ಹಿರಿಯ ನಾಗರಿಕರಿಗೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ಉಳಿತಾಯಕ್ಕೆ ನೆರವು ನೀಡುವ ಯೋಜನೆಗಳು ಇವೇ ನೋಡಿ
ಹಿರಿಯ ನಾಗರಿಕರು ಕೂಡ ತೆರಿಗೆ ಉಳಿತಾಯ ಮಾಡಲು ಸೂಕ್ತ ಯೋಜನೆ ರೂಪಿಸೋದು ಅಗತ್ಯ. ಹಿರಿಯ ನಾಗರಿಕರಿಗೆ ತೆರಿಗೆ ಉಳಿಸಲು ನೆರವು ನೀಡುವ ಮೂರು ಯೋಜನೆಗಳ ಮಾಹಿತಿ ಇಲ್ಲಿದೆ.
Business Desk: ವಯಸ್ಸು 60ರ ಗಡಿ ದಾಟುತ್ತಿದ್ದಂತೆ ಆರ್ಥಿಕ ಸ್ಥಿರತೆ ಜೊತೆಗೆ ತೆರಿಗೆ ಉಳಿತಾಯದ ಯೋಜನೆಗಳಲ್ಲಿ ಹೂಡಿಕೆ ಮಾಡೋದು ಅತ್ಯಗತ್ಯ. ಭಾರತದಲ್ಲಿ 60 ವರ್ಷ ಅಥವಾ ಅದನ್ನು ಮೀರಿದ ಹಿರಿಯ ನಾಗರಿಕರು, 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಸೀನಿಯರ್ ಸಿಟಿಜನ್ಸ್ ವಿಶಿಷ್ಟ ಹೂಡಿಕೆ ಅವಕಾಶಗಳು ಹಾಗೂ ತೆರಿಗೆ ಉಳಿತಾಯದ ಅವಕಾಶಗಳನ್ನು ಹೊಂದಿದ್ದಾರೆ. 2024-25ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಗಾಗಿದೆ. ಪಿಂಚಣಿ ಪಡೆಯುವ ಹಿರಿಯ ನಾಗರಿಕರು ಕೂಡ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡೋದು ಅಗತ್ಯ. ಹೀಗಾಗಿ ಹಿರಿಯ ನಾಗರಿಕರು ತೆರಿಗೆ ಉಳಿತಾಯದ ಬಗ್ಗೆ ಯೋಚಿಸಲು ಇದು ಸೂಕ್ತ ಸಮಯ. ಹಾಗಾದ್ರೆ ಹಿರಿಯ ನಾಗರಿಕರಿಗೆ ಅತ್ಯಂತ ಆಕರ್ಷಕವಾದ ಹೂಡಿಕೆ ಸಾಧನಗಳು ಯಾವುವು? ಯಾವೆಲ್ಲ ಯೋಜನೆಗಳಲ್ಲಿ ಅವರು ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ.
1.ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ಎಸ್): ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ಎಸ್) ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ. ಇದು ಹಿರಿಯ ನಾಗರಿಕರಿಗೆ 30 ಲಕ್ಷ ರೂ. ತನಕ ಹೂಡಿಕೆ ಮಾಡಲು ನೆರವು ನೀಡುತ್ತದೆ. ಅಲ್ಲದೆ, ನಿಯಮಿತ ಆದಾಯ ಬಯಸೋರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಇದು ನೆರವು ನೀಡುತ್ತದೆ. ಎಸ್ ಸಿಎಸ್ಎಸ್ ಮೇಲಿನ ಬಡ್ಡಿ ಗಳಿಕೆ ಅಂದಾಜು ವಾರ್ಷಿಕ ಶೇ.8ರಷ್ಟಿದೆ. ಸಾಮಾನ್ಯ ಎಫ್ ಡಿಗಳಿಗಿಂತ ಹಿರಿಯ ನಾಗರಿಕರ ಎಫ್ ಡಿಗಳಿಗೆ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ. ಆದರೆ, ಈ ಬಡ್ಡಿ ಗಳಿಕೆಯ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ.
ತೆರಿಗೆದಾರರೇ ನೆನಪಿಡಿ, ಐಟಿಆರ್ ಸಲ್ಲಿಕೆ ಮಾಡೋವಾಗ ಯಾವುದೇ ಕಾರಣಕ್ಕೂ ಈ 10 ತಪ್ಪುಗಳನ್ನು ಮಾಡ್ಬೇಡಿ
2.ಸ್ಥಿರ ಠೇವಣಿ ಆದಾಯದ ಮೇಲೆ ತೆರಿಗೆ ಕಡಿತ: ಕಡಿಮೆ ಅಪಾಯದ ಹೂಡಿಕೆಗಳನ್ನು ಆಯ್ಕೆ ಮಾಡೋರಿಗೆ ಬ್ಯಾಂಕ್ ಸ್ಥಿರ ಠೇವಣಿಗಳು ಜನಪ್ರಿಯ ಆಯ್ಕೆಗಳಾಗಿವೆ. ಅದರಲ್ಲೂ ಹಿರಿಯ ನಾಗರಿಕರಿಗೆ ಹೂಡಿಕೆಗೆ ಇವು ಉತ್ತಮ ಆಯ್ಕೆಗಳಾಗಿವೆ. ಐದು ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಸ್ಥಿರ ಠೇವಣಿಗಳು ಸೆಕ್ಷನ್ 80 ಸಿ ಅಡಿಯಲ್ಲಿ ಬೀಳುತ್ತವೆ. ಇವುಗಳಿಗೆ ವಾರ್ಷಿಕ 1.5ಲಕ್ಷ ರೂ. ತನಕ ತೆರಿಗೆ ಕಡಿತಕ್ಕೆ ಅವಕಾಶವಿದೆ. ಇನ್ನು ಈ ಸ್ಥಿರ ಠೇವಣಿಗಳು ಹಾಗೂ ಇತರ ಉಳಿತಾಯ ಯೋಜನೆಗಳ ಬಡ್ಡಿ ಆದಾಯದ ಮೇಲೆ 50,000 ರೂ. ತನಕ ತೆರಿಗೆ ಕಡಿತದ ಪ್ರಯೋಜನ ಪಡೆಯಲು ಹಿರಿಯ ನಾಗರಿಕರಿಗೆ ಅವಕಾಶವಿದೆ. ಹೀಗಾಗಿ ತೆರಿಗೆ ಉಳಿತಾಯಕ್ಕೆ ಹಿರಿಯ ನಾಗರಿಕರು ಎಫ್ ಡಿಗಳಲ್ಲಿ ಹೂಡಿಕೆ ಮಾಡಬಹುದು.
ತೆರಿಗೆದಾರರೇ ಗಮನಿಸಿ, ನೀವು ಆನ್ ಲೈನ್ ಐಟಿಆರ್ ಸಲ್ಲಿಕೆ ಮಾಡ್ಬಹುದು; ಐಟಿಆರ್-1, ಐಟಿಆರ್-2, ಐಟಿಆರ್-4 ಈಗ ಲಭ್ಯ
3.ವೈದ್ಯಕೀಯ ವೆಚ್ಚಗಳಿಗೆ ತೆರಿಗೆ ಕಡಿತ: ಹೂಡಿಕೆ ಹೊರತುಪಡಿಸಿ ಆರೋಗ್ಯ ಹಾಗೂ ವೈದ್ಯಕೀಯ ವೆಚ್ಚಗಳು ಕೂಡ ತೆರಿಗೆ ವಿನಾಯ್ತಿ ಪ್ರಯೋಜನ ಹೊಂದಿವೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಡಿ ಅಡಿಯಲ್ಲಿ ಹಿರಿಯ ನಾಗರಿಕರುವೈದ್ಯಕೀಯ ವೆಚ್ಚಗಳು ಅಥವಾ ಆರೋಗ್ಯ ವಿಮಾ ಪ್ರೀಮಿಯಂಗಳ ಮೇಲೆ ಕಡಿತಗಳನ್ನು ಕ್ಲೇಮ್ ಮಾಡಬಹುದು. ಇದು ವಾರ್ಷಿಕ 50,000 ರೂ. ತನಕ ಮಿತಿ ಹೊಂದಿವೆ. ಇನ್ನು ಸೆಕ್ಷನ್ 80DDB ನಿರ್ದಿಷ್ಟ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರೋರಿಗೆ 1ಲಕ್ಷ ರೂ. ತನಕ ತೆರಿಗೆ ಕಡಿತದ ಪ್ರಯೋಜನ ಪಡೆಯಲು ನೆರವು ನೀಡುತ್ತವೆ. ಜಾಗೃತೆಯಿಂದ ಯೋಜನೆ ರೂಪಿಸುವ ಜೊತೆಗೆ ಸೂಕ್ತ ಹೂಡಿಕೆ ನಿರ್ಧಾರಗಳ ಮೂಲಕ ಹಿರಿಯ ನಾಗರಿಕರು ಹಣಕಾಸಿನ ಸ್ಥಿರತೆ ಸಾಧಿಸಬಹುದು. ಹಾಗೆಯೇ ನಿವೃತ್ತಿ ವಯಸ್ಸಿನಲ್ಲಿ ತೆರಿಗೆ ಹೊರೆ ಇಳಿಸಿಕೊಳ್ಳಬಹುದು.