ಕೂಲ್ ಡ್ರಿಂಕ್ಸ್ ನಲ್ಲಿ ಸತ್ತ ಹಲ್ಲಿ, ಅಹಮದಾಬಾದ್ ಮೆಕ್ ಡೊನಾಲ್ಡ್ ಸೀಲ್ ಮಾಡಿದ ಅಧಿಕಾರಿಗಳು!
ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮೆಕ್‌ಡೊನಾಲ್ಡ್‌ನ ಔಟ್‌ಲೆಟ್ ಫ್ರಾಂಚೈಸಿ ಹೊಂದಿರುವ ಸೋಲಾ ಮಳಿಗೆಯಲ್ಲಿ ಗ್ರಾಹಕರೊಬ್ಬರು ತಾವು ಖರೀದಿಸಿದ ತಂಪು ಪಾನೀಯದಲ್ಲಿ ಹಲ್ಲಿ ತೇಲುತ್ತಿರುವ ಬಗ್ಗೆ ದೂರಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಅಹಮದಾಬಾದ್ ಮಹಾನಗರ ಪಾಲಿಕೆ ಸೋಲಾ ಮಳಿಗೆಯನ್ನು ಸೀಲ್ ಮಾಡಿದೆ.
ಅಹಮದಾಬಾದ್ (ಮೇ. 28): ಕೂಲ್ ಡ್ರಿಂಕ್ಸ್ ನಲ್ಲಿ (Cool Drink) ಸತ್ತ ಹಲ್ಲಿ ತೇಲುತ್ತಿದ್ದ ಪ್ರಕರಣದಲ್ಲಿ ಕ್ರಮ ಕೈಗೊಂಡಿರುವ ಅಹಮದಾಬಾದ್ ಮಹಾನಗರ ಪಾಲಿಕೆ (Ahmedabad Municipal Corporation,), ಅಲ್ಲಿನ ಸೋಲಾ ಮಳಿಗೆಯಲ್ಲಿದ್ದ (Sola Outlet) ಮೆಕ್ ಡೊನಾಲ್ಡ್ ಮಳಿಗೆಯನ್ನು (mcdonalds Farnchise ) ಸೀಲ್ ಮಾಡಿದೆ. ಭಾರ್ಗವ್ ಜೋಶಿ ಎಂಬ ಗ್ರಾಹಕನು ತನ್ನ ಸ್ನೇಹಿತನೊಂದಿಗೆ ಸೋಲಾದ ಮೆಕ್‌ಡೊನಾಲ್ಡ್‌ನ ಔಟ್‌ಲೆಟ್‌ಗೆ ಹೋಗಿ ಎರಡು ಬರ್ಗರ್ ಮತ್ತು ಎರಡು ಗ್ಲಾಸ್ ಕೋಕಾ-ಕೋಲಾ ಸಾಫ್ಟ್ ಡ್ರಿಂಕ್ ಅನ್ನು ಆರ್ಡರ್ ಮಾಡಿದ್ದ, ಮಳಿಗೆಯವರು ನೀಡಿದ್ದ ಕೂಲ್ ಡ್ರಿಂಕ್ಸ್ ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿತ್ತು.
ಇದನ್ನು ವೀಡಿಯೋ ಮಾಡಿದ್ದ ಭಾರ್ಗವ್ ಜೋಶಿ, ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಲ್ಲದೆ, ಮಹಾನಗರ ಪಾಲಿಕೆಗೆ ಟ್ಯಾಗ್ ಕೂಡ ಮಾಡಿದ್ದರು. ಈಗ ಪಾಲಿಕೆ ಈ ಕುರಿತಾಗಿ ಕ್ರಮ ಕೈಗೊಂಡು ಮಳಿಗೆಯನ್ನು ಸೀಲ್ ಮಾಡಿದೆ. ಜೋಶಿ ಅವರು ಘಟನೆಯ ವಿಡಿಯೋವನ್ನು ಮಾಡಿ, ತಂಪು ಪಾನೀಯದೊಳಗೆ ಸತ್ತ ಹಲ್ಲಿಯನ್ನು ತೋರಿಸಿದ್ದರು. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು ಸಿಬ್ಬಂದಿಯ ನಿರ್ಲಕ್ಷ್ಯವನ್ನು ಆರೋಪಿಸಿದ್ದಾರೆ. ಅವರು ಮತ್ತು ಅವರ ಸ್ನೇಹಿತರು ಸೋಲಾದಲ್ಲಿನ ಮೆಕ್‌ಡೊನಾಲ್ಡ್ ಔಟ್‌ಲೆಟ್‌ನಲ್ಲಿ ನಾಲ್ಕು ಗಂಟೆಗಳ ಕಾಲ ಯಾರಾದರೂ ತಮ್ಮ ದೂರನ್ನು ಕೇಳುತ್ತಾರೆ ಎಂದು ಕಾಯುತ್ತಿದ್ದರು ಎಂದು ಅವರು ಹೇಳಿದರು.
ಮೆಕ್ ಡೊನಾಲ್ಡ್ ಅವರ ಅಜಾಗರೂಕ ವರ್ತನೆಯ ಬಗ್ಗೆ ಜೋಡಿ ದೂರು ನೀಡಿದಾಗ, ಮಳಿಗೆಯ ಮಾಲೀಕರು ಸಂಪೂರ್ಣ 300 ರೂಪಾಯಿಯ ಹಣವನ್ನು ರೀಫಂಡ್ ಮಾಡುವುದಾಗಿ ಹೇಳಿದ್ದರು. ಆದರೆ, ಜೋಶಿ ಹಾಗೂ ಅವರ ಸ್ನೇಹಿತರು ರೀಫಂಡ್ ಗಿಂತ ಹೆಚ್ಚಾಗಿ, ಇದು ಆರೋಗ್ಯ ಮತ್ತು ನೈರ್ಮಲ್ಯದ ಗಂಭೀರ ವಿಷಯ ಎಂದಿದ್ದರು. ಅದರ ಬೆನ್ನಲ್ಲಿಯೇ ವಿಡಿಯೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ (ಎಎಂಸಿ) ಅನ್ನು ಟ್ಯಾಗ್ ಮಾಡಿದ್ದರು.
ಆ ನಂತರ ಕ್ರಮ ಕೈಗೊಂಡ ಎಎಂಸಿ, ಸೋಲಾ ಹಾಗೂ ಮೆಕ್ ಡೊನಾಲ್ಡ್ ಮಳಿಗೆಯನ್ನು ಸೀಲ್ ಮಾಡಿದ್ದಲ್ಲದೆ, ಮೆಕ್ ಡೊನಾಲ್ಡ್ ಮಳಿಗೆ ತಂಪು ಪಾನೀಯದ ಮಾದರಿಯನ್ನೂ ಸಹ ತೆಗೆದುಕೊಂಡಿತು. ಇದನ್ನು ನಗರದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುವುದಾಗಿ ಹೇಳಿದೆ. ಮುಂದಿನ ಆದೇಶದವರೆಗೂ ಮೆಕ್ ಡೊನಾಲ್ಡ್ ಔಟ್ ಲೆಟ್ ಮುಚ್ಚಿರುತ್ತದೆ ಎಂದು ಎಎಂಸಿ ಹೇಳಿದೆ.
ಮ್ಯಾಕ್ ಡೊನಾಲ್ಡ್'ನ ತಿಂಡಿಯಲ್ಲಿ ಸಿಕ್ತು ಸತ್ತ ಹಲ್ಲಿ : ಬೆಚ್ಚಿ ಬಿದ್ದ ಗ್ರಾಹಕರು
ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅನುಮತಿಯಿಲ್ಲದೆ ಔಟ್ಲೆಟ್ ಅನ್ನು ಪುನಃ ತೆರೆಯಲು ಅನುಮತಿಸಲಾಗುವುದಿಲ್ಲ. ಜೋಶಿ ಅವರು ಸೀಲ್ ಮಾಡಿದ ಔಟ್ ಲೆಟ್ ನ ಚಿತ್ರವನ್ನೂ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. "ಎಎಂಸಿ ಮಾಡಿದ ಉತ್ತಮ ಕೆಲಸ" ಎಂದು ಅವರು ಬರೆದಿದ್ದಾರೆ.
ಇಡ್ಲಿ ಸಾಂಬಾರ್ ಜೊತೆ ತಟ್ಟೆಯಲ್ಲಿ ಹೊಳೆಯುತ್ತಿತ್ತು ಹಲ್ಲಿಯ ಕಣ್ಣು..! ಲಾಕ್‌ಡೌನ್ ನಂತ್ರ ಹೋಟೆಲ್ ಅವಸ್ಥೆ ಇದು
ಈ ನಡುವೆ ಮೆಕ್ ಡೊನಾಲ್ಡ್ ತನ್ನ ಹೇಳಿಕೆಯನ್ನು ನೀಡಿದ್ದು, ಮೆಕ್ ಡೊನಾಲ್ಡ್ ಅಲ್ಲಿ ನಮ್ಮ ಎಲ್ಲಾ ಗ್ರಾಹಕರ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಗುಣಮಟ್ಟ, ಸೇವೆ, ಶುಚಿತ್ವ ಮತ್ತು ಮೌಲ್ಯವು ನಮ್ಮ ವ್ಯಾಪಾರ ಕಾರ್ಯಾಚರಣೆಗಳ ಭಾಗವಾಗಿದೆ. ಇದಲ್ಲದೆ, ನಮ್ಮ ಗೋಲ್ಡನ್ ಗ್ಯಾರಂಟಿ ಕಾರ್ಯಕ್ರಮದ ಭಾಗವಾಗಿ, ನಮ್ಮ ಎಲ್ಲಾ ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳಲ್ಲಿ ನಾವು 42 ಕಟ್ಟುನಿಟ್ಟಾದ ಸುರಕ್ಷತೆ ಮತ್ತು ನೈರ್ಮಲ್ಯ ಪ್ರೋಟೋಕಾಲ್‌ಗಳನ್ನು ಜಾರಿಗೆ ತಂದಿದ್ದೇವೆ. ಅಹಮದಾಬಾದ್ ಔಟಲೆಟ್‌ನಲ್ಲಿ ನಡೆದಿದೆ ಎನ್ನಲಾದ ಈ ಘಟನೆಯನ್ನು ನಾವು ಪರಿಶೀಲಿಸುತ್ತಿದ್ದೇವೆ. ನಾವು ಪದೇ ಪದೇ ಪರಿಶೀಲಿಸಿದಾಗ ಮತ್ತು ಯಾವುದೇ ತಪ್ಪು ಕಂಡುಬಂದಿಲ್ಲ, ನಾವು ಉತ್ತಮ ಕಾರ್ಪೊರೇಟ್ ನಾಗರಿಕರಾಗಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದೇವೆ" ಎಂದು ಹೇಳಿದೆ.