Asianet Suvarna News Asianet Suvarna News

ಗ್ಯಾಸ್‌ ಶಾಕ್‌ ಮೇಲೆ ಶಾಕ್‌: ಐದೇ ದಿನದಲ್ಲಿ 50 ರೂ. ಏರಿಕೆ!

ಎರಡೂವರೆ ತಿಂಗಳಲ್ಲಿ 225 ರು. ದುಬಾರಿ| ರಾಜ್ಯದಲ್ಲಿ ಈಗ ಸಿಲಿಂಡರ್‌ ಬೆಲೆ 822 ರು.| ವಾಣಿಜ್ಯ ಸಿಲಿಂಡರ್‌ ಬೆಲೆಯೂ 100 ರು. ಏರಿಕೆ. ಈಗ 1770 ರು.| ಫೆ.4ರ ನಂತರ 4, ಡಿಸೆಂಬರ್‌ ನಂತರ 6 ಬಾರಿ ಎಲ್‌ಪಿಜಿ ಏರಿಕೆ| ಕೊರೋನಾ ಲಾಕ್‌ಡೌನ್‌ ಬಳಿಕ ಎಲ್‌ಪಿಜಿ ಸಬ್ಸಿಡಿ ಸ್ಥಗಿತ| ಸಿಲಿಂಡರ್‌ ಬೆಲೆಯನ್ನು ಈಗ ಗ್ರಾಹಕರೇ ಪೂರ್ತಿ ಭರಿಸಬೇಕು| ತೆಲಂಗಾಣ, ತ.ನಾಡು ಸರ್ಕಾರಗಳಿಂದ ಅಲ್ಪ ಸಬ್ಸಿಡಿ ವಿತರಣೆ

LPG cylinder price hiked for the fourth time in a month pod
Author
Bangalore, First Published Mar 2, 2021, 7:48 AM IST

ನವದೆಹಲಿ(ಮಾ.02): ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸೋಮವಾರ ಮತ್ತೆ 25 ರು. ಏರಿಕೆ ಮಾಡಿದ್ದು, ಕಳೆದ ಐದು ದಿನಗಳಲ್ಲಿ ಎರಡನೇ ಬಾರಿ ಎಲ್‌ಪಿಜಿ ದರ ಹೆಚ್ಚಳವಾದಂತಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಈಗ 14.2 ಕೆ.ಜಿ. ಎಲ್‌ಪಿಜಿ ದರ 822 ರು.ಗೆ ಏರಿಕೆಯಾಗಿದೆ.

"

ಫೆ.4ರ ನಂತರ ನಾಲ್ಕು ಬಾರಿ ಹಾಗೂ 2020ರ ಡಿಸೆಂಬರ್‌ ನಂತರ ಆರು ಬಾರಿ ಎಲ್‌ಪಿಜಿ ದರ ಏರಿಕೆಯಾಗಿದೆ. ಕೇವಲ ಎರಡೂವರೆ ತಿಂಗಳಲ್ಲಿ ಎಲ್‌ಪಿಜಿ ಪ್ರತಿ ಸಿಲಿಂಡರ್‌ ದರ 225 ರು. ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಐಒಸಿ, ಬಿಪಿಸಿಎಲ್‌ ಹಾಗೂ ಎಚ್‌ಪಿಸಿಎಲ್‌ ಮೂರೂ ಕಂಪನಿಗಳು ಸಮಾನವಾಗಿ ದರ ಏರಿಕೆ ಮಾಡುತ್ತಿವೆ. ದೆಹಲಿಯಲ್ಲೀಗ ಪ್ರತಿ ಸಿಲಿಂಡರ್‌ ಬೆಲೆ 819, ಕೋಲ್ಕತಾದಲ್ಲಿ 845, ಮುಂಬೈನಲ್ಲಿ 819, ಚೆನ್ನೈನಲ್ಲಿ 835, ಹೈದರಾಬಾದ್‌ನಲ್ಲಿ 871 ರು. ಆಗಿದೆ.

ಕೊರೋನಾ ನಂತರ ಕೇಂದ್ರ ಸರ್ಕಾರ ಎಲ್‌ಪಿಜಿಗೆ ಸಬ್ಸಿಡಿ ನೀಡುವುದನ್ನು ನಿಲ್ಲಿಸಿದೆ. ಹೀಗಾಗಿ ಸಿಲಿಂಡರ್‌ನ ಸಂಪೂರ್ಣ ಬೆಲೆಯನ್ನು ಗ್ರಾಹಕರೇ ಭರಿಸಬೇಕಾಗುತ್ತದೆ. ಕೆಲ ರಾಜ್ಯಗಳಲ್ಲಿ ಗ್ರಾಹಕರಿಗೆ ಸಣ್ಣ ಪ್ರಮಾಣದ ಸಬ್ಸಿಡಿ ಸಿಗುತ್ತಿದೆ. ಉದಾಹರಣೆಗೆ ತೆಲಂಗಾಣದಲ್ಲಿ ಪ್ರತಿ ಸಿಲಿಂಡರ್‌ಗೆ 40 ರು. ಹಾಗೂ ತಮಿಳುನಾಡಿನಲ್ಲಿ 25 ರು. ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಯಾವುದೇ ಸಬ್ಸಿಡಿ ನೀಡಲಾಗುತ್ತಿಲ್ಲ.

ವಾಣಿಜ್ಯ ಸಿಲಿಂಡರ್‌ ಬೆಲೆ 100ರೂ. ಹೆಚ್ಚಳ

ಅಡುಗೆ ಅನಿಲದ ಹೊರತಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಸೋಮವಾರ ಸುಮಾರು 100 ರು. ಏರಿಕೆಯಾಗಿ, ಪ್ರತಿ ಸಿಲಿಂಡರ್‌ನ ಬೆಲೆ ಹೆಚ್ಚುಕಮ್ಮಿ 1770 ರು.ಗೆ ತಲುಪಿದೆ. ಇದರಿಂದ ಹೋಟೆಲ್‌ಗಳು, ಟೀ ಸ್ಟಾಲ್‌ಗಳು, ಫಾಸ್ಟ್‌ಫುಡ್‌ ಅಂಗಡಿಗಳು ಮುಂತಾದವು ಸಂಕಷ್ಟಕ್ಕೆ ಸಿಲುಕಿವೆ.

ಸಬ್ಸಿಡಿ ಸಿಗದು

ಎಲ್‌ಪಿಜಿಗೆ ಮೊದಲೆಲ್ಲಾ ಸಬ್ಸಿಡಿ ಸಿಗುತ್ತಿತ್ತು. ಕೊರೋನ ನಂತರ ಈಗ ಅದು ನಿಂತಿದೆ. ಹೀಗಾಗಿ ಪೂರ್ತಿ ದರವನ್ನು ಗ್ರಾಹಕರೇ ಭರಿಸಬೇಕು.

Follow Us:
Download App:
  • android
  • ios