ಬೆಂಗಳೂರು(ಏ.06): ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಘೋಷಿಸಿರುವುದರಿಂದ ಅಗತ್ಯ ಸೇವೆ ವ್ಯಾಪ್ತಿಯಲ್ಲಿ ಬರುವ ಪೆಟ್ರೋಲ… ಬಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದರೂ 24/7 ಕಾರ್ಯ ನಿರ್ವಹಿಸುವ ಬಂಕ್‌ಗಳು ರಾತ್ರಿ 10.30 ಕ್ಕೆ ಸೇವೆ ಸ್ಥಗಿತಗೊಳಿಸುತ್ತಿವೆ.

ಕೊರೋನಾ ಸೋಂಕಿನ ಭೀತಿ ಪೆಟ್ರೋಲ… ಬಂಕ್‌ಗಳಿಗೂ ತಟ್ಟಿದ್ದು, ಬಹುತೇಕ ಬಂಕ್‌ ಮಾಲೀಕರು ಅರ್ಧಕಿಂತ ಹೆಚ್ಚಿನ ಸಿಬ್ಬಂದಿಗೆ ರಜೆ ನೀಡಿ ಕಳುಹಿಸಿದ್ದಾರೆ. ಹಾಗಾಗಿ ಸೀಮಿತ ಸಿಬ್ಬಂದಿ ಪೆಟ್ರೋಲ… ಬಂಕ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಸಾರ್ವಜನಿಕರು ಮನೆಗಳಿಂದ ಹೊರಬಾರದಂತೆ ಸೂಚಿಸಿರುವುದರಿಂದ ಬಂಕ್‌ಗಳಿಗೆ ಬರುವ ವಾಹನಗಳು ವಿರಳವಾಗಿವೆ. ಪೆಟ್ರೋಲ… ಬಂಕ್‌ಗಳು ಅಗತ್ಯ ಸೇವೆ ವ್ಯಾಪ್ತಿಗೆ ಒಳಪಡುವುದರಿಂದ ಸಾಮಾನ್ಯ ದಿನಗಳಂತೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10.30 ರವರೆಗೆ ಕಾರ್ಯ ನಿರ್ವಹಿಸುತ್ತಿವೆ. ಇನ್ನು ದಿನದ 24 ತಾಸು ಕಾರ್ಯ ನಿರ್ವಹಿಸುತ್ತಿದ್ದ ಬಂಕ್‌ಗಳು ರಾತ್ರಿ 10.30ಕ್ಕೆ ಬಂದ್‌ ಆಗುತ್ತಿವೆ.

ಊಟವಿಲ್ಲದೇ ಸಿಬ್ಬಂದಿ ಪರದಾಟ:

ಕೊರೋನಾ ವೈರಸ್‌ ಹರಡುವ ಭೀತಿ ನಡುವೆ ಪೆಟ್ರೋಲ್‌ ಬಂಕ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಮರ್ಪಕ ಊಟ-ತಿಂಡಿ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

'ಲಾಕ್‌ಡೌನ್‌ ಪಾಲಿಸದಿದ್ದರೆ ಗಂಡಾಂತರ, ಎಚ್ಚರ ತಪ್ಪಿದ್ರೆ ಪಾಶ್ಚಾತ್ಯ ದೇಶಗಳ ಸ್ಥಿತಿ'

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ನಗರದ ಬಹುತೇಕ ಹೋಟೆಲ್‌- ರೆಸ್ಟೋರೆಂಟ್‌ ಬಾಗಿಲು ಹಾಕಿವೆ. ಇನ್ನು ನಗರದ ಅಲ್ಲಲ್ಲಿ ಕೆಲವೊಂದು ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳು ಕೇವಲ ಅಡುಗೆ ಮನೆ ತೆರೆದು ಊಟ-ತಿಂಡಿ ಪಾರ್ಸೆಲ್‌ ಕೊಡುತ್ತಿವೆ. ಕೆಲವೇ ಗಂಟೆಗಳಲ್ಲಿ ಪಾರ್ಸೆಲ್‌ ಕೊಟ್ಟು ಬಾಗಿಲು ಹಾಕುತ್ತಿರುವುದರಿಂದ ಆಹಾರಕ್ಕೆ ಸಮಸ್ಯೆಯಾಗುತ್ತಿದೆ. ಮೂರು ಹೊತ್ತು ಹೋಟೆಲ್‌ ಊಟ ನೆಚ್ಚಿಕೊಂಡಿದ್ದ ಈ ಸಿಬ್ಬಂದಿ ಈಗ ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಾಮಾಜಿಕ ಅಂತರ ಕೇಳಲೇಬೇಡಿ: ಮಾಂಸ ಖರೀದಿಗೆ ಮುಗಿಬಿದ್ದ ಜನತೆ!

ನೀವೇ ವ್ಯವಸ್ಥೆ ಮಾಡಿಕೊಳ್ಳಿ

ಲಾಕ್‌ಡೌನ್‌ ಆದ ಆರಂಭದಲ್ಲಿ ಬಂಕ್‌ ಮಾಲೀಕರು ಊಟದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಮೂರ್ನಾಲ್ಕು ದಿನ ಮೂರು ಹೊತ್ತು ವ್ಯವಸ್ಥೆ ಮಾಡಿದ್ದರು. ನಂತರ ಕೈಚಲ್ಲಿದರು. ಈ ಬಗ್ಗೆ ಪ್ರಶ್ನಿಸದ್ದಕ್ಕೆ ನೀವೇ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದರು. ನಮ್ಮ ಗೋಳು ನೋಡಲಾಗದ ಬಂಕ್‌ನ ಮ್ಯಾನೇಜರ್‌ ಒಂದೆರೆಡು ದಿನ ಅವರ ಮನೆಯಿಂದಲೇ ಊಟ ತಂದು ಕೊಡುತ್ತಿದ್ದರು. ಬಳಿಕ ಅವರು ನಿರಾಸಕ್ತಿ ತಳೆದರು. ಕೇಳಲು ನಮಗೂ ಮುಜುಗರವಾಗುತ್ತಿತ್ತು. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಸಿಗದೆ ಕೆಲಸ ಮಾಡಲು ಕಷ್ಟವಾಗುತ್ತಿದೆ. ಊರುಗಳಿಗೆ ಹೋಗೋಣ ಎಂದರೆ ನಗರದಿಂದ ಆಚೆ ಹೋಗಲು ಬಿಡುತ್ತಿಲ್ಲ. ಮನೆಯಲ್ಲಿ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಬದುಕು ಅತಂತ್ರವಾಗಿದೆ. ಹೊತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹನುಮಂತ ನಗರದ ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಪರಮೇಶ್‌ ಬೇಸರದಿಂದ ನುಡಿದರು.