನಿಗಳು ಬೆಲೆ ಪರಿಷ್ಕರಿಸುವಂತಿಲ್ಲ. ಹೀಗಾಗಿ ಬೆಲೆ ಏರಿಕೆಯಾಗಿದ್ದರೆ ತಿಂಗಳಿಡೀ ಅವುಗಳಿಗೆ ನಷ್ಟವಾಗುತ್ತದೆ. ಈ ಕಾರಣದಿಂದ ವಾರಕ್ಕೊಮ್ಮೆ ಬೆಲೆ ಪರಿಷ್ಕರಿಸಲು ತೈಲ ಕಂಪನಿಗಳು ಸಿದ್ಧತೆ ಮಾಡಿಕೊಂಡಿವೆ. ಅದಕ್ಕೆ ಸರ್ಕಾರವೂ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

2017ರಿಂದಲೇ ಡೀಸೆಲ್‌ ಮತ್ತು ಪೆಟ್ರೋಲ್‌ ದರವನ್ನು ದೈನಂದಿನ ಪರಿಷ್ಕರಣೆ ಮಾಡುವ ನೀತಿ ಜಾರಿಗೆ ಬಂದಿದೆ. ಇದರಿಂದ ತೈಲ ಕಂಪನಿಗಳ ಹೊರೆ ಭಾರೀ ಪ್ರಮಾಣದಲಿ ಕಡಿಮೆಯಾಗಿದೆ. ಹೀಗಾಗಿ ಈ ನೀತಿಯನ್ನು ಎಲ್‌ಪಿಜಿಗೂ ವಿಸ್ತರಣೆ ಮಾಡಲು ಅವು ಮುಂದಾಗಿವೆ.

2017: 3 ವರ್ಷದ ಹಿಂದೆಯೇ ಪೆಟ್ರೋಲ್‌, ಡೀಸೆಲ್‌ ದರ ದೈನಂದಿನ ಪರಿಷ್ಕರಣೆ ನೀತಿಗೆ ಜಾರಿಗೆ ಬಂದಿದ್ದು

ಈಗಿನ ನೀತಿ ಏನು?: ಪ್ರಸಕ್ತ ಮಾಸಿಕ ಬದಲಾವಣೆ

ಹೊಸ ನೀತಿ ಏನು?: ಪ್ರತಿ ವಾರಕ್ಕೊಮ್ಮೆ ದರ ಬದಲು