ನವದೆಹಲಿ(ಏ.17): ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದು, 1.14 ಲಕ್ಷ ಉದ್ಯೋಗಿಗಳಿಗೆ ಶೇ.25ರಷ್ಟುವೇತನ ಏರಿಕೆಗೆ ತೀರ್ಮಾನಿಸಿದೆ.

ಅಲ್ಲದೇ ನೌಕರರಿಗೆ ಇನ್ನು ಮುಂದೆ ವಾರದಲ್ಲಿ 6 ದಿನದ ಬದಲು 5 ದಿನ ಮಾತ್ರ ಕೆಲಸದ ದಿನವನ್ನು ನಿಗದಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ ಎಲ್‌ಐಸಿ ಉದ್ಯೋಗಿಗಳ ವೇತನ ಶ್ರೇಣಿ ಪರಿಷ್ಕರಣೆ ಮಾಡಿ ಗುರುವಾರ ಅಧಿಸೂಚನೆ ಹೊರಡಿಸಿದೆ. ಅದರಂತೆ ಏರಿಕೆ 2017ರ ಆಗಸ್ಟ್‌ 1ರಿಂದ ಪೂರ್ವಾನ್ವಯ ಆಗಲಿದೆ.

ಅಲ್ಲದೇ ಎಲ್ಲಾ ನೌಕರರಿಗೆ ಅವರ ಶ್ರೇಣಿಗೆ ತಕ್ಕಂತೆ ತಿಂಗಳಿಗೆ 1,500 ರು.ನಿಂದ 13,500 ರು.ವರೆಗೆ ವಿಶೇಷ ಭತ್ಯೆಯನ್ನು ಪರಿಚಯಿಸಲಾಗಿದೆ. ವೇತನ ಏರಿಕೆಯಿಂದ ಎಲ್‌ಐಸಿಗೆ ವಾರ್ಷಿಕ 2,700 ಕೋಟಿ ರು.ನಷ್ಟುಹೆಚ್ಚುವರಿ ಹೊರೆಬೀಳಲಿದೆ.