ಬಿಜಿಂಗ್(ಸೆ.22): ರಷ್ಯಾದಿಂದ ಫೈಟರ್ ಜೆಟ್ ಗಳನ್ನು ಖರೀದಿಸುವುದರ ವಿರುದ್ಧ ವಿಧಿಸಲಾಗಿರುವ ನಿರ್ಬಧವನ್ನು ತೆಗೆಯಿರಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಅಮೆರಿಕಕ್ಕೆ ವೈರಿ ರಾಷ್ಟ್ರ ಚೀನಾ ಗಂಭೀರ ಎಚ್ಚರಿಕೆ ನೀಡಿದೆ. 

ಚೀನಾ ಸೇನೆ ರಷ್ಯಾದಿಂದ ಫೈಟರ್ ಜೆಟ್ ಗಳನ್ನು ಖರೀದಿಸುವುದರ ವಿರುದ್ಧ ವಿಧಿಸಲಾಗಿರುವ ನಿರ್ಬಂಧದ ಬಗ್ಗೆ ಚೀನಾ ವಿದೇಶಾಂಗ ಇಲಾಖೆ ಕಠಿಣ ಪ್ರತಿಕ್ರಿಯೆ ನೀಡಿದ್ದು,  ಅಮೆರಿಕ ವಿದೇಶಾಂಗ ನೀತಿಗಳ ಪ್ರಾಥಮಿಕ ನಿಯಮಗಳನ್ನೇ ಉಲ್ಲಂಘನೆ ಮಾಡುತ್ತಿದೆ ಎಂದು ಹರಿಹಾಯ್ದಿದೆ.

ಅಮೆರಿಕ ಚೀನಾದ ಸಾರ್ವಭೌಮತೆ ಮೇಲೆ ಸವಾರಿ ಮಾಡಲು ಯತ್ನ ನಡೆಸಿದ್ದು, ಈ ಮೂಲಕ ಚೀನಾದೊಂದಿಗಿನ ಸಂಬಂಧವನ್ನು ಕದಡಿದೆ ಎಂದು ಚೀನಾ ಆರೋಪಿಸಿದೆ. ಅಲ್ಲದೇ ಈ ಕೂಡಲೇ ನಿರ್ಬಂಧವನ್ನು ಹಿಂಪಡೆಯುವಂತೆ ಅಮೆರಿಕ ಮೇಲೆ ಒತ್ತಡ ಹೇರಲಾಗುವುದು ಎಂದು ಚೀನಾ ಹೇಳಿದೆ. 

ರಷ್ಯಾದಿಂದ ಎಸ್ ಯು-35 ಕಾಂಬ್ಯಾಟ್ ಏರ್ ಕ್ರಾಫ್ಟ್ ಹಾಗೂ ಎಸ್-400 ಸರ್ಫೇಸ್-ಏರ್ ಕ್ಷಿಪಣಿ ವ್ಯವಸ್ಥೆಯನ್ನು ಚೀನಾ ಖರೀದಿಸುವುದಕ್ಕೆ ಅಮೆರಿಕ ನಿರ್ಬಂಧ ವಿಧಿಸಿದೆ. ಅಮೆರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ರಷ್ಯಾದಿಂದ ಯಾವುದೇ ದೇಶ ರಕ್ಷಣಾ ಉಪಕರಣಗಳನ್ನು ಖರೀದಿಸಿದರೆ ಆ ರಾಷ್ಟ್ರದ ಮೇಲೆ ನಿರ್ಬಂಧಗಳನ್ನು ಹೇರುವುದಾಗಿ ಅಮೆರಿಕ ಹೇಳಿದೆ.