ನವದೆಹಲಿ(ಡಿ.07): ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರ ಹುದ್ದೆಗೆ ಡಾ. ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಅವರನ್ನು ನೇಮಕ ಮಾಡಲಾಗಿದೆ.

ಹೈದರಾಬಾದ್‌ನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಬ್ಯುಸಿನೆಸ್‌ನಲ್ಲಿ ಶಿಕ್ಷಕರಾಗಿರುವ ಸುಬ್ರಹ್ಮಣ್ಯನ್, ಅಮೆರಿಕಾದ ಚಿಕಾಗೋ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್ನಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಬ್ಯಾಂಕಿಂಗ್, ಸಾಂಸ್ಥಿಕ ಆಡಳಿತ ಮತ್ತು ಆರ್ಥಿಕ ನೀತಿಗಳ ನಿರೂಪಣೆಯಲ್ಲಿ ಪರಿಣಿತರಾಗಿರುವ ಸುಬ್ರಹ್ಮಣ್ಯನ್, ದೇಶದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಅವರಿಂದ ತೆರವಾದ ಸ್ಥಾನದ ಉಸ್ತುವಾರಿ ವಹಿಸಲಿದ್ದಾರೆ. 

ಅರವಿಂದ್ ಅವರು ಇದೇ ಜೂನ್ 20ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದರು. ಕಳೆದ 5 ತಿಂಗಳಿನಿಂದ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆ ಖಾಲಿ ಇದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಲವು ಬಾರಿ ಟೀಕೆಗಳು ಕೇಳಿ ಬಂದಿದ್ದವು.