ನವದೆಹಲಿ(ಏ.30): ಕೊರೋನಾ ವೈರಸ್‌ನಿಂದಾಗಿ ವಿಶ್ವದ ಪ್ರಮುಖ ದೇಶಗಳಲ್ಲಿನ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಕಚ್ಚಾ ತೈಲ ದರಗಳು ಪಾತಾಳಕ್ಕೆ ಕುಸಿದಿವೆ. ಇನ್ನೊಂದೆಡೆ ಬೇಡಿಕೆ ಇಲ್ಲದೆ ಇರುವ ಕಾರಣ ಸಾವಿರಾರು ಕಚ್ಚಾತೈಲ ಸಾಗಣೆ ಹಡಗುಗಳು ಸಮುದ್ರ ತೀರದಲ್ಲೇ ಲಂಗರು ಹಾಕಿವೆ. ವ್ಯಾಪಾರಿಗಳಿಗೆ ತೈಲ ಸಂಗ್ರಹಿಸಿಡುವುದು ಎಲ್ಲಿ ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ದೊಡ್ಡ ದೊಡ್ಡ ತೈಲೋತ್ಪನ್ನ ಕಂಪನಿಗಳಿಗೆ ಬಾಗಿಲು ಮುಚ್ಚುವ ಸ್ಥಿತಿ ಬಂದಿದೆ ಎಂದು ವರದಿಗಳು ತಿಳಿಸಿವೆ.

ಲಾಕ್‌ಡೌನ್‌ನಿಂದ ಕಾರ್ಖಾನೆಗಳು ಬಂದ್‌ ಆಗಿದ್ದು, ಟ್ರಕ್‌ ಚಾಲಕರು ಮನೆಯಲ್ಲೇ ಇರುವ ಕಾರಣ ತೈಲ ಬೇಡಿಕೆ ಗಣನೀಯವಾಗಿ ಕುಸಿಯುತ್ತಿದೆ. ಜೊತೆಗೆ ಬಹುತೇಕ ಎಲ್ಲಾ ತೈಲ ಸಂಗ್ರಹಾಗಾರಗಳು ಈಗಾಗಲೇ ಭರ್ತಿ ಆಗಿದ್ದು, ವ್ಯಾಪಾರಿಗಳು ಭವಿಷ್ಯದಲ್ಲಿ ಉತ್ತಮ ದರ ಸಿಗಬಹುದು ಎಂಬ ಕಾರಣಕ್ಕೆ ತೈಲ ಟ್ಯಾಂಕರ್‌ಗಳನ್ನು ಸಮುದ್ರದಲ್ಲೇ ನಿಲ್ಲಿಸಿಕೊಂಡಿದ್ದಾರೆ.

ಇದರ ಪರಿಣಾಮ ತೈಲೋತ್ಪನ್ನ ಕೈಗಾರಿಕೆಗಳಿಗೆ ತೈಲ ಪೂರೈಕೆಗೆ ಟ್ಯಾಂಕರ್‌ಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಈ ಬೆಳವಣಿಗೆ ತೈಲೋತ್ಪನ್ನ ಕೈಗಾರಿಕೆಗಳು ಬಾಗಿಲು ಮುಚ್ಚಲು, ಲಕ್ಷಾಂತರ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ವರದಿಗಳು ತಿಳಿಸಿವೆ.