ಪ್ರಧಾನಿ ನರೇಂದ್ರ ಮೋದಿಯವರ ನವಭಾರತ ನಿರ್ಮಾಣದ ಗುರಿ ಇದೆ. ಉದ್ಯಮಿಗಳು ಇನ್ನು ಮುಂದೆ ಬೆಂಗಳೂರಿನಿಂದ ಆಚೆಗೆ ನೋಡಬೇಕು ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ಬೆಂಗಳೂರು(ನ.17): ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಸಾಧಿಸಿರುವ ಯಶೋಗಾಥೆಗೆ 25 ವರ್ಷಗಳಿಂದಲೂ ಮಹತ್ತರ ಕೊಡುಗೆ ನೀಡುತ್ತಿರುವ ಇನ್ಫೋಸಿಸ್, ವಿಪ್ರೋ ಸೇರಿದಂತೆ 34 ಕಂಪನಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ, ರಾಜ್ಯದ ಈ ಬೆಳವಣಿಗೆಗೆ ಶ್ರಮಿಸಿದ ಐಟಿ ಇಲಾಖೆಯ ಇದುವರೆಗಿನ ಕಾರ್ಯದರ್ಶಿಗಳನ್ನು ಕೂಡ ಗೌರವಿಸಲಾಯಿತು.

ರಜತೋತ್ಸವದ ಸಂಭ್ರಮದಲ್ಲಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶದ ಮೊದಲ ದಿನವಾದ ನಿನ್ನೆ(ಬುಧವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಅರಮನೆ ಆವರಣದಲ್ಲಿ ಈ ಗೌರವಾರ್ಪಣೆ ನಡೆಯಿತು.

Bengaluru Tech Summit ಎಲೆಕ್ಟ್ರಾನಿಕ್‌ ವಲಯದಲ್ಲಿ 36 ಸಾವಿರ ಕೋಟಿ ರೂ. ಹೂಡಿಕೆ: ಅಶ್ವತ್ಥನಾರಾಯಣ

ಸನ್ಮಾನಿಸಿ ಮಾತನಾಡಿದ ಬೊಮ್ಮಾಯಿ ಅವರು, "ವಿಜ್ಞಾನ ಮತ್ತು ತಂತ್ರಜ್ಞಾನಗಳ ರಾಜಧಾನಿಯಾಗಿರುವ ಬೆಂಗಳೂರು ಇಡೀ ಜಗತ್ತಿನ ಸಿಲಿಕಾನ್‌ ವ್ಯಾಲಿಯಾಗಿ ಬೆಳೆಯಬೇಕು. ನಮ್ಮ ಸಾಧನೆಯು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದ ಸಾಧನೆಯನ್ನು ಮೀರಿಸಬೇಕು. ಈ ಸಮಾವೇಶವು ಭವಿಷ್ಯದ ತಂತ್ರಜ್ಞಾನದ ಬೆಳವಣಿಗೆಗೆ ಸಂಬಂಧಿಸಿದಂತೆ 'ಬೆಂಗಳೂರು ಘೋಷಣೆ'ಯೊಂದಿಗೆ (ಬೆಂಗಳೂರು ಡಿಕ್ಲರೇಷನ್‌) ಹೊರಬರಬೇಕು" ಎಂದು ಆಶಿಸಿದರು.
ಬೆಂಗಳೂರು ಪ್ರತಿಭೆ, ಅವಕಾಶ ಮತ್ತು ಬೆಳವಣಿಗೆಗಳ ನಗರವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಡಿರುವ ಯಶಸ್ಸು ನಿರಂತರವಾಗಿ ಇರುವಂತೆ ಸರಕಾರ ನೋಡಿಕೊಳ್ಳಲಿದೆ. ಇನ್ನೊಂದೆಡೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ನವಭಾರತ ನಿರ್ಮಾಣದ ಗುರಿ ಇದೆ. ಉದ್ಯಮಿಗಳು ಇನ್ನು ಮುಂದೆ ಬೆಂಗಳೂರಿನಿಂದ ಆಚೆಗೆ ನೋಡಬೇಕು ಎಂದು ಅವರು ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಮಾತನಾಡಿದ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, "ಬೆಂಗಳೂರು ಏನನ್ನು ಚಿಂತಿಸುತ್ತದೋ ಅದು ಇಡೀ ಭಾರತವನ್ನೇ ಬದಲಿಸುತ್ತಿದೆ. ನಾಡಪ್ರಭು ಕೆಂಪೇಗೌಡರು ಕಟ್ಟಿದ ಈ ನಗರವು ಕಳೆದ ಐದು ಶತಮಾನಗಳಿಂದಲೂ ಪುರೋಗಾಮಿಯಾಗಿದೆ. ಈ ಸಂದೇಶವನ್ನು ಜಗತ್ತಿಗೆ ಸಾರುವ ಉದ್ದೇಶದಿಂದಲೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ 108 ಅಡಿಗಳ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ" ಎಂದರು.
ಬೆಂಗಳೂರಿನ ಯಶೋಗಾಥೆಯಲ್ಲಿ ಇಲ್ಲಿರುವ ಕಂಪನಿಗಳ ಪಾತ್ರ ಸ್ಫೂರ್ತಿದಾಯಕವಾಗಿದೆ. ಈ ಉದ್ದಿಮೆಗಳಿಂದಾಗಿ ಬೆಂಗಳೂರಿನ ಜತೆಗೆ ಇಡೀ ಕರ್ನಾಟಕ ಮತ್ತು ಭಾರತಕ್ಕೆ ಕೀರ್ತಿ ಬಂದಿದೆ. ಇಲ್ಲಿ ನೆಲೆ ನಿಂತಿರುವ ಉದ್ಯಮಶೀಲ ಸಾಹಸಿಗಳಿಂದಾಗಿ ರಾಜ್ಯವು ಐಟಿ, ಬಿಟಿ, ಸೆಮಿ ಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಹೀಗೆ ಹಲವು ಕ್ಷೇತ್ರಗಳ ರಾಜಧಾನಿಯಾಗಿ ವಿರಾಜಿಸುತ್ತಿದೆ ಎಂದು ಅವರು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಐಐಐಟಿ-ಬಿ ಸಂಸ್ಥಾಪಕ ಪ್ರೊ.ಷಡಗೋಪನ್, ಐಟಿ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌, ನಾಸ್ಕಾಂನ ವಿಶ್ವನಾಥನ್‌, ಉದ್ಯಮಿಗಳಾದ ಜಿ.ಎಸ್‌.ಕೃಷ್ಣನ್‌, ವಿವೇಕ್‌ ತ್ಯಾಗಿ, ಐಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್‌ ಉಪಸ್ಥಿತರಿದ್ದರು.

Bengaluru Tech Summit: 25ನೇ ವರ್ಷದ ಆವೃತ್ತಿಗೆ ವರ್ಚುವಲ್‌ ಆಗಿ ಚಾಲನೆ ನೀಡಿದ ಪ್ರಧಾನಿ ಮೋದಿ

ಸನ್ಮಾನಕ್ಕೆ ಪಾತ್ರವಾದ ಇನ್ಫೋಸಿಸ್‌, ವಿಪ್ರೋ 

ಬೆಂಗಳೂರು ತಂತ್ರಜ್ಞಾನ ಸಮಾವೇಶದ ರಜತೋತ್ಸವದ ಭಾಗವಾಗಿ ನಗರದಲ್ಲಿ 25 ವರ್ಷಗಳಿಂದಲೂ ಸಕ್ರಿಯವಾಗಿರುವ ಇನ್ಫೋಸಿಸ್‌, ವಿಪ್ರೋ ಸೇರಿದಂತೆ ಹಲವು ಕಂಪನಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಫಿಲಿಪ್ಸ್, ಬಾಶ್‌, ಟೆಕ್ಸಾಸ್‌ ಇನ್ಸ್ಟ್ರುಮೆಂಟ್ಸ್‌, ಫಿಲಿಪ್ಸ್, ಸೀಮನ್ಸ್, ನೋಕಿಯಾ, ಐಬಿಎಂ ಇಂಡಿಯಾ, ಟ್ಯಾಲಿ, ಕ್ವೆಸ್ಟ್ ಗ್ಲೋಬಲ್, ಎಂಫಸಿಸ್‌, ಹನಿವೆಲ್‌ ಇಂಡಿಯಾ, ಜಾನ್‌ ವೆಲ್ಶ್‌, ಸಾಸ್ಕೆನ್‌, ಟಿಸಿಎಸ್‌, ಟಾಟಾ ಎಲೆಕ್ಸಿ, ಸೊನಾಟಾ, ಕ್ಯಾಪಿಟಾಲ್ಯಾಂಡ್‌, ಐಐಐಟಿ-ಬೆಂಗಳೂರು, ಇಂಟೆಲ್‌, ಸಿನಾಪ್ಸಿಸ್‌, ಕ್ಯಾಡೆನ್ಸ್‌, ಅನಲಾಗ್‌ ಡಿವೈಸಸ್, ಅಕಾರ್ಡ್ ಸಾಫ್ಟ್‌ವೇರ್, ನೋವೋಜೈಮ್ಸ್, ನೋವೋ ನಾರ್ಡಿಸ್ಕ್, ಭಟ್‌ ಬಯೋಟೆಕ್‌, ಬಯೋಕಾನ್‌, ಕೆಮ್‌ವೆಲ್‌ ಬಯೋಫಾರ್ಮಾ ಮತ್ತು ಸಿಂಜಿನ್‌ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳು ಸನ್ಮಾನವನ್ನು ಸ್ವೀಕರಿಸಿದರು.

ಹಿರಿಯ ಐಟಿ ಕಾರ್ಯದರ್ಶಿಗಳಿಗೂ ಗೌರವ 

ರಾಜ್ಯ ಸರಕಾರದಲ್ಲಿ ಹಿಂದಿನ ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸಿ, ಐಟಿ ಕ್ರಾಂತಿಗೆ ಕೊಡುಗೆ ನೀಡಿರುವ ನಿವೃತ್ತ/ಹಿರಿಯ ಅಧಿಕಾರಿಗಳಾದ ವಿವೇಕ್‌ ಕುಲಕರ್ಣಿ, ಮಂಜುಳಾ, ಐ ಎಸ್‌ ಎನ್‌ ಪ್ರಸಾದ್‌, ಶ್ರೀವತ್ಸ ಕೃಷ್ಣ, ಗೌರವ್ ಗುಪ್ತ ಅವರನ್ನೂ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಜತೆಗೆ, ಬಿಟಿಎಸ್‌ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿರುವ ಪ್ರೊ.ಷಡಗೋಪನ್‌ ಮತ್ತು ಕರ್ನಾಟಕ ಡಿಜಿಟಲ್‌ ಎಕಾನಮಿ ಅಧ್ಯಕ್ಷ ಬಿ.ವಿ. ನಾಯ್ಡು ಅವರನ್ನೂ ಸನ್ಮಾನಿಸಲಾಯಿತು.