ನವದೆಹಲಿ(ನ.01): ಕರ್ನಾಟಕದ 6 ನಗರಗಳು ಸೇರಿದಂತೆ ದೇಶದ 100 ಸ್ಮಾರ್ಟ್‌ ನಗರಗಳಲ್ಲಿ ಭಾನುವಾರದಿಂದ ಒಟಿಪಿ ಆಧಾರಿತ ಎಲ್‌ಪಿಜಿ ಸಿಲಿಂಡರ್‌ ವಿತರಣೆ ವ್ಯವಸ್ಥೆ ಆರಂಭವಾಗಲಿದೆ.

ಕರ್ನಾಟಕದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಈ ಪ್ರಕಾರ ನ.1ರಿಂದ ಗ್ರಾಹಕರು ತಾವು ಕಾಯ್ದಿರಿಸಿದ ಎಲ್‌ಪಿಜಿ ಸಿಲಿಂಡರ್‌ ಪಡೆಯಲು ತಮ್ಮ ಮೊಬೈಲ್‌ ಸಂಖ್ಯೆಗೆ ರವಾನೆಯಾಗಿರುವ ಒಟಿಪಿಯನ್ನು ಸಿಲಿಂಡರ್‌ ವಿತರಕರಿಗೆ ಪ್ರದರ್ಶಿಸಬೇಕಿದೆ.

ರಾಜಸ್ಥಾನದ ಜೈಪುರದಲ್ಲಿ ಈಗಾಗಲೇ ಆರಂಭಿಸಲಾಗಿರುವ ಡೆಲಿವರಿ ಅಥೆಂಟಿಕೇಷನ್‌ ಕೋಡ್‌(ಡಿಎಸಿ) ಎಂಬ ಯೋಜನೆಯನ್ನು ಇದೀಗ 100 ನಗರಗಳಿಗೆ ವಿಸ್ತರಿಸಲಾಗಿದೆ. ಎಲ್‌ಪಿಜಿ ಸಿಲಿಂಡರ್‌ ಅನ್ನು ಮನೆಗೆ ಪೂರೈಕೆ ಮಾಡಿಕೊಳ್ಳಬೇಕು ಎಂಬ ಗ್ರಾಹಕರ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಈ ಡಿಎಸಿ ರವಾನೆಯಾಗುತ್ತದೆ.

ಈ ಒಟಿಪಿಯನ್ನು ಸಿಲಿಂಡರ್‌ ಪೂರೈಸಲು ಮನೆಗೆ ಬರುವ ಗ್ಯಾಸ್‌ ಏಜೆಂಟ್‌ಗಳಿಗೆ ನೀಡಿದಲ್ಲಿ ಮಾತ್ರವೇ ಸಿಲಿಂಡರ್‌ ದೊರೆಯಲಿದೆ.