ತಿಮ್ಮಪ್ಪಂಗೆ ಬೇಕಂತೆ ನಂದಿನಿ ತುಪ್ಪ: ಟಿಟಿಡಿ ಅಂತು ಬೇಗ ಕಳಸ್ರಪ್ಪ!
ನಂಗೆ ನಂದಿನಿ ತುಪ್ಪದ ಲಡ್ಡು ಬೇಕೆಂದ ತಿಮ್ಮಪ್ಪ| ತಿರುಪತಿ ದೇವಸ್ಥಾನಕ್ಕೆ ಕೆಎಂಎಫ್ ತುಪ್ಪ| ನಂದಿನಿ ತುಪ್ಪಕ್ಕೆ ಬೇಡಿಕೆ ಇಟ್ಟ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ| ಈ ಹಿಂದೆ ಮಹಾರಾಷ್ಟ್ರಕ್ಕೆ ನೀಡಲಾಗಿದ್ದ ಒಪ್ಪಂದ| ಮತ್ತೆ ಕೆಎಂಎಫ್ ಜೊತೆ ಒಪ್ಪಂದ ಮಾಡಿಕೊಂಡ ಟಿಟಿಡಿ
ತಿರುಪತಿ(ಫೆ.14): ವಿಶ್ವ ವಿಖ್ಯಾತ ತಿರುಪತಿ ತಿಮ್ಮಪ್ಪ ದೇವಸ್ಥಾನದ ಪ್ರಸಾದ ದೈವೀ ಶಕ್ತಿಯ ಪ್ರತೀಕ. ತಿರುಪತಿ ಲಡ್ಡುಗೆ ಕರ್ನಾಟಕದ ನಂದಿನಿ ತುಪ್ಪ ಬಳಕೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಕಳೆದ 20 ವರ್ಷಗಳಿಂದ ಸತತವಾಗಿ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಗೆ ತುಪ್ಪ ರಫ್ತು ಮಾಡುತ್ತಿದ್ದ ಕೆಎಂಎಫ್ ಗೆ ಕಳೆದ ಬಾರಿ ಟಿಟಿಡಿ ಶಾಕ್ ನೀಡಿತ್ತು. ನಂದಿನಿ ತುಪ್ಪದ ಬದಲಾಗಿ ಮಹಾರಾಷ್ಟ್ರದಿಂದ ತುಪ್ಪ ತರಿಸುವ ನಿರ್ಧಾರಕ್ಕೆ ಟಿಟಿಡಿ ಬಂದಿತ್ತು.
ಆದರೆ ಇದೀಗ ಮತ್ತೆ ಕೆಎಂಎಫ್ ನತ್ತ ಮುಖ ಮಾಡಿರುವ ಟಿಟಿಡಿ, ಲಡ್ಡು ತಯಾರಿಕೆಗೆ ನಂದಿನಿ ತುಪ್ಪವನ್ನೇ ಬಳಸಲು ನಿರ್ಧರಿಸಿದೆ. ಅದರಂತೆ ವಿಶ್ವ ವಿಖ್ಯಾತ ತಿರುಪತಿಯಲ್ಲಿ ಲಡ್ಡು ಪ್ರಸಾದ ತಯಾರಿಸಲು ಕೆಎಂಎಫ್ ತುಪ್ಪ ಪೂರೈಕೆಗೆ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಆದೇಶ ನೀಡಿದೆ.
ಈ ಮೂಲಕ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಬಳಕೆಯಾಗಲಿದ್ದು ಲಕ್ಷಾಂತರ ಭಕ್ತರು ಪ್ರಸಾದವಾಗಿ ಸ್ವೀಕರಿಸುವ ಲಡ್ಡುಗೆ ಕರ್ನಾಟಕದ ಕೆಎಂಎಫ್ ನಂದಿನಿ ತುಪ್ಪ ಬಳಕೆ ಮಾಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ.
ಒಟ್ಟು 14 ಲಕ್ಷ ಕೆ.ಜಿ. ನಂದಿನಿ ತುಪ್ಪ ಸರಬರಾಜು ಮಾಡಲು ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯಿಂದ ಆದೇಶ ಪಡೆಯಲಾಗಿದ್ದು, ಶೀಘ್ರದಲ್ಲೇ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಂಎಫ್ ತಿಳಿಸಿದೆ.
ಕೆಎಂಎಫ್ ದಿನವೊಂದಕ್ಕೆ 74 ಲಕ್ಷ ಲೀ. ಹಾಲು ಉತ್ಪಾದನೆ ಮಾಡುತ್ತಿದ್ದು, ರಾಜ್ಯದ ರೈತರಿಗೆ ದಿನಕ್ಕೆ 18 ಕೋಟಿ ರೂ. ಸಂದಾಯ ಮಾಡುತ್ತಿದೆ.